ಸೋಮವಾರ, ಮಾರ್ಚ್ 8, 2021
19 °C
ಎರೆಭೂಮಿಯಲ್ಲಿ ಕಂಡು ಬರದ ಬೆಳೆಯ ಉತ್ಸಾಹ

ತೇವಾಂಶದ ಕೊರತೆ, ಕಾಳು ಕಟ್ಟದ ಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೇವಾಂಶದ ಕೊರತೆ, ಕಾಳು ಕಟ್ಟದ ಜೋಳ

ಹನುಮಸಾಗರ:  ಹಿಂಗಾರು ಹಂಗಾಮಿನಲ್ಲಿ ಅಲ್ಪಸ್ವಲ್ಪ ಸುರಿದ ಮಳೆಗೆ ಕಡಲೆಯ ಜತೆಗೆ ಮಿಶ್ರ ಬೆಳೆಯಾಗಿ ಬಿತ್ತಯಾಗಿದ್ದ ಜೊಳದ ಬೆಳೆಗೆ ವಾತಾವರಣದಲ್ಲಿ ತೇವಾಂಶದ ಕೊರತೆ ಉಂಟಾಗಿದ್ದರಿಂದ ಜೋಳ ಕಾಳು ಕಟ್ಟದಂತಾಗಿದ್ದು ತೆನೆಗಳು ಜೊಳ್ಳಾಗುವ ಸಂಭವವಿದೆ.ಮಳೆಯ ಅಭಾವದಿಂದ ಮುಗಾರು ಹಂಗಾಮು ಸಂಪೂರ್ಣ ವಿಫಲಗೊಂಡಿದ್ದರಿಂದ ರೈತರು ಹಿಂಗಾರು ಬಿತ್ತನೆಯ ಮೇಲೆ ವಿಶ್ವಾಸ ಕಳೆದುಕೊಂಡಿದ್ದರು. ಆದಾಗ್ಯೂ ಸಣ್ಣ ಪ್ರಮಾಣದಲ್ಲಿ ಸುರಿದ ಮಳೆಗೆ ಜೋಳ, ಕಡಲೆ, ಸೂರ್ಯಕಾಂತಿ, ಕುಸುಬಿ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಅದರಲ್ಲೂ ವಿಶೇಷವಾಗಿ ಜೋಳದ ಬೀಜದ  ಜೊತೆಯಲ್ಲಿ ಕಡಲೆ ಬೀಜಗಳನ್ನು ಬೆರೆಸಿ ಮಿಶ್ರ ಬೇಸಾಯ ಮಾಡುವುದು ಈ ಭಾಗದಲ್ಲಿ ಸಂಪ್ರದಾಯ. ಕಡಲೆ ಬೆಳೆ ಜೋಳದ ಬೆಳೆಗೆ ಹಾಗೂ ಜೋಳದ ಬೆಳೆ ಕಡಲೆ ಬೆಲೆಗೆ ಪೂರಕವಾಗುವುದರ ಕಾರಣ ಎರಡು ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯುವುದು ವಾಡಿಕೆಯಾಗಿದೆ.ನಂತರದಲ್ಲಿ ಮಳೆ ಬೀಳದಿರುವುದದರಿಂದ ಕಡಲೆ ಹುಲುಸಾಗಿ ಬೆಳೆಯಲಿಲ್ಲ, ಅಲ್ಲದೆ ಆರಂಭದಲ್ಲಿ ಕ್ವಿಂಟಲ್‌ ಕಡಲೆಗೆ  ₨4800 ಬೆಲೆ ಇತ್ತು ರೈತರ ಕಡಲೆ ಬೆಳೆ ಕೊಯ್ಲಿಗೆ ಬರುತ್ತಿದ್ದಂತೆ ಸದ್ಯ ₨4500ಕ್ಕೆ ಇಳಿದಿದೆ. ಸಾಕಷ್ಟು ಖರ್ಚು ಮಾಡಿ ಬೆಳೆದ ಬೆಳೆಗೆ ವ್ಯಾಪರಸ್ಥರಿಂದ ಮೋಸವಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಅಡವಿಭಾವಿ ಗ್ರಾಮದ ಮಲ್ಲಿಕಾರ್ಜುನ ದೋಟಿಹಾಳ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಅರೆಬರೆಯಾಗಿ ಬೆಳೆದು ನಿಂತ ಜೋಳದ ಬೆಳೆಗೆ ಈಚೆಗೆ ವಾತಾವರಣದಲ್ಲಿ ತೇವಾಂಶದ ಪ್ರಮಾಣ ಕಡಿಮೆಯಾಗಿರುವುದರಿಂದ ಕಾಳು ಕಟ್ಟುವ ಸಂಭವ ಕಡಿಮೆ ಎನ್ನಲಾಗುತ್ತದೆ. ‘ಕೆಲ ದಿನಗಳನ್ನು ನೋಡಿ ಬೆಳೆ ಕೊಯ್ಲು ಮಾಡಿ ಜಾನುವಾರುಗಳಿಗೆ ಹಾಕುವುದು ಅನಿವಾರ್ಯಾವಾಗುತ್ತದೆ’ ಎಂದು ಮಲಕಾಪುರ ಗ್ರಾಮದ ದೊಡ್ಡಬಸಯ್ಯ ಹಿರೇಮಠ ವಿಷಾದದಿಂದ ಹೇಳುತ್ತಾರೆ.ಕಾಳು ಕಟ್ಟುವ ಸಾಧ್ಯತೆ ತೀರಾ ಕಡಿಮೆ:ಅಧಿಕಾರಿ

ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗಿದೆ ಎನ್ನುವುದಕ್ಕಿಂತ ಈ ಬಾರಿ ಮುಂಗಾರು ಹಿಂಗಾರು ಮಳೆಗಳು ವಿಫಲವಾಗಿದ್ದರಿಂದ ಮುಖ್ಯವಾಗಿ ಮಣ್ಣಿನಲ್ಲಿಯೇ ತೇವಾಂಶ ಪ್ರಮಾಣ ಕಡಿಮೆಯಾಗಿದೆ. ಜೋಳದ ಬೆಳೆ ಕಣ್ಣಿಗೆ ಹಸಿರಾಗಿಯೇ ಕಂಡರೂ ಕಾಳು ಕಟ್ಟುವ ಸಾಧ್ಯತೆ ತೀರಾ ಕಡಿಮೆ ಇದೆ.ಮಣ್ಣಿನಲ್ಲಿ ತೇವಾಂಶ ಪ್ರಮಾಣ ಕಡಿಮೆಯಾದರೆ ಜೋಳದ ಗರಿಗಳು ಸುರಳಿಯಾಕಾರಕ್ಕೆ ತಿರುಗುತ್ತವೆ. ಈ ಲಕ್ಷಣ ತಿಂಗಳ ಹಿಂದೆಯೇ ಕಂಡು ಬಂದಿತ್ತು’ ಎಂದು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸತ್ಯನಾರಾಯಣ ಹೇಳಿದರು. ಅಲ್ಲದೆ ತಗ್ಗು ಪ್ರದೇಶದಲ್ಲಿನ ಬೆಳೆಗಳ ತೆನೆಗಳು ಅಲ್ಪಸ್ವಲ್ಪ ಕಾಳುಕಟ್ಟುವ ಸಾಧ್ಯತೆ  ಇದೆ.ಈ ಕಾರಣಕ್ಕಾಗಿಯೇ ರೈತರು ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಮಾಡುವಂತೆ ಹೇಳುತ್ತಿದ್ದೇವೆ. ಈ ಕಾಮಗಾರಿಗೆೆ ಪರಿಶಿಷ್ಟ ಜಾತಿ, ಜನಾಂಗದವರಿಗೆ ಶೇಕಡಾ 90ರಷ್ಟು ಹಾಗೂ ಉಳಿದವರಿಗೆ 80ರಷ್ಟು ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.