ಥಾಣೆ: ನಾಲ್ಕಂತಸ್ತಿನ ಕಟ್ಟಡ ಕುಸಿತ: 8 ಸಾವು
ಥಾಣೆ (ಪಿಟಿಐ): ಇಲ್ಲಿನ ಭಿಲ್ವಂಡಿ ಪಟ್ಟಣದಲ್ಲಿ ಹಲವಾರು ಕುಟುಂಬಗಳ ವಾಸ್ತವ್ಯ ಇದ್ದ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮವಾಗಿ ಎಂಟು ಮಂದಿ ಮೃತರಾಗಿ ಇತರ ಹಲವರು ಗಾಯಗೊಂಡಿದ್ದಾರೆ.
ಮೃತರಲ್ಲಿ ಬಹುತೇಕ ಮಂದಿ ಮಹಿಳೆಯರಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಗೌತಮ್ ಕಾಂಪೌಂಡ್ ನವೀ ಬಸ್ತಿಯಲ್ಲಿನ ಈ ಕಟ್ಟಡ ಮಂಗಳವಾರ ರಾತ್ರಿ ಕುಸಿದು ಬಿದ್ದಿದೆ. ಮೂಲತಃ ಕೇವಲ ಎರಡು ಅಂತಸ್ತುಗಳಿಗೆ ಮಾತ್ರ ಕಟ್ಟಡದಲ್ಲಿ ಪರವಾನಗಿ ಇತ್ತು ಎನ್ನಲಾಗಿದ್ದು ನಂತರ ಇನ್ನೆರಡು ಅಂತಸ್ತುಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಮಂಗಳವಾರ ರಾತ್ರಿ ಸಂಭವಿಸಿದ ಈ ದುರಂತದಲ್ಲಿ 6 ಮಹಿಳೆಯರು ಮೃತರಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಐದು ವರ್ಷದ ಬಾಲಕಿ ಸೇರಿದಂತೆ ಇತರ ಇಬ್ಬರು ಬುಧವಾರ ಗಾಯಗಳ ಪರಿಣಾಮವಾಗಿ ಮೃತರಾದರು ಎಂದು ಪೊಲೀಸರು ತಿಳಿಸಿದರು.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಫಿಯಾ ಎಂ. ಅನ್ಸಾರಿ (5) ಮತ್ತು ಸಾಗರ್ ಎಸ್. ಗಡಲ್ (19) ಈದಿನ ಥಾಣೆ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತರಾದರು. ಕಟ್ಟಡದ ಮಾಲೀಕ ನಸೀರ್ ಸಯೀದ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.