ಭಾನುವಾರ, ಮೇ 22, 2022
21 °C

ತೆಲಂಗಾಣ ಬಂದ್: ಉತ್ತಮ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್/ನವದೆಹಲಿ (ಐಎಎನ್‌ಎಸ್/ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಕುರಿತು ಮಸೂದೆ ರಚಿಸಬೇಕು ಎಂದು ಒತ್ತಾಯಿಸಿ ‘ತೆಲಂಗಾಣ ಜಂಟಿ ಕ್ರಿಯಾ ಸಮಿತಿ’ ಕರೆ ನೀಡಿದ್ದ 48 ತಾಸುಗಳ ಅವಧಿಯ ‘ತೆಲಂಗಾಣ ಪ್ರದೇಶ ಬಂದ್’ ಮಂಗಳವಾರ ಆರಂಭವಾಯಿತು.ವಿವಿಧೆಡೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದ್ದು, ಹೈದರಾಬಾದ್‌ನಲ್ಲಿ ಭಾಗಶಃ ಸ್ಪಂದನೆ ವ್ಯಕ್ತವಾಯಿತು. ಹಲವು ಕಡೆಗಳಲ್ಲಿ ಶಾಲೆ-ಕಾಲೇಜುಗಳು, ವಾಣಿಜ್ಯ ಸಂಕೀರ್ಣ, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ವಾಹನಗಳು ಬಹುತೇಕ ನಿಶ್ಚಲಗೊಂಡಿದ್ದವು. ಸಿಕಂದರಾಬಾದ್ ರೈಲು ನಿಲ್ದಾಣ ಹಾಗೂ ಮಹಾತ್ಮಾಗಾಂಧಿ ಬಸ್ ನಿಲ್ದಾಣದಲ್ಲಿ  ಪ್ರಯಾಣಿಕರು ಪರದಾಡಬೇಕಾಗಿ ಬಂತು. ಹೋರಾಟಗಾರರು ಕೆಲವೆಡೆ ಬಸ್‌ಗಳು, ರೈಲುಗಳಿಗೆ ಹಾನಿ ಉಂಟುಮಾಡಿದ ಘಟನೆಗಳೂ ಸಂಭವಿಸಿವೆ.  ಈ ಮಧ್ಯೆ ಯಾವುದೇ ಅಹಿತಕರ ಘಟನೆಗಳಾಗದಂತೆ ಸಂಚಾರ ನಿರ್ಬಂಧ ಸೇರಿದಂತೆ ಪೊಲೀಸರು ಭದ್ರತಾ ಕ್ರಮ ಕೈಗೊಂಡಿದ್ದಾರೆ.ರ್ಯಾಲಿ: ತೆಲಂಗಾಂಣ ಪರ ಹೋರಾಟಗಾರರು ಮೇಡಕ್, ನಿಜಾಮಾಬಾದ್, ವಾರಂಗಲ್, ಕರೀಂ ನಗರ ಮುಂತಾದೆಡೆ ರ್ಯಾಲಿ ನಡೆಸಿದರು. ಬೈಕ್ ರ್ಯಾಲಿ ನಡೆಸಿದ ಟಿಆರ್‌ಎಸ್ ನಾಯಕ ಹರೀಶ್ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ಪಕ್ಷ, ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿವೆ.ನೌಕರರ ಬೆಂಬಲ: ತೆಲಂಗಾಣ ಪ್ರದೇಶದ ರಾಜ್ಯ ಸರ್ಕಾರಿ ನೌಕರರು ‘ಪ್ರತ್ಯೇಕ ರಾಜ್ಯ ಬೇಡಿಕೆ ಚಳವಳಿ’ಗೆ ಬೆಂಬಲ ಸೂಚಿಸಿ ಈಗಾಗಲೇ ಅಸಹಕಾರ ಮುಷ್ಕರ ನಡೆಸುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ‘ಸಿಂಗರೆನಿ ಕೋಲಿರಿಸ್’ ಕಲ್ಲಿದ್ದಲು ಕಾರ್ಖಾನೆ ಸ್ಥಗಿತಗೊಳಿಸಿ 70,000 ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.ಕಲಾಪ ಸ್ಥಗಿತ: ತೆಲಂಗಾಣ ಪ್ರತ್ಯೇಕ ರಚನೆ ಒತ್ತಾಯದಿಂದ ಆಂಧ್ರಪ್ರದೇಶ ವಿಧಾನಸಭೆ ಕಲಾಪ ಸತತ ಮೂರನೇ ದಿನವಾದ ಮಂಗಳವಾರವೂ ಸ್ಥಗಿತಗೊಂಡಿತು. ಲೋಕಸಭೆಯಲ್ಲೂ ಕೆಲವು ಸದಸ್ಯರು ಇದೇ ಬೇಡಿಕೆ ಇರಿಸಿದರು.ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಕುರಿತಂತೆ ಠರಾವು ಅಂಗೀಕರಿಸಬೇಕು ಎಂದು ಒತ್ತಾಯಿಸಿ ಶಾಸಕರು  ಕಲಾಪಕ್ಕೆ ಅಡಚಣೆ ಉಂಟುಮಾಡಿದ್ದರಿಂದ ಉಪಸಭಾಪತಿ ನದೇಂದಲ ಮನೋಹರ್ ಅವರು ಕಲಾಪವನ್ನು ಮುಂದೂಡಿದರು.ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿ ಮಗಿಯುತ್ತಿದ್ದಂತೆಯೇ ತೆಲಂಗಾಣ ಪ್ರದೇಶದ ಕಾಂಗ್ರೆಸ್ ಸಂಸದರಾದ ಪೊನ್ನಂ ಪ್ರಭಾಕರ, ಎಂ.ಜಗನ್ನಾಥ್ ಸೇರಿದಂತೆ ಸದಸ್ಯರು ಎದ್ದುನಿಂತು ತೆಲಂಗಾಣ ಕುರಿತು ಚರ್ಚೆಗೆ ಅವಕಾಶ ಕೋರಿದರು.ಇವರನ್ನು ಸಮಾಧಾನಪಡಿಸಲು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ಪ್ರಯತ್ನಿಸಿದರು. ಬೇಡಿಕೆ ಮುಂದಿಟ್ಟ ಸದಸ್ಯರನ್ನು ಪ್ರತಿಪಕ್ಷ ನಾಯಕಿ ಬಿಜೆಪಿಯ ಸುಷ್ಮ ಸ್ವರಾಜ್ ಬೆಂಬಲಿಸಿ, ‘ಪ್ರತ್ಯೇಕ ತೆಲಂಗಾಣ ರಚನೆಗೆ ಪೂರಕವಾದ ಮಸೂದೆಯನ್ನು  ಪ್ರಸಕ್ತ ಅಧಿವೇಶನದಲ್ಲೇ ರಚಿಸಬೇಕು’ ಎಂದು ಒತ್ತಾಯಿಸಿದರು.ಸ್ಪೀಕರ್ ಮೀರಾಕುಮಾರ್ ಅವರು ಸದಸ್ಯರಲ್ಲಿ ಒಬ್ಬರಿಗೆ ವಿಷಯ ಮಂಡಿಸಲು ಅವಕಾಶ ನೀಡಿದ ಬಳಿಕ ಗದ್ದಲ ಶಾಂತವಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.