ಸೋಮವಾರ, ಮೇ 10, 2021
26 °C

ತೆರೆಮರೆಯಲ್ಲೇ ಬಿರುಸಿನ ಪ್ರಚಾರ

ಪ್ರಜಾವಾಣಿ ವಾರ್ತೆ ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಇದೇ 29ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕ ಹಾಗೂ ಕೇಂದ್ರ ಘಟಕದ ಅಧ್ಯಕ್ಷ ಸ್ಥಾನದ ಚುನಾವಣಾ ಕಣ ರಂಗೇರುತ್ತಿದ್ದು, ಅಭ್ಯರ್ಥಿಗಳು ತೆರೆಮರೆಯಲ್ಲೇ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.ಕಳೆದ ಎರಡು ಅವಧಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ನಿಷ್ಠಿ ರುದ್ರಪ್ಪ, ಸತತ ಎರಡು ಬಾರಿ ಸೋಲು ಕಂಡಿರುವ ಅನ್ನಪೂರ್ಣ ಪ್ರಕಾಶನದ ಸಿರಿಗೇರಿ ಎರಿಸ್ವಾಮಿ, ಕೂಡ್ಲಿಗಿಯ ಬ್ಯಾಳಿ ವಿಜಯಕುಮಾರಗೌಡ, ಸಿರುಗುಪ್ಪದ ಬಂಗ್ಲೆ ಮಲ್ಲಿಕಾರ್ಜುನ, ಬಳ್ಳಾರಿಯ ಹಾವಿನಾಳ್ ವೀರಭದ್ರಪ್ಪ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.ಕಳೆದ ಬಾರಿಯ ಚುನಾವಣೆಯಲ್ಲಿದ್ದ ಮತದಾರರ ಸಂಖ್ಯೆಯ ಎರಡು ಪಟ್ಟು ಸಂಖ್ಯೆ ಈ ಬಾರಿ ಇದ್ದು, ಸದಸ್ಯತ್ವ ಅಭಿಯಾನದಲ್ಲಿ ಭಾಗಿಯಾಗಿದ್ದ ಕೆಲವು  ಸ್ಪರ್ಧಾಕಾಂಕ್ಷಿಗಳು ಅವೆಲ್ಲ `ತಮ್ಮ ಮತಗಳು~ ಎಂಬ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದಾರೆ.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆ, ಸಮಾರಂಭಗಳಿಗೆ ತಮ್ಮ ಬೆಂಬಲಿಗರೊಂದಿಗೆ ತೆರಳುತ್ತಿರುವ ಅಭ್ಯರ್ಥಿಗಳು, ಸಾಹಿತ್ಯಾಸಕ್ತರನ್ನು ಭೇಟಿ ಮಾಡಿ, ತಮಗೇ ಮತ ನೀಡುವಂತೆ ಕೋರುತ್ತಿದ್ದಾರಲ್ಲದೆ, ಚುನಾವಣೆಗೆ ಇನ್ನೂ ನಾಲ್ಕು ವಾರಗಳು ಬಾಕಿ ಇರುವಾಗಲೇ ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.ಒಟ್ಟು 5449 ಸದಸ್ಯರನ್ನು ಹೊಂದಿರುವ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಜಾತಿ ಹಾಗೂ ಸ್ಥಳೀಯ ನೆಲೆಯ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು ಮತ ಯಾಚಿಸುತ್ತಿರುವುದೂ ಕಂಡುಬಂದಿದೆ.ನಗರವೂ ಒಳಗೊಂಡಂತೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಿಸುವ ಕನಸಿನೊಂದಿಗೆ, ಎರಡು ಅವಧಿಯಲ್ಲಿ ಅಧಿಕ ಸಂಖ್ಯೆಯ ದತ್ತಿ ದಾನಿಗಳನ್ನು ಹುಡುಕಿ, ಅವರ ಸಹಾಯದಿಂದಲೇ ಸಾಹಿತ್ಯ ಗೋಷ್ಠಿ,  ಉಪನ್ಯಾಸ ಕಾರ್ಯಕ್ರಮ ಆಯೋಜಿಸಿರುವ ನಿಷ್ಠಿ ರುದ್ರಪ್ಪ ಹ್ಯಾಟ್ರಿಕ್ ಕನಸನ್ನೂ ಹೊಂದಿದ್ದಾರೆ. ಜಿಲ್ಲೆಯಲ್ಲಿ ಸಾಹಿತ್ಯಕ ವಾತಾವರಣ ಮುಂದುವರೆಯಲು ತನಗೇ ಮತ ನೀಡಬೇಕು ಎಂಬ ಮನವಿ ಮಾಡುತ್ತಿದ್ದಾರೆ.ಎರಡು ಅವಧಿಯಲ್ಲಿ ಕಡಿಮೆ ಅಂತರದಲ್ಲಿ ಸೋಲುಂಡಿದ್ದರೂ, ಜಿಲ್ಲೆಯಲ್ಲಿ  ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆ ನೆಲೆಯಲ್ಲಿ ಅನೇಕ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಿ, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸಾಹಿತ್ಯ ಕಾರ್ಯಕ್ರಮಗಳು ಮತ್ತಷ್ಟು ಹೆಚ್ಚಿಸುವ ಮೂಲಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿ ಜಿಲ್ಲೆಯಲ್ಲಿ ನಡೆಸಲು ಶ್ರಮಿಸುವುದಾಗಿ ಕಣದಲ್ಲಿರುವ ಮತ್ತೊಬ್ಬ ಪ್ರಮುಖ ಅಭ್ಯರ್ಥಿ ಸಿರಿಗೇರಿ ಎರಿಸ್ವಾಮಿ ಮನವಿ ಹೇಳುತ್ತಿದ್ದಾರೆ.ಮೇಲ್ನೋಟಕ್ಕೆ ಸದ್ಯ ನಿಷ್ಠಿ ರುದ್ರಪ್ಪ ಹಾಗೂ ಸಿರಿಗೇರಿ ಎರಿಸ್ವಾಮಿ ಅವರಿಬ್ಬರ ನಡುವೆಯೇ ತೀವ್ರ ಪೈಪೋಟಿ ನಡೆಯಲಿದೆ ಎಂಬ ಭಾವನೆ ಮೂಡಿದ್ದು, ನಗರ ನಿವಾಸಿಯಾಗಿರುವ ನಿಷ್ಠಿ ರುದ್ರಪ್ಪ ಬಳ್ಳಾರಿ ನಗರ ಪ್ರದೇಶದ ಮತಗಳನ್ನೇ (1816) ನೆಚ್ಚಿಕೊಂಡಿದ್ದರೆ, ಎರಿಸ್ವಾಮಿ ನಗರ ಹಾಗೂ ಗ್ರಾಮೀಣ ಭಾಗದ ಮತದಾರರ ನಿರ್ಣಯವೇ ಅಂತಿಮ ಎಂದು ನಂಬಿದ್ದಾರೆ.ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ, ಹೂವಿನ ಹಡಗಲಿ ಹಾಗೂ ಸಂಡೂರು ಭಾಗದಿಂದ ಬೇರಾರೂ ಸ್ಪರ್ಧಿಸದಿರುವುದರಿಂದ ಆ ಭಾಗದ ನಿರ್ಣಾಯಕ ಮತದಾರರ ಒಲವು ತನ್ನ ಪರ ಎಂದು ಕೂಡ್ಲಿಗಿಯ ಬ್ಯಾಳಿ ವಿಜಯಕುಮಾರಗೌಡ ನಂಬಿದ್ದಾರೆ.ಬಂಗ್ಲೆ ಮಲ್ಲಿಕಾರ್ಜುನ ಹಾಗೂ ಹಾವಿನಾಳ್ ವೀರಭದ್ರಪ್ಪ ಅವರೂ ಕನ್ನಡ ಸಾಹಿತ್ಯ ಸೇವೆಗೆ ಅವಕಾಶ ನೀಡಬೇಕು ಎಂದು ಕೋರುತ್ತಿದ್ದಾರೆ.ಈಗಾಗಲೇ ನಾಮಪತ್ರ ಸಲ್ಲಿಸಿರುವ ಐವರು ಅಭ್ಯರ್ಥಿಗಳ ಪೈಕಿ ಏಪ್ರಿಲ್ 5ರ ವೇಳೆಗೆ ಯಾರು ಚುನಾವಣಾ ಕಣದಿಂದ ಹಿಂದೆ ಸರಿಯಲಿದ್ದಾರೆ ಎಂಬುದೂ ಸದ್ಯದ ಕುತೂಹಲವಾಗಿದೆ.ಒಂದೊಮ್ಮೆ ಐವರೂ ಕಣದಲ್ಲಿ ಉಳಿದರೆ ಮತಗಳು ಹಂಚಿಹೋಗಲಿದ್ದು, ಯಾರೇ ಗೆದ್ದರೂ ಅತ್ಯಂತ ಕಡಿಮೆ ಅಂತರವೇ ಗತಿ ಎಂದು ಅಂದಾಜಿಸಲಾಗುತ್ತಿದೆ.ಕೇಂದ್ರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರ ಪರ, ವಿರೋಧದ ಬಗ್ಗೆ ಅಷ್ಟಾಗಿ ಆಸಕ್ತಿ ತಾಳದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಈಗಾಗಲೇ ಬಳ್ಳಾರಿಯೂ ಒಳಗೊಂಡಂತೆ ಜಿಲ್ಲೆಯ ವಿವಿಧೆಡೆ ಅಲ್ಲಲ್ಲಿ, ಮತದಾರರ ಗೌಪ್ಯ ಸಭೆ ನಡೆಸಿ ಛಾಪು ಮೂಡಿಸುತ್ತಿದ್ದಾರೆ.ಏಪ್ರಿಲ್ 29ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆಯೇ ಫಲಿತಾಂಶ ಹೊರಬೀಳಲಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂಬುದೇ ಸದ್ಯದ ಕುತೂಹಲವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.