ಸೋಮವಾರ, ಏಪ್ರಿಲ್ 12, 2021
29 °C
ಹೈ.ಕ ವಿಶೇಷ ಸ್ಥಾನಮಾನ - ಪ್ರಧಾನಿ ಜತೆ ಇಂದು ಶೆಟ್ಟರ್ ಭೇಟಿ

ತೆಲಂಗಾಣ ಮಾದರಿಗೆ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲಂಗಾಣ ಮಾದರಿಗೆ ಪಟ್ಟು

ಬಾಗಲಕೋಟೆ/ವಿಜಾಪುರ: ಹೈದರಾಬಾದ್- ಕರ್ನಾಟಕದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಜ್ಯದ ಆಕ್ಷೇಪವಿಲ್ಲ. ಆದರೆ, ಮಸೂದೆ ತೆಲಂಗಾಣ (371 ಡಿ) ಮಾದರಿಯಲ್ಲೇ ಇರಬೇಕು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸೋಮವಾರ ಪ್ರತಿಪಾದಿಸಿದ್ದಾರೆ.ಆಂಧ್ರಪ್ರದೇಶದ ತೆಲಂಗಾಣದ ಜನರಿಗೆ ಸ್ಥಳೀಯವಾಗಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸಿಗುತ್ತಿದೆ. ಅಭಿವೃದ್ಧಿ ಯೋಜನೆಗೂ ಕೇಂದ್ರದ ನೆರವು ದೊರೆಯುತ್ತಿದೆ. ಹೀಗಾಗಿ ಅದೇ ಮಾದರಿ ಹೈದರಾಬಾದ್- ಕರ್ನಾಟಕ ಭಾಗಕ್ಕೂ ಜಾರಿಯಾಗಬೇಕು ಎಂಬುದು ರಾಜ್ಯದ ನಿಲುವು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಯ ವಿವಿಧೆಡೆ ಸೋಮವಾರ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ತಿದ್ದುಪಡಿ ಮಸೂದೆ ಬಗ್ಗೆ ತಲೆದೋರಿರುವ ಗೊಂದಲ ಪರಿಹರಿಸಲು ಮಂಗಳವಾರ (ನ. 27) ದೆಹಲಿಯಲ್ಲಿ ಪ್ರಧಾನಿ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಮತ್ತು ಸಂಸತ್ತಿನ ಹಾಲಿ ಅಧಿವೇಶನದಲ್ಲೇ ಮಸೂದೆ ಮಂಡಿಸುವಂತೆ ಒತ್ತಡ ಹೇರುವುದಾಗಿ ಮುಖ್ಯಮಂತ್ರಿ ತಿಳಿಸಿದರು.ಪ್ರಧಾನಿ ಭೇಟಿ ಮುನ್ನ ಸಭೆ:  `ಪ್ರಧಾನಿ ಭೇಟಿಗೆ ಮುನ್ನ ದೆಹಲಿಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಆರು ಜಿಲ್ಲೆಗಳ ಉಸ್ತುವಾರಿ ಸಚಿವರು, ರಾಜ್ಯದ ಎಲ್ಲ ಸಂಸದರು ಮತ್ತು ರಾಜ್ಯದ ಕೇಂದ್ರ ಸಚಿವರ ಸಭೆ ನಡೆಯಲಿದೆ' ಎಂದು ಶೆಟ್ಟರ್ ಹೇಳಿದರು.ಬೆಂಬಲದ ಭರವಸೆ: ತಿದ್ದುಪಡಿ ಮಸೂದೆ ಅಂಗೀಕಾರದ ವಿಷಯವನ್ನು ಬಿಜೆಪಿ ಪ್ರತಿಷ್ಠೆ ಪ್ರಶ್ನೆಯಾಗಿ ಮಾಡಿಕೊಂಡಿಲ್ಲ.  ರಾಜ್ಯ ಸರ್ಕಾರದ ಸಲಹೆಯಂತೆ ಮಸೂದೆಯಲ್ಲಿ ಬದಲಾವಣೆ ಮಾಡಿ ಕೇಂದ್ರ ಸರ್ಕಾರ ಈಗಿನ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಿದರೆ ಬಿಜೆಪಿ ಬೆಂಬಲಿಸಲಿದೆ ಎಂದರು.

ನಿಲುವು ಬದಲಾಗಿಲ್ಲ

`ರಾಜ್ಯ ಸರ್ಕಾರದ ನಿಲುವು ಹೊಸದೇನೂ ಅಲ್ಲ. ತೆಲಂಗಾಣ ಮಾದರಿಯಲ್ಲೇ ಅನುಕೂಲ ಕಲ್ಪಿಸಬೇಕು ಎಂದು ಈ ಹಿಂದೆ ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಇದೀಗ ನಾವಾಗಿಯೇ ಕೇಂದ್ರಕ್ಕೆ ಪತ್ರ ಬರೆದಿಲ್ಲ. ಇವು ಸಂಸದೀಯ ಸ್ಥಾಯಿ ಸಮಿತಿ ಮಾಡಿದ ಸಲಹೆಗಳಾಗಿವೆ'.

-ಜಗದೀಶ ಶೆಟ್ಟರ್

`ರಾಜ್ಯ ಸರ್ಕಾರದ ವಿರೋಧದಿಂದ ಮಸೂದೆ ವಾಪಸಾತಿ'

ನವದೆಹಲಿ: ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನ ತಿದ್ದುಪಡಿ ಮಸೂದೆ ಕುರಿತು ಕರ್ನಾಟಕದ ಬಿಜೆಪಿ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದ ಕಾರಣ ಗೃಹ ವ್ಯವಹಾರಗಳ ಮೇಲಿನ ಸಂಸದೀಯ ಸ್ಥಾಯಿ ಸಮಿತಿ, ಈ ಮಸೂದೆ ವಾಪಸು ಪಡೆಯಲು ಶಿಫಾರಸು ಮಾಡಿತು ಎಂದು ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.`ಕರ್ನಾಟಕ ಸರ್ಕಾರಕ್ಕೆ ರಾಜ್ಯಪಾಲರ ಉಸ್ತುವಾರಿಯ ಅಭಿವೃದ್ಧಿ ಮಂಡಳಿ ಸ್ಥಾಪಿಸುವುದು ಬೇಕಿರಲಿಲ್ಲ. ಈ ಭಾಗದ ತ್ವರಿತ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಆರ್ಥಿಕ ಕೊಡುಗೆ ಹಾಗೂ ಯೋಜನಾ ಆಯೋಗದ ವಿಶೇಷ ಅನುದಾನಕ್ಕಾಗಿ ಸಹ ರಾಜ್ಯ ಸರ್ಕಾರ ಬೇಡಿಕೆ ಮುಂದಿಟ್ಟಿತ್ತು' ಎಂದು ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನಾಯ್ಡು ಹೇಳಿದ್ದಾರೆ.ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಸಹ ಕರ್ನಾಟಕ ಸರ್ಕಾರ ಒತ್ತಾಯಿಸಿತ್ತು. ಕೇಂದ್ರ ಸರ್ಕಾರ ವಾರದೊಳಗೆ ರಾಜ್ಯವನ್ನು ಸಂಪರ್ಕಿಸಿ ಹೊಸ ಮಸೂದೆ ಮಂಡಿಸಬೇಕು ಎಂದೂ ನಾಯ್ಡು ಹೇಳಿದರು.ಕೇಂದ್ರ ಸರ್ಕಾರ ಇಚ್ಛಿಸಿದಲ್ಲಿ ಅತಿ ಶೀಘ್ರವಾಗಿ ಕೆಲಸ ಮಾಡಬಲ್ಲದು ಎಂದು ಹೇಳಿರುವ ನಾಯ್ಡು, ತಮಿಳುನಾಡಿನ ಉದಾಹರಣೆ ನೀಡಿದರು. ತಮಿಳುನಾಡು ಈ ಹಿಂದೆ ವಿಧಾನಮಂಡಲದಲ್ಲಿ ಎರಡು ಸದನಗಳು ಇರಬೇಕು ಎಂಬ ಪ್ರಸ್ತಾಪ ಸಲ್ಲಿಸಿದ್ದಾಗ 2010ರ ವೆುೀ 4ರಂದು ಕೇಂದ್ರ ಸಂಪುಟ ಅದಕ್ಕೆ ಅನುಮತಿ ನೀಡಿತು. ಎರಡೇ ದಿನಗಳಲ್ಲಿ ಉಭಯ ಸದನಗಳು ಇದಕ್ಕೆ ಸಂಬಂಧಿಸಿದ ಮಸೂದೆ ಅಂಗೀಕರಿಸಿದವು. ವಾರದೊಳಗೆ ರಾಷ್ಟ್ರಪತಿ ಅಂಕಿತ ಬಿದ್ದು, ಮೇ 18ರಂದು ಅಧಿಸೂಚನೆ ಹೊರಡಿಸಲಾಗಿತ್ತು ಎಂದು ನೆನಪಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.