ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್: ಸ್ವಾತಂತ್ರ್ಯದ ಕನವರಿಕೆ

Last Updated 24 ಜನವರಿ 2016, 19:30 IST
ಅಕ್ಷರ ಗಾತ್ರ

ತೈವಾನ್ ಜನತೆ ಮೊದಲ ಬಾರಿಗೆ ದೇಶದ ಅಧ್ಯಕ್ಷತೆಯನ್ನು ಒಬ್ಬ ಮಹಿಳೆಗೆ ನೀಡಿದ್ದಾರೆ.  ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿಯ (ಡಿಪಿಪಿ) ನಾಯಕಿ ಸೈ ಇಂಗ್–ವೆನ್ ಪ್ರಜಾಪ್ರಭುತ್ವದ ವಿಧಾನದಲ್ಲಿ ತೈವಾನ್‌ನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ತೈವಾನ್ ಜನತೆಯ ಈ ಅಚ್ಚರಿಯ ನಡೆ ಚೀನಾಗೆ ತೀರಾ ಇರಿಸುಮುರಿಸು ಉಂಟು ಮಾಡಿದೆ. ತೈವಾನ್, ಆಗ್ನೇಯ ಏಷ್ಯಾದ ಒಂದು ಸ್ವತಂತ್ರ ರಾಷ್ಟ್ರವಾದರೂ, ಚೀನಾ ಅದನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಲೇ ಇದೆ. ಚೀನಾ ಈಗಲೂ ತೈವಾನ್‌ನನ್ನು ‘ಪ್ರಾಮಿನೆನ್ಸ್ ಆಫ್ ರಿಪಬ್ಲಿಕ್ ಚೀನಾ’ ಎಂದೇ ಕರೆಯುತ್ತದೆ.  1949ರ ನಂತರ ತೈವಾನ್‌ನಲ್ಲಿ ರಾಷ್ಟ್ರೀಯವಾದಿ ಕುಮಿಂಟಾಂಗ್ (ಕೆಎಂಟಿ) ಸರ್ಕಾರ ಇದ್ದರೂ, ಅವರೆಲ್ಲರೂ ಅಖಂಡ ಚೀನಾದ ಮಂತ್ರ ಪಠಿಸುವವರೇ ಆಗಿದ್ದರು.

ತೈವಾನ್ ರಾಷ್ಟ್ರೀಯವಾದಿಗಳೂ, ಅಖಂಡ ಚೀನವೂ...: ಚೀನಾದ ಚುಕ್ಕಾಣಿ ಹಿಡಿಯಲು ಕಮ್ಯುನಿಸ್ಟ್ ಪಾರ್ಟಿ ಆಫ್‌ ಚೀನಾ (ಸಿಪಿಸಿ) ಮತ್ತು   ಕುಮಿಂಟಾಂಗ್ (ಕೆಎಂಟಿ) ನಡುವೆ 1927ರಿಂದಲೂ ನಡೆಯುತ್ತಿದ್ದ  ಪೈಪೋಟಿ 1949ರ ವೇಳೆಗೆ ತಾರಕಕ್ಕೆ ಏರಿತ್ತು. ಮಾವೊ ನೇತೃತ್ವದ ಸಿಪಿಸಿ ಸೇನೆ ಜೆಡಾಂಗ್ ಮುಂದಾಳತ್ವದ ಕೆಎಂಟಿ ಸೇನೆಯನ್ನು 1949ರ ನಾಗರಿಕ ಯುದ್ಧದಲ್ಲಿ ಸೋಲಿಸಿತು.

ಸೋತ ಜಿಡಾಂಗ್ ಮತ್ತು ಅವನ ಕೆಎಂಟಿ ಅನುಯಾಯಿಗಳು ಚೀನಾದ ಸೆರಗಿನಲ್ಲೇ ಇದ್ದ ತೈವಾನ್‌ಗೆ ಪಲಾಯನ ಮಾಡಿದರು. ಸ್ಥಳೀಯರಿಗಿಂತ ಎಲ್ಲಾ ಸ್ವರೂಪದಲ್ಲೂ ಬಲಾಢ್ಯರಾಗಿದ್ದ ಕೆಎಂಟಿ ರಾಷ್ಟ್ರೀಯವಾದಿಗಳು ತೈವಾನ್‌ನ ಅಧಿಕಾರವನ್ನು ಹಿಡಿದರು.
ಆದರೆ ಕೆಎಂಟಿ ಆಡಳಿತದಲ್ಲಿ ಪ್ರಾತಿನಿಧ್ಯವಿದ್ದದ್ದು ಅಖಂಡ ಚೀನಾ ಮಂತ್ರ ಪಠಿಸುವವರಿಗೆ ಮಾತ್ರ. 1988ರಲ್ಲಿ ತೈವಾನ್ ಅಧ್ಯಕ್ಷರಾಗಿ ಆಯ್ಕೆಯಾದ ಲೀ ಟೆಂಗ್ ಹೂ ಆಡಳಿತದಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಿದರು. ಆದರೆ ಭ್ರಷ್ಟ ಆಡಳಿತದ ಫಲವಾಗಿ ಲೀ 1991ರಲ್ಲಿ ಅಧಿಕಾರದಿಂದ ಕೆಳಗೆ ಇಳಿಯಬೇಕಾಯಿತು.

1996ರಲ್ಲಿ ಲೀ ಪ್ರತ್ಯಕ್ಷ ಚುನಾವಣೆಯ ಮೂಲಕ ಮತ್ತೆ ಅಧ್ಯಕ್ಷರಾಗಿ ಆರಿಸಿ ಬಂದರು. ಇದು ತೈವಾನ್‌ನಲ್ಲಿ ಪ್ರಜಾಪ್ರಭುತ್ವ ನೆಲೆಯಲ್ಲಿ ನಡೆದ ಮೊದಲ ಆಯ್ಕೆ. 1996ರಲ್ಲಿ ಚೀನಾ ಮತ್ತು ತೈವಾನ್ ನಡುವೆ ಸಾರಿಗೆ, ಸಂಪರ್ಕ ಮತ್ತು ವಾಣಿಜ್ಯ ವಹಿವಾಟಿಗೆ ಚೀನಾ ಅನುಮತಿ ನೀಡಿತು.   ಅದರ ಪ್ರತಿಫಲವನ್ನು ಉಂಡವರೂ ಕೆಎಂಟಿ ಅನುಯಾಯಿಗಳು ಮತ್ತು ಸ್ಥಿತಿವಂತ ಸ್ಥಳೀಯರು ಮಾತ್ರ.

ಸ್ವಾತಂತ್ರ್ಯದ ಕನವರಿಕೆ: ಕೆಎಂಟಿಯ ತಾರತಮ್ಯ ನೀತಿಯನ್ನು ಅರಿತ ತೈವಾನ್‌ನ ಹೊಸ ತಲೆಮಾರು ಸಂಪೂರ್ಣ ಸಾರ್ವಭೌಮ ತೈವಾನ್‌ನ ಕನಸನ್ನು ಕಾಣತೊಡಗಿತು. ಇದರ ಫಲವಾಗಿಯೇ ಜನ್ಮತಳೆದ ಡಿಪಿಪಿ ಸ್ವತಂತ್ರ ತೈವಾನ್‌ನ ಕನಸನ್ನು ಮುಂದಿನ ತಲೆಮಾರಿಗೂ ದಾಟಿಸಿತು.

ಆರ್ಥಿಕ ಮತ್ತು ಸಾಮಾಜಿಕ ತಾರತಮ್ಯದ ಫಲವಾಗಿ 1990ರ ದಶಕದ ವೇಳೆಗೆ ತೈವಾನ್‌ನಲ್ಲಿ ಸ್ಥಳೀಯರೇ ತುಂಬಿದ್ದ ಬಹುಸಂಖ್ಯಾತ ಕೆಳಮಧ್ಯಮ ವರ್ಗವೊಂದು ರೂಪುಗೊಂಡಿತ್ತು. 2000ರಿಂದ 2008ರವರೆಗೆ ಡಿಪಿಪಿ ಆಡಳಿತದಲ್ಲಿದ್ದರೂ ಸ್ಥಳೀಯರ ಸ್ಥಿತಿ ಸುಧಾರಿಸಲಿಲ್ಲ. 2008ರಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಕೆಎಂಟಿ ಚೀನಾದೊಂದಿಗೆ ಸಂಬಂಧವನ್ನು ಮತ್ತಷ್ಟು ಬಲಪಡಿಸಿತು. ಇದರ ಫಲವಾಗಿ ರಾಷ್ಟ್ರೀಯವಾದಿಗಳು ಮತ್ತು ಉಳ್ಳವರ  ಸಂಪತ್ತು ವೃದ್ಧಿಸಿತೇ ವಿನಾ ಕೆಳ ಮಧ್ಯಮವರ್ಗದ ಜನರಿಗೆ ಹೆಚ್ಚಿನ ಉಪಯೋಗ ಆಗಲಿಲ್ಲ.

ಚೀನಾ ಕೆಂಗಣ್ಣು: ತೈವಾನ್ ಜನರ ಈ ನಡೆಗೆ ಚೀನಾ ಕೆಂಗಣ್ಣು ಬೀರಿದೆ. ‘ಸ್ವಾತಂತ್ರ್ಯವನ್ನು ಕನವರಿಸಬೇಡಿ’ ಎಂದು ಎಚ್ಚರಿಕೆ ನೀಡಿದೆ. ಜತೆಗೆ ಒಂದು ಸಾವಿರಕ್ಕೂ ಹೆಚ್ಚು ಕ್ಷಿಪಣಿಗಳನ್ನು ತೈವಾನ್‌ನತ್ತ ಮುಖ ಮಾಡಿ ತನ್ನ ಕರಾವಳಿಯಲ್ಲಿ ನಿಲ್ಲಿಸಿದೆ. ಆದರೆ ಸೈ ಅವರು ಚೀನಾದೊಂದಿಗೆ ಸುಸ್ಥಿರ ಸಂಬಂಧವನ್ನು ಕಾಯ್ದುಕೊಳ್ಳುವುದಾಗಿ ಹೇಳಿದ್ದಾರೆ. ಜತೆಗೆ ಸ್ವತಂತ್ರ ತೈವಾನ್‌ನ ಕನಸನ್ನು ಬಿಡಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಅದಕ್ಕಿಂತ ಮುಖ್ಯವಾಗಿ ದೇಶದ ಸಂವಿಧಾನಕ್ಕೆ ತಿದ್ದುಪಡಿ ತರುವ, ಆರ್ಥಿಕ ನೀತಿಗಳನ್ನು ಸುಧಾರಿಸುವ ಮತ್ತು ಬಹುಸಂಖ್ಯಾತ ಕೆಳಮಧ್ಯಮ ವರ್ಗದ ಯುವತಲೆಮಾರಿಗೆ ಉತ್ತಮ ಜೀವನದ ಅವಕಾಶವನ್ನು ಕಲ್ಪಿಸಿಕೊಡುವ ಸವಾಲು ಸೈ ಅವರ ಮುಂದಿದೆ. ‘ಇದೇ ನನ್ನ ಆದ್ಯತೆ’ ಎಂದಿದ್ದಾರೆ.

ಹೊಸ ಸಂವಿಧಾನದ ಭರವಸೆ
2008ರ ಚುನಾವಣೆಯಲ್ಲಿ ಕೆಂಎಂಟಿ ಅಭ್ಯರ್ಥಿ ಎದುರು ಸೋಲುಂಡಿದ್ದ  ಡಿಪಿಪಿ ನಾಯಕಿ ಸೈ ಇಂಗ್–ವೆನ್ ಒಂದೆರಡು ವರ್ಷಗಳ ಹಿಂದಿನಿಂದಲೇ ದೇಶದುದ್ದಕ್ಕೂ ಓಡಾಡಿ ಜನರಿಗೆ ಹೊಸ ಸಂವಿಧಾನ ಮತ್ತು ಆರ್ಥಿಕ ಸುಧಾರಣೆಯ ಭರವಸೆ ನೀಡಿದ್ದರು. ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯ ಬದಲಾವಣೆಗೆ ಹಾತೊರೆಯುತ್ತಿದ್ದ ತೈವಾನ್‌ನ ಬಹುಸಂಖ್ಯಾತ ಕೆಳಮಧ್ಯಮ ವರ್ಗ ಸೈ ಅವರ ಕೈ ಹಿಡಿಯಿತು.ಕೆಂಎಂಟಿ ಅಭ್ಯರ್ಥಿ ಎದುರು ಸೈ ಭಾರಿ ಅಂತರದಿಂದ ಜಯಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT