ಶನಿವಾರ, ಜನವರಿ 18, 2020
21 °C

ದಂಡುಪಾಳ್ಯ ಗ್ಯಾಂಗ್ ಕೃತ್ಯ: ಜೋಡಿ ಕೊಲೆ ಪ್ರಕರಣ: ಐವರಿಗೆ ಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಂಗಳೂರಿನ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ `ದಂಡುಪಾಳ್ಯ ಗ್ಯಾಂಗ್~ನ ಐದು ಮಂದಿಗೆ ನಗರದ 34ನೇ ವಿಶೇಷ ಸೆಷನ್ಸ್ ನ್ಯಾಯಾಲಯವು ಬುಧವಾರ ಮರಣದಂಡನೆ ವಿಧಿಸಿದೆ.ದಂಡುಪಾಳ್ಯ ಕೃಷ್ಣ, ದೊಡ್ಡಹನುಮ, ವೆಂಕಟೇಶ ಅಲಿಯಾಸ್ ಚಂದ್ರ, ಮುನಿಕೃಷ್ಣ ಮತ್ತು ನಲ್ಲತಿಮ್ಮ ಶಿಕ್ಷೆಗೆ ಗುರಿಯಾದವರು.1997ರ ಅಕ್ಟೋಬರ್ 12ರಂದು ಈ ಐದು ಮಂದಿ, ವೃದ್ಧೆ ಲೂಯಿಸ್ ಡಿ ಮೆಲ್ಲೊ (80) ಮತ್ತು ಅವರ ಮನೆಗೆಲಸದವನಾದ ರಂಜಿತ್ ವೇಗನ್ (19) ಎಂಬ ಯುವಕನ ಕತ್ತು ಸೀಳಿ ಕೊಲೆ ಮಾಡಿ ನಗದು ಹಾಗೂ ಚಿನ್ನಾಭರಣ ಸೇರಿದಂತೆ ಐದು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದರು. ಈ ಸಂಬಂಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬೆಂಗಳೂರಿನ ವಿಜಯನಗರ ಠಾಣೆಯಲ್ಲಿ ಹಿಂದೆ ಇನ್‌ಸ್ಪೆಕ್ಟರ್ ಆಗಿದ್ದ ಎನ್.ಚಲಪತಿ ಮತ್ತು ಸಿಬ್ಬಂದಿ ಈ ಐದು ಮಂದಿಯನ್ನು 2001ರಲ್ಲಿ ಬಂಧಿಸಿದ್ದಾಗ ಜೋಡಿ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಅಪರಾಧಿಗಳು ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ದರೋಡೆ, ಕೊಲೆಗೆ ಸಂಬಂಧಿಸಿದ 16 ಪ್ರಕರಣಗಳಲ್ಲಿ ಅಪರಾಧಿಗಳಿಗೆ ಈಗಾಗಲೇ ಶಿಕ್ಷೆಯಾಗಿದೆ.

ಪ್ರತಿಕ್ರಿಯಿಸಿ (+)