ಬುಧವಾರ, ಜೂನ್ 23, 2021
29 °C

ತೆರಿಗೆ ಪಾವತಿಯಲ್ಲಿ ಚೆಕ್ ಬೌನ್ಸ್: ಕಠಿಣ ಕ್ರಮಕ್ಕೆ ಆಯುಕ್ತರ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಸ್ತಿ ತೆರಿಗೆ ಪಾವತಿಗಾಗಿ ಸಲ್ಲಿಸಿರುವ ಚೆಕ್ಕುಗಳು ನಗದಾಗದೇ ಇರುವ ಪ್ರಕರಣಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಮಂಗವಾರ ಅಧಿಕಾರಿಗಳಿಗೆ ಸೂಚಿಸಿದರು.ಆಸ್ತಿ ತೆರಿಗೆ ವಸೂಲಾತಿ ಮತ್ತು ವಿಶಿಷ್ಟ ಗುರುತಿನ ಸಂಖ್ಯೆ (ಪಿಐಡಿ) ವಿತರಣೆಗೆ ಸಂಬಂಧಿಸಿದಂತೆ ಆಗಿರುವ ಪ್ರಗತಿ ಪರಿಶೀಲಿಸಲು ಕರೆದಿದ್ದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, `ತಿರಸ್ಕೃತ ಚೆಕ್ಕುಗಳ ವಸೂಲಾತಿಗಾಗಿ ಸಂಬಂಧಪಟ್ಟ ಆಸ್ತಿ ಮಾಲೀಕರು ಅಥವಾ ಅನುಭವದಾರರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ~ ಎಂದು ನಿರ್ದೇಶನ ನೀಡಿದರು.`2011- 12ರ ಸಾಲಿನಲ್ಲಿ ರೂ 1500 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಇದೆ. ಈಗಾಗಲೇ ರೂ 1250 ಕೋಟಿ ಸಂಗ್ರಹವಾಗಿದೆ. ಈ ತಿಂಗಳ ಅಂತ್ಯದೊಳಗೆ ಆಸ್ತಿ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿ ಸಾಧನೆ ಮಾಡಲು ಕಾರ್ಯ ಯೋಜನೆ ರೂಪಿಸಬೇಕು~ ಎಂದು ಅವರು ಹೇಳಿದರು.`2012- 13ರ ಸಾಲಿನಲ್ಲಿ ಆಸ್ತಿ ತೆರಿಗೆ ವಸೂಲಾತಿ ಏಪ್ರಿಲ್ 1ರಿಂದ ಪ್ರಾರಂಭವಾಗುವುದರಿಂದ ಎಲ್ಲಾ ವಾರ್ಡ್‌ಗಳಲ್ಲಿನ ಸಂಪರ್ಕ ಕೇಂದ್ರಗಳಲ್ಲಿ ಬೇಕಾಗಿರುವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಾ ಆಸ್ತಿಗಳಿಗೆ ಹೊಸ ಪಿ.ಐ.ಡಿ. ಸಂಖ್ಯೆಗಳನ್ನು ಅಳವಡಿಸುವ ಬಗ್ಗೆ ಆಸ್ತಿ ಮಾಲೀಕರು ಮತ್ತು ಅನುಭವದಾರರಿಗೆ ಸೂಚನಾ ಪತ್ರಗಳನ್ನು ಜಾರಿ ಮಾಡುವ ಬಗ್ಗೆ ಸಿದ್ಧತೆ ಮಾಡಬೇಕು~ ಎಂದು ಹೇಳಿದರು.`ಮುಂದಿನ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆಯನ್ನು ಇಂಟರ್‌ನೆಟ್ ಮೂಲಕ ಇ- ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಹಾಗೂ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ತೆರಿಗೆ ಪಾವತಿ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು~ ಎಂದು ಅವರು ಸಲಹೆ ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.