ಸೋಮವಾರ, ಮಾರ್ಚ್ 27, 2023
22 °C

ತ್ಯಾಜ್ಯ ಘಟಕ ಸ್ಥಳಾಂತರಕ್ಕೆ ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ಯಾಜ್ಯ ಘಟಕ ಸ್ಥಳಾಂತರಕ್ಕೆ ಒತ್ತಾಯಿಸಿ ಪ್ರತಿಭಟನೆ

ಬೆಂಗಳೂರು: ನಗರದ ಹೊರ ವಲಯದ ದೊಡ್ಡಬಿದರಕಲ್ಲು ವಾರ್ಡ್ ವ್ಯಾಪ್ತಿಯ ತಿಪ್ಪೇನಹಳ್ಳಿಯಲ್ಲಿರುವ ಬೃಹತ್‌ ತ್ಯಾಜ್ಯ ಘಟಕದಿಂದ ದುರ್ವಾಸನೆ ಹರಡುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿದರು. ತಿಪ್ಪೇನಹಳ್ಳಿ, ದೊಡ್ಡಬಿದರಕಲ್ಲು ಚನ್ನನಾಯಕನಪಾಳ್ಯ, ತಿರುಮಲಾಪುರ, ಭವಾನಿನಗರ, ಕೆ.ಜಿ.ಶ್ರೀಕಂಠಪುರ, ಕರಿಹೊಬನಹಳ್ಳಿ, ತಿಗಳರಪಾಳ್ಯ, ಅಂದ್ರಹಳ್ಳಿ, ಗಂಗೊಂಡನಹಳ್ಳಿ, ಲಕ್ಷ್ಮಿಪುರ, ಮಾದಾವರ,ಕೋಡಿಪಾಳ್ಯ, ಇಂದಿರಾನಗರ, ಸಿದ್ದಾರ್ಥನಗರ, ಮಾರಣ್ಯ ಬಡಾವಣೆ, ಮುನಿಸ್ವಾಮಪ್ಪ ಬಡಾವಣೆ,ಅನ್ನಪೂರ್ಣೇಶ್ವರಿ ಲೇಔಟ್‌, ಬೆನಕ ಲೇಔಟ್‌, ಭೈರವೇಶ್ವರಿ ಲೇಔಟ್‌, ಮುನೇಶ್ವರ ಬಡಾವಣೆ, ಎಸ್‌ಎಲ್‌ಎನ್‌ ಬಡಾವಣೆಯ ನೂರಾರು ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತ್ಯಾಜ್ಯ ಘಟಕವನ್ನು ಬಿಬಿಎಂಪಿ ವ್ಯಾಪ್ತಿಯಿಂದ 15 ಕಿ.ಮೀ ದೂರದಲ್ಲಿ ನಿರ್ಮಾಣ ಮಾಡಬೇಕೆಂಬ ನಿಯಮವಿದ್ದರೂ ಕಾನೂನು ಉಲ್ಲಂಘಿಸಿ ಇಲ್ಲಿ ಘಟಕ ನಿರ್ಮಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಘಟಕದ ಸುತ್ತಲಿನ 4–5 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ತ್ಯಾಜ್ಯದ ದುರ್ವಾಸನೆಯಿಂದ ನೆಮ್ಮದಿ ಇಲ್ಲದಂತಾಗಿದೆ. ಹೆಚ್ಚುತ್ತಿರುವ ನೊಣಗಳು ಮತ್ತು ಕ್ರಿಮಿಕೀಟಗಳಿಂದಾಗಿ ಜನರು ಕಾಯಿಲೆಗೆ ಬೀಳುತ್ತಿದ್ದಾರೆ. ಆದ್ದರಿಂದ ಕೂಡಲೇ ಘಟಕವನ್ನು ಮುಚ್ಚಬೇಕು ಎಂದು ಒತ್ತಾಯಿಸಿದರು.

ಘಟಕದಲ್ಲಿ ಉತ್ಪತ್ತಿಯಾಗುವ ವಿಷಕಾರಿ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡದೆ ಹಾಗೇ ಹೊರಗೆ ಹರಿಬಿಡಲಾಗುತ್ತಿದೆ.ಆ ನೀರು ಸಮೀಪದಲ್ಲಿರುವ ಲಕ್ಷ್ಮೀಪುರದ ಕೆರೆಗೆ ಹೋಗುತ್ತಿದೆ. ಆ ಕೆರೆಯ ನೀರನ್ನು ಕುಡಿಯುವ ಪ್ರಾಣಿಗಳು ಸಾವನ್ನಪ್ಪುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟಕದ ಸುತ್ತಲಿನ ಪ್ರದೇಶದಲ್ಲಿ ಅಂರ್ತಜಲದಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿವೆ. ಪರಿಸರ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಘಟಕ ನಡೆಸುತ್ತಿರುವುದರ ವಿರುದ್ದ ಹೋರಾಟ ನಡೆಸಿದರೆ ಅದನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಘಟಕವನ್ನು ಕೂಡಲೇ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.