ಸೋಮವಾರ, ಮೇ 17, 2021
21 °C

ದಯವಿಟ್ಟು ನನಗೆ ಬದುಕಲು ಬಿಡಿ...

ಡಾ.ಕೆ.ಎಸ್. ಪವಿತ್ರ Updated:

ಅಕ್ಷರ ಗಾತ್ರ : | |

ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆ ಫಲಿತಾಂಶ ಬಂತು, ಆತ್ಮಹತ್ಯೆಗಳ ಸುದ್ದಿ ಪೇಪರ್ ತುಂಬಾ. ಪ್ರೇಮ-ಪ್ರೀತಿ ವೈಫಲ್ಯಗಳ ನಂತರ 16-17ರ ವಯಸ್ಸಿನ ಮಕ್ಕಳು ಮಾಡುವ ಆತ್ಮಹತ್ಯೆಯ ಪ್ರಯತ್ನಗಳ, ಪ್ರಾಣ ಕಳೆದುಕೊಳ್ಳುವ ಸಂದರ್ಭಗಳೂ ಸಾಮಾನ್ಯವೇ. ಸೆಪ್ಟೆಂಬರ್ 8ರ ಜಾಗತಿಕ ಆತ್ಮಹತ್ಯಾ ತಡೆಗಟ್ಟುವ ದಿನದ ಈ ಬಾರಿಯ ಧ್ಯೇಯ  ~ಬಹು ಸಂಸ್ಕೃತಿ ಸಮಾಜಗಳಲ್ಲಿ ಆತ್ಮಹತ್ಯೆಯನ್ನು ತಡೆಗಟ್ಟುವುದು~ (Preventing suicide in multicultural societies).ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲೂ, ಭಾರತದಂತಹ ಬಹುಸಂಸ್ಕೃತಿ ಸಮಾಜಗಳಲ್ಲಿ ಹದಿಹರೆಯದ ಮಕ್ಕಳಲ್ಲಿನ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿರುವುದು ಒಂದು ಆತಂಕಕಾರಿ ಬೆಳವಣಿಗೆ. 15 ರಿಂದ 24 ವರ್ಷ ವಯಸ್ಸಿನ ಯುವ ಜನರಲ್ಲಿ ಆತ್ಮಹತ್ಯೆ ಮರಣದ ಮೂರನೇ ಸಾಮಾನ್ಯ ಕಾರಣ. ಹದಿಹರೆಯದಲ್ಲಿ ಆತ್ಮಹತ್ಯೆ ಕೇವಲ ಖಿನ್ನತೆಯಂಥ ಮಾನಸಿಕ ಸಮಸ್ಯೆಗೆ ಸಂಬಂಧಿಸಿದ್ದಲ್ಲ. ಸಾಮಾಜಿಕವಾಗಿ ಇಂದಿನ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ವಿವಿಧ ಸಾಮಾಜಿಕ - ಮಾನಸಿಕ - ದೈಹಿಕ ಒತ್ತಡಗಳ, ಸಂಘರ್ಷಗಳ ಪ್ರತಿಫಲವೂ ಹೌದು.  ಶೈಕ್ಷಣಿಕ - ಸಂಬಂಧಗಳಲ್ಲಿನ ಭಾವನಾತ್ಮಕ ತಾಕಲಾಟ - ಒಂಟಿತನ ಈ ಮೂರು ಇಂದಿನ ಭಾರತೀಯ ಹದಿಹರೆಯದ ಮಕ್ಕಳು ಆತ್ಮಹತ್ಯಾ ಪ್ರಯತ್ನ ಮಾಡುವ ಮುಖ್ಯ ಕಾರಣಗಳು-ಶೈಕ್ಷಣಿಕ - ಸಾಮರ್ಥ್ಯದ ಕೊರತೆ, ಅತಿ ನಿರೀಕ್ಷೆ, ತಮ್ಮ ಸಾಮರ್ಥ್ಯದ ಮಿತಿಗಳನ್ನು ಅರಿಯದೆ ಆರಿಸಿಕೊಳ್ಳುವ ಕಲಿಕೆಯ ಕ್ಷೇತ್ರಗಳು, ತಂದೆ-ತಾಯಿ-ಮಕ್ಕಳ ನಡುವಿನ ಕಲಿಕಾ ಕ್ಷೇತ್ರದ ಬಗೆಗಿನ ಭಿನ್ನಾಭಿಪ್ರಾಯ ಗಳು ಹೀಗೆ ಶೈಕ್ಷಣಿಕ ಒತ್ತಡ ವಿವಿಧ ರೀತಿಗಳಲ್ಲಿ ಕಾಡಬಹುದು.ಸಂಬಂಧಗಳಲ್ಲಿನ ಭಾವನಾತ್ಮಕ ಸಮಸ್ಯೆಗಳು ತಂದೆ-ತಾಯಿಗಳೊಡನೆ ಇರದ ಮುಕ್ತ ಭಾವನಾತ್ಮಕ ಸಂಬಂಧ, ಸ್ನೇಹಿತರ ಒತ್ತಡ, ಜೊತೆಗೇ ಅಪ್ರಬುದ್ಧ ಪ್ರೇಮ ಸಂಬಂಧಗಳು ಹದಿಹರೆಯದ ಮನಸ್ಸಿನ ತುಂಬ ಗೊಂದಲವನ್ನುಂಟು ಮಾಡಬಹುದು.ಒಂಟಿತನ - ಅಂತರ್ಮುಖಿಯಾದ ಹದಿಹರೆ ಯದ ಮನಸ್ಸುಗಳು ಒಂಟಿತನ ದಿಂದ ಯಾರೊಡನೆಯೂ ಮನಸ್ಸಿನ ಭಾವನೆ ಗಳನ್ನು ಹಂಚಿಕೊಳ್ಳ ಲಾಗದ ಖಿನ್ನತೆ ಅನುಭವಿಸಬಹುದು. ಅದೇ ಬಹಿರ್ಮುಖಿಯಾದ ಹದಿಹರೆಯದ ಮಕ್ಕಳು ಒಂಟಿತನ ವನ್ನು ನೀಗಲು ಮಾದಕ ದ್ರವ್ಯ ವ್ಯಸನ, ಸ್ನೇಹಿತರ ಅತಿಯಾದ ಸಹವಾಸ, ಇವುಗಳಲ್ಲಿ ತೊಡಗಬಹುದು.ಇವೆಲ್ಲದರ ಪರಿಣಾಮ ಖಿನ್ನತೆ, ನಡವಳಿಕೆಯಲ್ಲಿ ಹಿಂಸೆ - ಹಿಂದು ಮುಂದು ನೋಡದೆ ವರ್ತಿಸುವ ಪ್ರವೃತ್ತಿ ತಲೆದೋರುವುದು. ಇವು `ಆತ್ಮಹತ್ಯೆ~ ಎಂಬ ನಡವಳಿಕೆಯ ಹಿಂದಿನ ಹಂತಗಳು. ಈ ಹಂತಗಳು ಕ್ರಮೇಣ ಆತ್ಮಹತ್ಯೆ ಯ `ಯೋಚನೆ~ ಗಳಿಗೆ ದಾರಿಯಾಗುತ್ತವೆ. ಈ ಯೋಚನೆಗಳು:ಸಾಯುವ ಬಗ್ಗೆ ಯೋಚಿಸುವುದು, ಮಾತನಾಡುವುದು, ಸಾಯುವ ವಿಧಗಳನ್ನು ಚಿಂತಿಸುವುದು.

ಉದ್ದೇಶವಿಲ್ಲದೆ ಬದುಕಲಾರಂಭಿಸುವುದು

ಆತಂಕ, ನಿದ್ರಾಹೀನತೆ

ಹೊರಹೋಗುವ ದಾರಿಯೇ ಮುಚ್ಚಿಹೋದಂತೆ, ಬಂಧನಕ್ಕೆ ಸಿಲುಕಿದಂತೆ ಅನಿಸುವುದು.ಕೋಪ, ಖಿನ್ನತೆ

ಹೆಚ್ಚಿನ ಜನರ ಒಂದು ತಪ್ಪು ಭಾವನೆಯೆಂದರೆ ಆತ್ಮಹತ್ಯೆಯ ಬಗ್ಗೆ ಮಾತನಾಡುವವರು ಹಾಗೆ ಮಾಡುವುದಿಲ್ಲ ಎನ್ನುವುದು.  ಆತ್ಮಹತ್ಯೆಗೆ ಪ್ರಯತ್ನಿಸುವ ಶೇಕಡ 75ರಷ್ಟು ಜನ ಅದರ ಬಗ್ಗೆ ಯಾವುದೇ ರೀತಿಯಲ್ಲಾದರೂ ಮೊದಲೇ ವ್ಯಕ್ತಪಡಿಸಿರುತ್ತಾರೆ ಎಂಬುದು ವೈಜ್ಞಾನಿಕ ಸತ್ಯ.  ಅಷ್ಟೇ ಅಲ್ಲ, ಆತ್ಮಹತ್ಯೆಯ ಬಗ್ಗೆ ಕೇಳುವುದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದಂತಾಗುವ ಬದಲು ನಡೆಯಬಹುದಾದ ಆತ್ಮಹತ್ಯೆಯನ್ನು ತಡೆಗಟ್ಟಲು ಸಾಧ್ಯ ಎನ್ನುವ ಅಂಶವೂ ಮುಖ್ಯವೇ.ಹದಿಹರೆಯದ ಆತ್ಮಹತ್ಯೆಗಳನ್ನು ತಡೆಗಟ್ಟಲು ಹದಿಹರೆಯದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಹಿರಿಯರೆ ಲ್ಲರೂ, ವಿಶೇಷವಾಗಿ ಹದಿಹರೆಯದ ಮಕ್ಕಳ ತಂದೆ-ತಾಯಿಗಳು ತಮ್ಮ ಹದಿಹರೆಯವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ್ದು ಅತ್ಯಗತ್ಯ.ದೇಹದಲ್ಲಿ ಹಲವು ಬದಲಾವಣೆಗಳು, ಸಾಮಾಜಿಕ -ಶೈಕ್ಷಣಿಕ - ಔದ್ಯೋಗಿಕ ಕ್ಷೇತ್ರದ ಆಯ್ಕೆ - ಜವಾಬ್ದಾರಿಗಳ ಒತ್ತಡ, ತನ್ನ ರೂಪ -ಲೈಂಗಿಕತೆಯ ಅರಿವು, ತಂದೆ-ತಾಯಿಗಳ ಜೊತೆಗಿನ ಭಿನ್ನಾಭಿಪ್ರಾಯ-ತಲೆಮಾರುಗಳ ಅಂತರ ಇವು ನಮ್ಮ ಹದಿಹರೆಯದಲ್ಲಿಯೂ ಇದ್ದವು ತಾನೆ? ಅವುಗಳಿಂದ ನಾವು ಹೊರಬರುವ ದಾರಿಗಳು ಯಾವುದಾಗಿದ್ದವು?

 

ಕುಟುಂಬದ ಬೆಂಬಲ-ಮಾರ್ಗದರ್ಶನ, ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಬಲಗೊಳ್ಳುವ ಆತ್ಮ ವಿಶ್ವಾಸ, ಹವ್ಯಾಸಗಳು ಈ ದಾರಿಗಳು ಇಂದಿನ ಸಮಾಜದಲ್ಲಿಯೂ ಇವುಗಳನ್ನು ಕಂಡು ಕೊಳ್ಳುವ ಪ್ರಾಮಾಣಿಕ ಪ್ರಯತ್ನ ಆಗಬೇಕು.ಹದಿಹರೆಯದ ಮಕ್ಕಳು ಈ ಕೆಳಗಿನ ವಿಷಯಗಳ ಬಗ್ಗೆ ಮಾತನಾಡಿದಾಗ ತಂದೆ- ತಾಯಿಗಳು ಎಚ್ಚರವಹಿಸಬೇಕು.  ಇದು `ಮಾತನಾಡಬೇಕಾದ~, `ಗಮನಿಸಬೇಕಾದ~ ಸಮಯ ಎಂದು ತಿಳಿದುಕೊಳ್ಳಬೇಕು.   ಸಾವಿನ ಬಗ್ಗೆ ಸಾಮಾನ್ಯವಾಗಿಯೂ ಮತ್ತೆ ಮತ್ತೆ ಮಾತನಾಡಲಾರಂಭಿಸಿದರೆ

``ನಾನು ಎಲ್ಲಾದರೂ ಹೋಗಿಬಿಡುತ್ತೇನೆ~~ ಎಂದಾಗ

``ನನಗೆ ಮುಂದೇನೂ ಉಳಿದಿಲ್ಲ~~ ಅಥವಾ ``ನಾನು ತಪ್ಪು ಮಾಡಿದ್ದೇನೆ~~ ಎಂಬಂಥ ಅಭಿಪ್ರಾಯಗಳನ್ನು ಸೂಚಿಸಿದಾಗ.

ಸ್ನೇಹಿತರು, ಕುಟುಂಬದಿಂದ ದೂರವಾಗಿ ಒಂಟಿಯಾಗಿ ಸಮಯ ಕಳೆಯಲಾರಂಭಿಸಿದರೆ .ಹದಿಹರೆಯದ ಮಕ್ಕಳ ತಂದೆ ತಾಯಿಗಳು ನೀವಾಗಿದ್ದರೆ:

ಆತ್ಮಹತ್ಯೆಯ ಸಾಧ್ಯತೆಯ ಬಗೆಗೆ ಎಚ್ಚರವಿರಲಿ.

ಹದಿಹರೆಯದ ಮಕ್ಕಳಿಗೆ `ಶಿಸ್ತು - ಸ್ವಾತಂತ್ರ್ಯ~ ಎರಡರ ಅವಶ್ಯಕತೆಯೂ ಇದೆ.

ಹದಿಹರೆಯದ ಮಕ್ಕಳ ಬಳಿ ತಂದೆ-ತಾಯಿ ಪ್ರತಿದಿನ ಉತ್ತಮ ಗುಣಮಟ್ಟದ ಸಮಯ ಕಳೆಯಬೇಕಾದ್ದು ಅತ್ಯಗತ್ಯ.

ನಿಮ್ಮ ನಿರೀಕ್ಷೆಗಳು ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತಿರಬೇಕು.  ಮಕ್ಕಳ ನಿರೀಕ್ಷೆಗಳೂ ಅಷ್ಟೆ.  ಅವರ ಸಾಮರ್ಥ್ಯ - ಶ್ರಮಪಡುವ ಸ್ವಭಾವಕ್ಕೆ ತಕ್ಕಂತೆ ಇರುವಂತೆ ತಂದೆ-ತಾಯಿ ನೋಡಿಕೊಳ್ಳಬೇಕು.

ಕೆಲವೊಮ್ಮೆ ಭಾವನಾತ್ಮಕ ಅಸ್ಥಿರತೆಯ ವ್ಯಕ್ತಿತ್ವದಿಂದ ಹದಿಹರೆಯದ ಮಕ್ಕಳು ಮಾಡುವ `ಸಾಯುವ ಪ್ರಯತ್ನಗಳು~ ನಿಜವಾಗಿ ಸಾಯುವ ದಾರಿಗಳಲ್ಲದಿ ರಬಹುದು.  ಆದರೆ ಅವು ``ನನಗೆ ಸಹಾಯ ಬೇಕು~~ ಎಂದು ಬೇಡುವ ನೋವಿನ ಕರೆಗಳು.  ಹಾಗಾಗಿ ತತ್‌ಕ್ಷಣ ಮನೋ ವೈದ್ಯರ ಸಲಹೆಗೆ ಅವರನ್ನು ಕರೆದೊಯ್ಯಬೇಕಾದ್ದು ಅತ್ಯವಶ್ಯ.

ಹದಿಹರೆಯದ ಮಕ್ಕಳ ನಡವಳಿಕೆ ಹೆಚ್ಚಿನ ತಂದೆ-ತಾಯಿಗಳಿಗೆ ಮಾನಸಿಕ ಒತ್ತಡ ತರಬಹುದು  ರೇಗದಿರಲು, ಕೋಪಿಸದಿರಲು ಅಸಾಧ್ಯ ಎನಿಸುವಂತೆಯೂ ಮಾಡಬಹುದು.  ಆದರೆ ಇದು ತಾತ್ಕಾಲಿಕ.  `ಹದಿಹರೆಯ~ದಿಂದ ಮಕ್ಕಳು ಹರೆಯ-ಯೌವ್ವನದ ಪ್ರಬುದ್ಧತೆಗೆ ಬರುವವರೆಗೆ ಈ ಸಂಘರ್ಷ ಕಾಲ.  ಆ ಸಮಯವನ್ನು ಎದುರಿಸಲು ಮಾನಸಿಕವಾಗಿ ಸಿದ್ಧತೆ ಅಗತ್ಯ.

ಹದಿಹರೆಯದ ಮಕ್ಕಳ - ನಿಮ್ಮ ನಡುವಣ ತಾಕಲಾಟಗಳು ಮತ್ತೆ ಮತ್ತೆ ನಡೆಯುತ್ತಿದ್ದರೆ, ನಿಮಗೂ ಅದನ್ನು ನಿಭಾಯಿಸಲು ಕಷ್ಟ ಎನಿಸಿದರೆ ಸಂದೇಹಿಸದೆ ಕೌಟುಂಬಿಕ ಆಪ್ತ ಸಲಹೆ ಪಡೆಯಿರಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.