ಶನಿವಾರ, ಮೇ 15, 2021
23 °C

ದಕ್ಷಿಣ ಕೊರಿಯಾದಲ್ಲಿ ನಗರದ ನೃತ್ಯ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಕೊರಿಯಾದಲ್ಲಿ ನಗರದ ನೃತ್ಯ ತಂಡ

ಭಾರತ ಹಾಗೂ ದಕ್ಷಿಣ ಕೊರಿಯಾ ನಡುವಿನ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ದಕ್ಷಿಣ ಕೊರಿಯಾ ಸರ್ಕಾರ ಆಯೋಜಿಸಿರುವ ಕಾರ್ಯಕ್ರಮಕ್ಕೆ ಭಾರತ ಸಾಂಸ್ಕೃತಿಕ ಸಂಬಂಧಗಳ ಸಚಿವಾಲಯವು ನಗರದ ನಾಟ್ಯ ಸ್ಟೆಮ್ ಡಾನ್ಸ್ ಕಂಪನಿಯನ್ನು ಆಯ್ಕೆ ಮಾಡಿದೆ. ಈ ತಂಡವು ಜೂನ್ 1ರಿಂದ 9ರವರೆಗೆ ಕೊರಿಯಾದ ನಾಲ್ಕು ನಗರಗಳಲ್ಲಿ ಭಾರತೀಯ ಶಾಸ್ತ್ರೀಯ ಹಾಗೂ ಸಮಕಾಲೀನ ನೃತ್ಯದ ವಿವಿಧ ಪ್ರಕಾರಗಳನ್ನು ಪ್ರದರ್ಶಿಸಲಿದೆ.ಮಲ್ಲೇಶ್ವರದ 17ನೇ ಕ್ರಾಸ್‌ನಲ್ಲಿ ಹಲವು ವರ್ಷಗಳಿಂದ ಸಮಕಾಲೀನ ನೃತ್ಯ ಕಲಿಸುತ್ತಿರುವ ನಾಟ್ಯ ಸ್ಟೆಮ್ ಡಾನ್ಸ್ ಕಂಪನಿಯ 12 ಮಂದಿಯ ತಂಡ ಕೊರಿಯಾಗೆ ಪ್ರಯಾಣ ಬೆಳೆಸಿದೆ. ಜೂ.1ರಿಂದ 3ರವರೆಗೆ ಬೂಸಾನ್, ಜೂ. 5 ಮತ್ತು 6ರಂದು ಸನ್‌ಚಿಯಾನ್, ಜೂ. 8ರಂದು ಇನ್‌ಚಿಯಾನ್ ಹಾಗೂ ಜೂ. 9ರಂದು ಸಿಯೋಲ್‌ನಲ್ಲಿ ಒಟ್ಟು ಎಂಟು ವಿಧದ ನೃತ್ಯಗಳ ಪ್ರದರ್ಶನವನ್ನು ತಂಡದವರು ನೀಡಲಿದ್ದಾರೆ. ಜೊತೆಗೆ ವಿವಿಧ ಕಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ನೃತ್ಯ ಪ್ರಕಾರಕ್ಕೆ ಸಂಬಂಧಿಸಿದಂತೆ ಚರ್ಚೆ, ಸಂವಾದ ಹಾಗೂ ಉಪನ್ಯಾಸ ಕಾರ್ಯಕ್ರಮಗಳಲ್ಲೂ ತಂಡ ಪಾಲ್ಗೊಳ್ಳಲಿದೆ.“ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ತಂಡ ನಮ್ಮದಾಗಿದ್ದು, ಈ ಕಾರ್ಯಕ್ರಮಕ್ಕೆಂದೇ ನಾಲ್ಕು ತಿಂಗಳಿನಿಂದ ಅಭ್ಯಾಸ ಮಾಡುತ್ತಿದ್ದೇವೆ. ಡಾ. ಮಾಯಾರಾವ್ ಅವರ ನೃತ್ಯ ಸಂಯೋಜನೆಯ ಪಟ್ಟದಕಲ್ಲು ಶಿವನನ್ನು ಆಧರಿಸಿದ `ತಾಂಡವ ನೃತ್ಯ' ಹಾಗೂ ವಿಶೇಷವಾಗಿ ಸಂಯೋಜಿಸಿದ `ಟ್ರಾಂಘ್' ಸಮಕಾಲೀನ ನೃತ್ಯ ಪ್ರದರ್ಶನ ಅಲ್ಲಿ ಗಮನ ಸೆಳೆಯಲಿದೆ. ಕಥಕ್, ಮಣಿಪುರಿಯ ತಾಂಗ್ ತಾ, ಒಡಿಶಾದ ಛಾಂವ್ ಹಾಗೂ ಕೇರಳದ ಕಳರಿಪಯಟ್ಟು ಅಂಥ ಸಮರ ಕಲೆಗಳನ್ನು (ಮಾರ್ಷಲ್ ಆರ್ಟ್ಸ್) ಪ್ರದರ್ಶಿಸಲಿದ್ದೇವೆ. ಭಾರತೀಯ ನೃತ್ಯ ಪ್ರಕಾರದಲ್ಲಿನ ಬದಲಾವಣೆ, ವೈಶಿಷ್ಟ್ಯವನ್ನು ಅಲ್ಲಿನ ಕಲಾವಿದರೊಂದಿಗೆ ವಿನಿಮಯ ಮಾಡಿಕೊಳ್ಳಲಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ ಕಲಾ ನಿರ್ದೇಶಕ ಜನಾರ್ದನ ರಾಜ ಅರಸ್.ಭರತನಾಟ್ಯ, ಕೂಚಿಪುಡಿ, ಕಳರಿಪಯಟ್ಟು, ಮೋಹಿನಿಯಾಟ್ಟಂ ಸೇರಿದಂತೆ ಅನೇಕ ನೃತ್ಯ ಪ್ರಕಾರಗಳು ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಇತ್ತೀಚಿನ ದಿನಗಳಲ್ಲಿ ಈ ನೃತ್ಯ ಪ್ರಕಾರಗಳು ಸೇರಿದಂತೆ ಯೋಗ, ಸಮರ ಕಲೆಗಳನ್ನು ಮೇಳೈಸಿದ ಸಮಕಾಲೀನ ನೃತ್ಯ ಹೆಚ್ಚು ಜನಪ್ರಿಯವಾಗುತ್ತಿವೆ. ಇಂಥ ನೃತ್ಯದ ವಿವಿಧ ಪ್ರಕಾರಗಳನ್ನು ನಗರದ ತಂಡ ದಕ್ಷಿಣ ಕೊರಿಯಾದಲ್ಲಿ ಪ್ರದರ್ಶಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.ಮಧು ನಟರಾಜ (ನಿರ್ದೇಶಕರು), ರಮ್ಯಾ ನಾಗರಾಜ್, ಪೊನ್ನಮ್ಮ ದೇವಯ್ಯ, ಕೀರ್ತಿ ಕುಮಾರ್, ದಿವ್ಯಾ ಭಟ್, ನಿಕಿಲ್ ಪರಮಾರ್, ತೇಜೇಶ್ ಕುಮಾರ್ ಹಾಗೂ  ಮೇಘನಾ ನೃತ್ಯ ತಂಡದ ಸದಸ್ಯರು. ಸಂಕರ್ಷಣ್ ಕಿಣಿ (ಗಿಟಾರ್, ವಯಲಿನ್), ಅಜಯ್ ಕುಮಾರ್ ಸಿಂಗ್ (ತಬಲಾ, ಭಾರತೀಯ ತಾಳ ವಾದ್ಯಗಳು) ವಾದ್ಯ ಸಹಕಾರ ನೀಡಲಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.