ಮಂಗಳವಾರ, ಮೇ 24, 2022
30 °C

ತೆಂಗಿಗೆ ಹೊಸ ರೋಗ: ಆತಂಕದಲ್ಲಿ ರೈತ ಸಮೂಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ತಾಲ್ಲೂಕಿನ ಜೀವಾಳವಾಗಿರುವ ತೆಂಗಿಗೆ ಒಂದಿಲ್ಲೊಂದು ಕಾಟ ಎದುರಾಗುತ್ತಲೇ ಇದೆ. ದೊಡ್ಡಮಾರ್ಪನಹಳ್ಳಿ ಬಳಿ ತೋಟದಲ್ಲಿ ಶಂಕಾಸ್ಪದ ರೋಗ ಕಾಣಿಸಿದೆ. ಗಾಯದ ಮೇಲೆ ಬರೆ ಎಳೆದಂತೆ ರೈತರು ಹೈರಾಣಾಗಿದ್ದಾರೆ.ಮೂರು ದಶಕಗಳ ಹಿಂದೆ ಕನಿಷ್ಠ ನೂರು ತೆಂಗಿನ ಗಿಡ ನೆಟ್ಟು ಫಲಕ್ಕೆ ಬಂತೆಂದರೆ ಆ ರೈತ ಕುಟುಂಬ ನಿಶ್ಚಿಂತೆಯ ಬದುಕು ಸಾಗಿಸುತಿತ್ತು. ನೀರಾವರಿ ಇಲ್ಲದ ತೋಟಗಳೇ ಹೆಚ್ಚಿದ್ದ ಆ ಕಾಲದಲ್ಲಿ ಕಲ್ಪವೃಕ್ಷಕ್ಕೆ ರೋಗ, ಕೀಟ ಕಾಣಿಸಿದ್ದು ಕಡಿಮೆ. ಹಾಗಾಗಿ ತೆಂಗಿನ ತೋಟವಿದ್ದ ರೈತರು ಹಿಂದೆ ಒಂದಷ್ಟು ನೆಮ್ಮದಿಯಿಂದ ಇದ್ದರು.ಆದರೆ ಕಾಲಕ್ರಮೇಣ ಒಂದಿಲ್ಲೊಂದು ಕೀಟ, ಕಾಯಿಲೆಗೆ ಸಿಲುಕುತ್ತಿರುವ ತೆಂಗು ಬೆಳೆ ರೈತರನ್ನು ಕಂಗೆಡಿಸಿದೆ. ಸುಮಾರು 15 ವರ್ಷಗಳ ಹಿಂದೆ ತಾಲ್ಲೂಕಿನ ಒಂದಷ್ಟು ಭಾಗದ ತೆಂಗನ್ನು ಕಪ್ಪು ತಲೆ ಹುಳು ಕಾಡಿತು. ಆ ತೋಟಗಳು ಚೇತರಿಸಿಕೊಳ್ಳಲು ಕೆಲ ವರ್ಷಗಳೇ ಹಿಡಿದವು. ಆ ಕೀಟ ತೊಲಗಿತೆನ್ನುವಷ್ಟರಲ್ಲಿ ನುಸಿ ಆವರಿಸಿ ಕಲ್ಪವೃಕ್ಷ ನಂಬಿದ ರೈತರು ಕಂಗೆಟ್ಟಿದ್ದರು.ನುಸಿ ನಿಯಂತ್ರಣ ನೆಪದಲ್ಲಿ ನೀಡಿದ ಔಷಧದಿಂದ ಪ್ರಯೋಜನವಾಗಿರಲಿಲ್ಲ. ಈ ಬಾಧೆ ಕಾಲ ಕ್ರಮೇಣ ಸ್ವಾಭಾವಿಕವಾಗಿ ನಿಯಂತ್ರಣಕ್ಕೆ ಬಂದಿತ್ತು. ರೈತರು ನಿಟ್ಟುಸಿರು ಬಿಡುವಷ್ಟರಲ್ಲಿ ತೆಂಗಿಗೆ ರಸ ಸೋರುವ ರೋಗ ವ್ಯಾಪಿಸಿತು. ಸಮರ್ಥ ಔಷಧೋಪಚಾರ ಕಾಣದೆ ರೈತರು ಕೈಚೆಲ್ಲಿದ್ದರು.ಸಾಲದೆಂಬಂತೆ ತೆಂಗಿನ ಗಿಡ ಮತ್ತು ಮರಗಳ ಮೃದು ಕಾಂಡ ತಿಂದು ಇಡೀ ಮರವನ್ನೇ ಕೊಲ್ಲುವ ಕೆಂಪು ಮೂತಿ ಹುಳುಗಳ ಹಾವಳಿಯಿಂದ ವರ್ಷಕ್ಕೆ ನೂರಾರು ಮರಗಳು ಬಲಿಯಾಗುತ್ತಿವೆ. ಎರಡು ವರ್ಷಗಳ ಹಿಂದೆ ತಾಲ್ಲೂಕಿನ ಒಂದಷ್ಟು ಭಾಗದ ತೆಂಗಿಗೆ ಮತ್ತೆ ಕಪ್ಪು ತಲೆ ಹುಳು ಕಾಟ ಆವರಿಸಿ ಗರಿಗಳು ಅಸ್ಥಿ ಪಂಜರದಂತಾಗಿವೆ. ಅದಿನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಕಪ್ಪು ತಲೆ ಹುಳು ನಿಯಂತ್ರಿಸಲು ತೋಟಗಾರಿಕೆ ಇಲಾಖೆಯಿಂದ ಬೇವಿನ ಔಷಧ ಮತ್ತು ಹಿಂಡಿ ನೀಡಿದರೂ ಅಷ್ಟೇನು ಪರಿಣಾಮ ಬೀರುತ್ತಿಲ್ಲ ಎಂದು ರೈತರು ದೂರುತ್ತಾರೆ.ಒಂದಿಲ್ಲೊಂದು ರೋಗ, ಕೀಟ ಬಾಧೆಯಿಂದ ತೆಂಗು ಅಪಾಯ ಎದುರಿಸುತ್ತಿದ್ದರೆ ಅಂತರ್ಜಲ ಬತ್ತಿ, ನೀರಿಲ್ಲದೆ ಒಣಗುವ ಮರಗಳ ಸಂಖ್ಯೆಯೇನು ಕಡಿಮೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ದೊಡ್ಡಮಾರ್ಪನಹಳ್ಳಿ ಬಳಿ ಬಸವರಾಜು ಎಂಬುವರ ನೀರಾವರಿ ತೋಟದಲ್ಲೇ ಈಚೆಗೆ ಕಾಣಿಸಿಕೊಂಡ ರೋಗ 200 ಮರಗಳಲ್ಲಿ 25ಕ್ಕೂ ಹೆಚ್ಚನ್ನು ಮರಗಳನ್ನು ತೆಗೆದುಕೊಂಡಿದೆ. ಇದ್ದಕ್ಕಿದ್ದಂತೆ ಗರಿಗಳು ಇಳಿ ಬಿದ್ದು, ಮರ ಸೊರಗಿ ಸುಳಿ ಒಣಗುವ ರೋಗದಿಂದ ಕಳವಳಗೊಂಡ ರೈತರು ತೋಟಗಾರಿಕೆ ಇಲಾಖೆ ಗಮನಕ್ಕೆ ತಂದಿದ್ದರು.ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕುಮಾರಸ್ವಾಮಿ, ಈ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸಿ ರೋಗ ನಿಯಂತ್ರಣಕ್ಕೆ ಸಹಕರಿಸುವಂತೆ ಕಾಸರಗೋಡು ತೆಂಗು ವಿಜ್ಞಾನ ಕೇಂದ್ರಕ್ಕೆ ಪತ್ರ ಬರೆದಿದ್ದರು.ಆ ಕೇಂದ್ರದ ವಿಜ್ಞಾನಿ ಡಾ.ಮಹೇಶ್ ನಿರ್ದೇಶನದ ಮೇರೆಗೆ ಈಚೆಗೆ ಅರಸೀಕೆರೆ ತೆಂಗು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಆ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೇಲ್ನೋಟಕ್ಕೆ ಕಾಂಡದ ರಸ ಸೋರುವ ಮತ್ತು ಅಣಬೆ ರೋಗದಿಂದ ಆ ಮರ ಒಣಗುತ್ತಿವೆ ಎಂದು ಆ ವಿಜ್ಞಾನಿಗಳು ತಿಳಿಸಿ ಹೋಗಿದ್ದಾರೆ.ರೋಗಕ್ಕೆ ಹಿಂದೆ ಸೂಚಿಸಿದ್ದ ಔಷಧಗಳ ಜೊತೆಗೆ ಬೇವಿನ ಮೂಲದ ಔಷಧ ಮತ್ತು ಹಿಂಡಿ ಶಿಫಾರಸು ಮಾಡಿದ್ದಾರೆ. ಬವಸರಾಜು ಅವರ ತೋಟದ ರೋಗ ಕಂಡ ಸುತ್ತಮುತ್ತಲಿನ ರೈತರೂ ಕಳವಳಕ್ಕೀಡಾಗಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.