ಬುಧವಾರ, ಜನವರಿ 22, 2020
28 °C

ತ್ಯಾಜ್ಯ ಬಳಸಿ; ಮನೆಯ ಅಂದ ಹೆಚ್ಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಕೃತಿಯಂತೆ ಮನೆಯೂ ಕೂಡ ಸ್ವಚ್ಛ, ಸುಂದರ ವಾತಾವರಣ ಹೊಂದಿರಬೇಕು ಮತ್ತು ಚೆನ್ನಾಗಿ ಕಾಣಿಸಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದಕ್ಕೆಂದು ಹೆಚ್ಚು ಹಣವನ್ನೂ ವಿನಿಯೋಗಿಸುತ್ತಾರೆ. ಆದರೆ, ಮನೆಯ ವಿನ್ಯಾಸಕ್ಕೆಂದು ದುಬಾರಿ ವಸ್ತುಗಳನ್ನು ಬಳಸಿಕೊಳ್ಳುವ ಬದಲು ಪರಿಸರ ಸ್ನೇಹಿ ಮತ್ತು ಕಡಿಮೆ ಖರ್ಚಿನಲ್ಲಿಯೇ ಮನೆಗಳನ್ನು ಸಿಂಗರಿಸಬಹುದಾದ ಮಾರ್ಗೋಪಾಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿವೆ.ತ್ಯಾಜ್ಯ ವಸ್ತುಗಳನ್ನು ಪುನರ್ಬಳಕೆ ಮಾಡಿಕೊಂಡು ಅದೇ ವಸ್ತುಗಳನ್ನು ಮನೆಗೆ ಮೆರುಗು ನೀಡಲು ಬಳಸಿಕೊಳ್ಳಲಾಗುತ್ತಿದೆ. ತ್ಯಾಜ್ಯ ಸರಕಾದ ಕಾಗದ, ಬಿದಿರು, ಲೋಹ, ಗಾಜು ಎಲ್ಲದಕ್ಕೂ ಆಧುನಿಕ ಸ್ಪರ್ಶ ನೀಡಿ ಮನೆಯ ಒಳಾಂಗಣ ಮತ್ತು ಹೊರಾಂಗಣವನ್ನು ಆಕರ್ಷಕವಾಗಿ  ವಿನ್ಯಾಸ ಮಾಡಲು ಈಗ ಸಾಧ್ಯವಾಗಿದೆ.ಇದಕ್ಕೆಂದೇ ಪರಿಸರ ಸ್ನೇಹಿ ಬಣ್ಣಗಳು, ಮರದ ಪರಿಕರಗಳು ಮತ್ತು ಇನ್ನಿತರ ಅಲಂಕಾರಿಕ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಈ ವಸ್ತುಗಳನ್ನು ಖರೀದಿಸುತ್ತಿರುವ ಪರಿಸರ ಪ್ರೇಮಿಗಳೂ ಹೆಚ್ಚಾಗುತ್ತಿದ್ದಾರೆ.ನಿಸರ್ಗದತ್ತ ಪಯಣ

ಪರಿಸರದತ್ತ ವಿಶೇಷ ಕಾಳಜಿ ಹೊಂದಿರುವವರು ತಮ್ಮ ಮನೆಯನ್ನು `ಹಸಿರು ಮನೆ~ಯನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ. ಪರಿಸರ  ಮತ್ತು ನೈಸರ್ಗಿಕ ಸಂಪನ್ಮೂಲ  ರಕ್ಷಿಸಲು ಬಳಸಿ ಬೀಸಾಡಿದ ಕಾಗದ, ಬಿದಿರು, ಹಳೆ ವಸ್ತು, ನಾರು ಮುಂತಾದವುಗಳಿಂದ ತಯಾರಿಸಿದ ಅತ್ಯಾಕರ್ಷಕ ಮನೆ ಅಲಂಕಾರಿಕ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಪೇಪರ್ ವಾಸ್, ಬಿದಿರಿನ ಪರದೆ, ಟೇಬಲ್ ಲ್ಯಾಂಪ್, ಮರದ ಪೀಠೋಪಕರಣಗಳು ಹೆಚ್ಚು ಪ್ರಸ್ತುತವಾಗುತ್ತಿವೆ.ಆರೋಗ್ಯಕರ ವಾತಾವರಣವನ್ನೂ ಸೃಷ್ಟಿಸುವ ಬಿದಿರು, ಸೋಯಾಬೀನ್‌ಮತ್ತು ಹತ್ತಿ ಬಳಸಿಕೊಂಡು  ತಯಾರಿಸುವ ಮರದ ಪೀಠೋಪಕರಣಗಳು   `ಪರಿಸರ ಸ್ನೇಹಿ~ಯಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿವೆ. ಜತೆಗೆ ಹೆಚ್ಚು ಬಾಳಿಕೆಗೂ ಬರುತ್ತಿವೆ.ಮನೆಯ ನೆಲಕ್ಕೂ ಪರಿಸರ ಸ್ನೇಹಿಯಾಗಿರುವ ಇಂಟರ್‌ಫೇಸ್ ಫ್ಲೋರ್ ಮತ್ತು ಪೋರ್ಗೊ ವುಡ್ ಫ್ಲೋರಿಂಗ್ ರೀತಿಯನ್ನು ಅನುಸರಿಸಿದರೆ   ಪರಿಸರದ ಮೇಲಾಗುವ ಪರಿಣಾಮವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದು ಎನ್ನುತ್ತಾರೆ ಒಳಾಂಗಣ ವಿನ್ಯಾಸಗಾರ ವಿಜಯ ನಂಬಿಯಾರ್.ಈಗ ಲಭ್ಯವಿರವ ಅನೇಕ ಪುನರ್ಬಳಕೆ ವಸ್ತುಗಳು ಶೇ 85ರಷ್ಟು ಪರಿಸರ ಸ್ನೇಹಿಯಾಗಿವೆ. ಅವುಗಳ ಬಳಕೆ ಹೆಚ್ಚಾದಷ್ಟು, ಪರಿಸರಕ್ಕಷ್ಟೇ ಅಲ್ಲ, ಆರೋಗ್ಯಕ್ಕೂ ಪ್ರಯೋಜನವಿದೆ ಎನ್ನುತ್ತಾರೆ ವಿನ್ಯಾಸಗಾರ ಕೋಚು ತಮ್ಮನ್.ನೈಸರ್ಗಿಕ ವಸ್ತು: ಮನೆಗೆ ಮೆರುಗು

ಬಿದಿರು, ಹಳೆಯ ಮರಗಳು, ಹಳೆಯ ಫ್ರೇಂ, ಕಲ್ಲುಗಳು, ಮಣ್ಣಿನ ಮಡಿಕೆ ಇವುಗಳನ್ನು ಬಿಸಾಡಬೇಕಿಲ್ಲ. ಇವುಗಳನ್ನೆಲ್ಲ ಮನೆಯಲ್ಲಿ ಸೂಕ್ತ ಜಾಗದಲ್ಲಿ ಇಟ್ಟರೆ ಆಕರ್ಷಕ ನೋಟವೂ  ಕಂಡು ಬರುತ್ತದೆ.ವಿಶೇಷ ಗಾಜುಗಳು

`ಇಕೊಸೆನ್ಸ್~  ಹೆಸರಿನಲ್ಲಿ ವಿವಿಧ ರೀತಿಯ ಗಾಜುಗಳನ್ನು ಪರಿಚಯಿಸಲಾಗಿದೆ. ಪರಿಸರಕ್ಕೆ ಪೂರಕವಾಗಿರುವ ಈ ಗಾಜಿನಲ್ಲಿ ವಿನ್ಯಾಸಗಾರರು ಸುಲಭವಾಗಿ ತಮ್ಮ ಕಲಾ ನೈಪುಣ್ಯವನ್ನೂ ಅಭಿವ್ಯಕ್ತಿಸಬಹುದು ಎನ್ನುತ್ತಾರೆ ಅಸಾಹಿ ಇಂಡಿಯಾ ಗ್ಲಾಸ್‌ಲಿಮಿಟೆಡ್‌ನ ಕಿರಣ್ ಲುಲ್ಲಾ.ಪರಿಸರ ಸ್ನೇಹಿ ಬಣ್ಣಗಳು

ರಾಸಾಯನಿಕ ಬಣ್ಣಗಳು ಪರಿಸರಕ್ಕೆ ಹಾನಿಯುಂಟು ಮಾಡುತ್ತವೆ. ಅದಕ್ಕೆಂದು ಮಾರುಕಟ್ಟೆಯಲ್ಲಿ `ಪರಿಸರ ಸ್ನೇಹಿ~ ಬಣ್ಣಗಳೂ ಲಭ್ಯ ಇವೆ. ಈ   ಬಣ್ಣಗಳು ಕಡಿಮೆ ಪ್ರಮಾಣದ ರಾಸಾಯನಿಕಗಳನ್ನು ಹೊಂದಿರುತ್ತವೆ. ಇವುಗಳು ಕೂಡ  ಕೂಡ ಶೇ 98ರಷ್ಟು  ಸಸ್ಯಮೂಲವಾದ್ದರಿಂದ ಅವುಗಳಿಂದ ಹೆಚ್ಚು ಹಾನಿ ಉಂಟಾಗಲಾರದು.ನೈಸರ್ಗಿಕ ಬೆಳಕು

`ಪರಿಸರ ಸ್ನೇಹಿ~ ದೀಪಗಳನ್ನೂ ಕೂಡ  ಮನೆಗಳಲ್ಲಿ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬಹುದು. `ಎಲ್‌ಇಡಿ ಲೈಟ್~ಗಳನ್ನು ದಿನಕ್ಕೆ 1.5 ಗಂಟೆ ಬಳಸಿಕೊಂಡರೆ 8-10ವರ್ಷ ಬಾಳಿಕೆ ಬರುವುದು ಖಚಿತ. ಫಿಲಿಪ್ಸ್ ಲೆಡಿನೊ ಎಂಬ ಎಲ್‌ಇಡಿ ಲೈಟ್‌ನಿಂದ   ಶೇ 80 ರಷ್ಟು ವಿದ್ಯುತ್ ಕೂಡ  ಉಳಿಸಬಹುದು. ಈ ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನೂ ಉಳಿಸಿದಂತಾಗುತ್ತದೆ. ಅಷ್ಟೇ ಅಲ್ಲ, ವಿದ್ಯುತ್ ಉಳಿಸುವುದರೊಂದಿಗೆ ಅಲಂಕಾರ ನೀಡುವ ದೀಪಗಳೂ ಲಭ್ಯ ಇವೆ.

ಪ್ರತಿಕ್ರಿಯಿಸಿ (+)