ಗುರುವಾರ , ಜನವರಿ 23, 2020
23 °C
ಡಿಸೆಂಬರ್ 3ರಂದು -ವಿಶ್ವ ಅಂಗವಿಕಲರ ದಿನಾಚರಣೆ

ತೆವಳುವ ಜೀವಕ್ಕೆ ದುಡಿದು ಬದುಕುವ ಆತ್ಮವಿಶ್ವಾಸ

ಪ್ರಜಾವಾಣಿ ವಾರ್ತೆ/ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಅವರ ದೇಹದ ಅಂಗಾಂಗವಷ್ಟೇ ವಿಕಲಗೊಂಡಿದೆ. ಉಳಿದಂತೆ ಮನಸ್ಸು, ಬುದ್ಧಿ ಎಲ್ಲವೂ ಬಲಿಷ್ಠವಾಗಿವೆ. ‘ಹುಲ್ಲು ಕಡ್ಡಿಯಷ್ಟು’ ಆಸರೆ ಸಿಕ್ಕರೂ ಜಗತ್ತನ್ನೇ ಗೆಲ್ಲುವಂತಹ ಆತ್ಮವಿಶ್ವಾಸ ಅವರದು. ಅಂಥದ್ದೊಂದು ಸಂಕಲ್ಪದೊಂದಿಗೆ ನಿರಂತರ ಪ್ರಯತ್ನ, ಶ್ರಮ, ದುಡಿಮೆಯೊಂದಿಗೆ  ಅವರು ಪುಟ್ಟ ನೆರವಿಗಾಗಿ ಕಾದಿದ್ದಾರೆ…!ಅವರ ಹೆಸರು ಶರಣಪ್ಪ. ಬ್ಯಾಲಾಳು ಸಮೀಪದ ಕಬ್ಬಿನಕೆರೆ ಗೊಲ್ಲರಹಟ್ಟಿ. ತಂದೆ ಇಲ್ಲ. ತಾಯಿ, ಇಬ್ಬರು ಅಣ್ಣ ಇದ್ದಾರೆ. ಎರಡನೇ ಅಣ್ಣ- ಅತ್ತಿಗೆ, ತಾಯಿ ಜೊತೆ ವಾಸ.  ಕುಟುಂಬದಲ್ಲೇ ಇವರು ಕಿರಿಯವರು. ಸಾಮಾನ್ಯವಾಗಿ ಹೆತ್ತವರಿಗೆ ‘ಕಿರಿ ಮಗ ಕಿವಿ ಕಿತ್ತರೂ ಪ್ರೀತಿ’ ಎನ್ನುವ ಮಾತಿದೆ. ಆದರೆ ಶರಣಪ್ಪ ವಿಷಯದಲ್ಲಿ ಹಾಗಾಗಲಿಲ್ಲ. ಏಕೆಂದರೆ ಆತ ಅಂಗವಿಕಲ. ಹುಟ್ಟಿದಾಗಿನಿಂದಲೇ ಕಾಲು, ಸೊಂಟ ಕಳೆದುಕೊಂಡಿದ್ದಾರೆ. ಹೀಗಾಗಿ ತೆವಳುತ್ತಲೇ 26 ವಸಂತಗಳನ್ನು ಕಳೆದಿದ್ದಾರೆ. ಜೀವನಕ್ಕಾಗಿ ತೆವಳಿದ ದೂರ ಲೆಕ್ಕಕ್ಕಿಲ್ಲ !ವಿದ್ಯಾಭ್ಯಾಸ ಮೊಟಕು, ದುಡಿಮೆಯ ಬದುಕು: ಅಂಗವೈಕಲ್ಯವನ್ನು ಎಂದೂ ಬೆಳವಣಿಗೆಗೆ ನೆಪವಾಗಿ ಬಳಸಿಕೊಳ್ಳದ ಶರಣಪ್ಪ, ಕಷ್ಟ ಪಟ್ಟು ಒಂಬತ್ತನೇ ತರಗತಿವರೆಗೆ ಓದಿದ್ದಾರೆ. ಮನೆಯಲ್ಲಿ ಸಹಕಾರ ದೊರೆಯದ ಕಾರಣ ಶಿಕ್ಷಣ ಮೊಟಕು ಗೊಂಡಿದೆ. 16-ನೇ ವಯಸ್ಸಿನಿಂದಲೇ  ದುಡಿಮೆಯತ್ತ ಹೆಜ್ಜೆ ಹಾಕಿದ್ದಾರೆ ಶರಣಪ್ಪ.‘ಕಾಲು, ಸೊಂಟವೇ ಇಲ್ಲದ ಇವನು, ಏನು ಮಹಾ ದುಡಿದಾನು’ ಎಂದು ಹಗುರವಾಗಿ ಮಾತಾಡಬೇಡಿ. ಶರಣಪ್ಪ, ಅಂತಿಂಥ ಗಂಡಲ್ಲ. ತೆಂಗು, ಪಪ್ಪಾಯ ತೋಟಗಳನ್ನು ಕಾಂಟ್ರಾಕ್ಟ್ ತೆಗೆದುಕೊಂಡು ತಳ್ಳುಗಾಡಿ ಮೇಲೆ ಇಟ್ಟುಕೊಂಡು ವ್ಯಾಪಾರ ಮಾಡಿದ್ದಾರೆ. ವ್ಯಾಪಾರದಲ್ಲಿ ಚಾಣಾಕ್ಷ. ಲೆಕ್ಕಚಾರದಲ್ಲಿ ಬಲೇ ಚುರುಕು ಎನ್ನುತ್ತಾರೆ ಹತ್ತಿ ಗಿರಣಿಯಲ್ಲಿ ಶರಣಪ್ಪನ ಜೊತೆ ದುಡಿಯುವ ಗೆಳೆಯ ಶಾಂತಕುಮಾರ್.ತೆವಳಿಕೊಂಡೇ  ಕಿ.ಮೀಗಟ್ಟಲೆ ನಡಿಗೆ: ವ್ಯಾಪಾರ – ವ್ಯವಹಾರ ಕೈ ಹಿಡಿಯದಿದ್ದಾಗ, ಚಿತ್ರದುರ್ಗದ ಹತ್ತಿ ಗಿರಿಣಿಯೊಂದರಲ್ಲಿ ಶರಣಪ್ಪ ಕೆಲಸ ಮಾಡುತ್ತಾರೆ. ಬೆಳಿಗ್ಗೆ 9 ಗಂಟೆಗೆ ಮನೆ ಬಿಟ್ಟು ಕಬ್ಬಿನಗೆರೆ ಗೊಲ್ಲರಹಟ್ಟಿಯಿಂದ ರಾ.ಹೆ. 4 ರವರೆಗೆ ಒಂದೂವರೆ ಕಿ.ಮೀ ತೆವಳಿಕೊಂಡೇ ಬರುತ್ತಾರೆ. ಅಲ್ಲಿಂದ ಆಟೋ ಹತ್ತಿ ನಗರದ ಜೆಎಂಐಟಿ ಸರ್ಕಲ್ ನಲ್ಲಿ ಇಳಿದು, ಮತ್ತೆ ಮುಕ್ಕಾಲು ಕಿ.ಮೀ ಟಾರ್ ರಸ್ತೆಯಲ್ಲೇ ತೆವಳಿ­­ಕೊಂಡು ಬಂದು ಹತ್ತಿಗಿರಣಿ ತಲುಪುತ್ತಾರೆ. ಹತ್ತಿ ಸಂಸ್ಕರಣಾ ಪೈಪ್ ಮೇಲೆ ಕುಳಿತು 8-–10 ತಾಸು ಕೆಲಸ, ಕೊಳವೆಗೆ ಹತ್ತಿ ತುಂಬುತ್ತಾರೆ. ಸಂಜೆ ಅಥವಾ ರಾತ್ರಿ ಅಷ್ಟೇ ದೂರ ತೆವಳಿಕೊಂಡು, ಬಸ್ಸು ಅಥವಾ ಆಟೊ ಹತ್ತಿ ಊರು ಸೇರುತ್ತಾರೆ. ಒಂದೂವರೆ ವರ್ಷದಿಂದ ಹೀಗೆ ಬದುಕು ಸಾಗಿಸುತ್ತಿದ್ದಾರೆ.‘ಇಷ್ಟು ದೂರ ನಡೆದಾಡುತ್ತೀಯಲ್ಲಾ, ನಿನಗೆ ಶ್ರಮವಾಗುವುದಿಲ್ಲವೇನಪ್ಪಾ’ ಎಂದು ಯಾರಾದರೂ ಅನುಕಂಪದ ಮಾತನಾಡಿದರೆ, ಕಣ್ಣುಗಳನ್ನು ಮಿಟಿಕಿಸುತ್ತಾ, ‘ಹಂಗೇನಿಲ್ಲ ಬಿಡಿ ಸಾ. ನಂಗೆ ದುಡಿಬೇಕು ಅನ್ನೋ ಹಂಬಲ. ಯಾವನ್ ಹಂಗಿನಾಗೂ ಇರ್ ಬಾರ್ದು ಅಂದ್ಕೊಂಡಿದ್ದೀನಿ. ಅದಕ್ಕೆ ನಾನು ಏನ್ಬೇಕಾದ್ರೂ ಕೆಲಸ ಮಾಡ್ತೀನಿ ಸರ್’ ಎನ್ನುತ್ತಾರೆ.  ‘ನನ್ನದು ಕಾಲು, ಸೊಂಟ ಮಾತ್ರ ಸ್ವಾಧೀನ ಇಲ್ಲ ಅಷ್ಟೇ. ತೋಳಾಗೆ ಶಕ್ತಿ ಐತೆ. ಮನಸ್ಸು ಗಟ್ಟಿಯಾಗೈತೆ. ನನಗೊಂದು ಮೂರು ಚಕ್ರದ ಮೋಟಾರ್ ಸೈಕಲ್ ಕೊಡ್ಸಿ ನೋಡಿ, ನಮ್ಮಂಥವರೂ ಹೇಗೆ ಬದುಕಬಹುದು ಅಂತಾ  ತೋರಿಸ್ತೀನಿ…’ ಎಂದು ಸವಾಲಿನ ಮಾತನಾಡುತ್ತಾರೆ ಶರಣಪ್ಪ.ದೊರಕದ ಸರ್ಕಾರದ ಸೌಲಭ್ಯ: ಸದ್ಯ ಶರಣಪ್ಪನಿಗೆ ಸರ್ಕಾರ ₨400 ಮಾಸಾಶನ ನೀಡುತ್ತಿದೆ. ಉಳಿದಂತೆ ಯಾವ ಸೌಲಭ್ಯಗಳು ಇಲ್ಲ. ಸರ್ಕಾರದಿಂದ ಸೌಲಭ್ಯ ಕೊಡಿಸುತ್ತೇನೆಂದು ಹೇಳಿ ಹಣ ಪೀಕಿಕೊಂಡು ಹೋದ ಅನೇಕ ಅಂಗವಿಕಲ ಗೆಳೆಯರು, ಕೆಲವು ದಲ್ಲಾಳಿಗಳು (ಮೀಡಿಯೇಟರ್ಸ್) ಇವರಿಗೆ ಮೋಸ ಮಾಡಿದ್ದಾರೆ. ‘ನನಗೆ ಸರ್ಕಾರದ ಸೌಲಭ್ಯ ಪಡೆಯುವುದು ಗೊತ್ತಿಲ್ಲ. ಅಂಗವಿಕಲರ ಸಂಘದಲ್ಲಿದ್ದೇವೆಂದು ಹೇಳಿಕೊಳ್ಳುವ ಗೆಳೆಯರು ₨ 500, ₨ 1000 ಇಸ್ಕೊಂಡು ಹೋಗಿ, ಏನೂ ಕೆಲಸ ಮಾಡ್ಸಿಲ್ಲ’ ಎಂದು ಶರಣಪ್ಪ ಬೇಸರ ವ್ಯಕ್ತಪಡಿಸುತ್ತಾರೆ.ಅಂಗವಿಕಲರಿಗೆ ಅನುಕಂಪಕ್ಕಿಂತ ಅವಕಾಶ, ಸೌಲಭ್ಯ, ನೆರವು ಬೇಕಿದೆ ಎನ್ನುವುದು ಶರಣಪ್ಪನ ಪ್ರಕರಣದಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಿದೆ. ಕನಿಷ್ಠ ಜಿಲ್ಲಾಡಳಿತ ಶರಣಪ್ಪರಂತಹ ನೈಜ ಅಂಗವಿಕಲರನ್ನು ಗುರುತಿಸಿ, ಸೌಲಭ್ಯಗಳನ್ನು ಕೊಡಿಸುವ ಕೆಲಸ ಮಾಡಿದರೆ, ‘ಡಿಸೆಂಬರ್ 3’ರಂದು  ಅರ್ಥಪೂರ್ಣ ವಿಶ್ವ ಅಂಗವಿಕಲ ದಿನವನ್ನಾಗಿ ಆಚರಿಸಬಹುದು.

ಅರ್ಜಿ ಸಲ್ಲಿಸಬಹುದು...

‘ಶರಣಪ್ಪ ಬಹಳ ಶ್ರಮ ಜೀವಿ. ಕಷ್ಟಪಟ್ಟು ದುಡಿಯುತ್ತಾನೆ. ವ್ಯಾಪಾರ ಮಾಡುತ್ತಾನೆ. ಸರ್ಕಾರದ ಸೌಲಭ್ಯಗಳು ಆತನಿಗೆ ಮರೀಚಿಕೆಯಾಗಿವೆ, ನಿಜ. ಆದರೆ ಸದ್ಯಕ್ಕೆ ₨ 1,200 ಮಾಸಾಶನ ಕೊಡಿಸುವ ಜವಾಬ್ದಾರಿ ನನ್ನದು. ಇನ್ನು ಮೋಟರ್ ಟ್ರೈಸಿಕಲ್‌ನಂತಹ  ಸೌಲಭ್ಯದ ಬಗ್ಗೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಮನಸ್ಸು ಮಾಡಬೇಕು. ಈಗಾಲೇ ನಗರದ ಲೋಕಾಯುಕ್ತ ಕಚೇರಿ ಆವರಣದಲ್ಲಿ ಜಿಲ್ಲಾ ವಿಕಲಚೇತನ ಪುನರ್ ವಸತಿ ಕೇಂದ್ರ ಆರಂಭವಾಗಿದೆ. ಶರಣಪ್ಪನಂತಹ ನೈಜ ಅಂಕವಿಕಲರು ಕಚೇರಿಯನ್ನು ಸಂಪರ್ಕಿಸಿ, ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು.

– -ಶಂಕರಪ್ಪ.ವಿ.ಕೆ, ಜಿಲ್ಲಾ ಮಹಿಳಾ ಸಾಂತ್ವನ ಕೇಂದ್ರ (94480 38400)

ಪ್ರತಿಕ್ರಿಯಿಸಿ (+)