ಗುರುವಾರ , ಮೇ 13, 2021
16 °C

ತೆರಿಗೆ ಇಲಾಖೆ ಮುಖ್ಯ ಆಯುಕ್ತರಿಗೆ ಸಮನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿವೃತ್ತ ಕೆಎಎಸ್ ಅಧಿಕಾರಿ ಎಚ್.ಡಿ. ಬಾಲಕೃಷ್ಣೇಗೌಡ ಅವರ ವಿರುದ್ಧ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಎರಡನೆಯ ಮುಖ್ಯ ಆಯುಕ್ತರಿಗೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಬುಧವಾರ ಸಮನ್ಸ್ ಜಾರಿ ಮಾಡಿದೆ.ಬಾಲಕೃಷ್ಣೇಗೌಡ ಅವರ ಆದಾಯ ತೆರಿಗೆ `ರಿಟರ್ನ್ಸ್~, ಅವರ ಮಾಲೀಕತ್ವದ ಕಂಪೆನಿಗಳ ಆದಾಯ ತೆರಿಗೆ ಹಾಗೂ ಅವರ ಶೈಕ್ಷಣಿಕ ಸಂಸ್ಥೆಗಳ ಆದಾಯ ತೆರಿಗೆ ಮಾಹಿತಿಯನ್ನು ಇಲಾಖೆ ನೀಡಿಲ್ಲ ಎಂದು ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನ ವಿ. ರಾಜು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಇದೇ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಒಂಬತ್ತು ಬಾರಿ ಮನವಿ ಮಾಡಿಕೊಂಡಿದ್ದರೂ ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿಲ್ಲ, ಇದರಿಂದ ತನಿಖೆ ಮುಂದುವರಿಯುತ್ತಿಲ್ಲ ಎಂದು ರಾಜು ಅವರು ನ್ಯಾಯಾಲಯಕ್ಕೆ ತಿಳಿಸಿದರು.ಬಾಲಕೃಷ್ಣೇಗೌಡ ಅವರ 2004ರಿಂದ 2011ರವರೆಗಿನ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಇಲಾಖೆ ನೀಡಿದೆ. ಆದರೆ 1984ರಿಂದ 2004ರವರೆಗಿನ ಮಾಹಿತಿಯನ್ನು ನೀಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಆದಾಯ ತೆರಿಗೆ ಇಲಾಖೆಯ ಎರಡನೆಯ ಮುಖ್ಯ ಆಯುಕ್ತರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ನಾಲ್ಕನೆಯ ಆದಾಯ ತೆರಿಗೆ ಆಯುಕ್ತ ಡಿ.ಸಿ. ಶ್ರೀಧರ ಅವರು ಅಗತ್ಯ ಮಾಹಿತಿ ಒದಗಿಸಲು 15 ದಿನಗಳ ಕಾಲಾವಕಾಶ ಕೋರಿದರು.ವಿಚಾರಣೆಯನ್ನು ಮೇ 22ಕ್ಕೆ ಮುಂದೂಡಲಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರ ಪುತ್ರರಾದ ಬಾಲಕೃಷ್ಣೇಗೌಡ ತಮ್ಮ ಘೋಷಿತ ಆದಾಯ ಮೂಲಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದ ಕುರಿತ ವಿಚಾರಣೆ ಇದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.