ಶನಿವಾರ, ಸೆಪ್ಟೆಂಬರ್ 21, 2019
24 °C

ದರ್ಶನ್ ಜಾಮೀನು: ಇಂದು ತೀರ್ಮಾನ

Published:
Updated:

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿದೆ.ಸೋಮವಾರ ಮಧ್ಯಾಹ್ನ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ.ಎಚ್.ಅಮೃತ್‌ಕುಮಾರ್ ಅವರು ಆರೋಪಿ ದರ್ಶನ್ ಅವರಿಗೆ ಜಾಮೀನು ನೀಡದಂತೆ ಕೋರಿ ಆಕ್ಷೇಪಣಾ ಅರ್ಜಿ ಸಲ್ಲಿಸಿದರು.ನಂತರ ವಾದ ಮಂಡಿಸಿದ ಅಮೃತ್‌ಕುಮಾರ್ ಅವರು, `ಆರೋಪಿ ವಿರುದ್ಧ ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯ್ದೆಯಂತಹ ಗಂಭೀರ ಸ್ವರೂಪದ ಪ್ರಕರಣಗಳಿವೆ. ಆರೋಪಿಯಿಂದ ಹಲ್ಲೆಗೊಳಗಾಗಿರುವ ವಿಜಯಲಕ್ಷ್ಮಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಅಂಶ ತನಿಖಾಧಿಕಾರಿಯ ವರದಿಯಲ್ಲಿದೆ.ಈ ಬಗ್ಗೆ ವೈದ್ಯಕೀಯ ದಾಖಲೆಗಳನ್ನೂ ಸಲ್ಲಿಸಿದ್ದಾರೆ. ಆದ ಕಾರಣ ಆರೋಪಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು~ ಎಂದು ಕೋರಿದರು.`ದೂರುದಾರರು ಈ ಹಿಂದೆ ಪ್ರಕರಣದ ತನಿಖಾಧಿಕಾರಿ ಎದುರು ನೀಡಿದ್ದ ಹೇಳಿಕೆಯನ್ನು ಪರಿಗಣಿಸಬಾರದು. ದೂರುದಾರರು ಖುದ್ದು ನ್ಯಾಯಾಲಯದಲ್ಲಿ ಹಾಜರಾಗಿ ನೀಡುತ್ತಿರುವ ಹೇಳಿಕೆಯನ್ನೇ ಪರಿಗಣಿಸಬೇಕು ಮತ್ತು ಕಕ್ಷಿದಾರರಿಗೆ ಜಾಮೀನು ನೀಡಬೇಕು~ ಎಂದು ದರ್ಶನ್ ಪರ ವಕೀಲ ಸಿ.ಆರ್.ರಾಘವೇಂದ್ರರೆಡ್ಡಿ ಅವರು ಪ್ರತಿ ವಾದ ಮಂಡಿಸಿದರು.ಪ್ರತಿಯಾಗಿ ವಾದಿಸಿದ ಅಮೃತ್‌ಕುಮಾರ್, `ವಿದ್ಯಾವಂತೆ ಆಗಿರುವ ವಿಜಯಲಕ್ಷ್ಮಿ ಅವರು ಸ್ವಇಚ್ಛೆಯಿಂದಲೇ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಅವರು ಯಾರ ಒತ್ತಡಕ್ಕೂ ಮಣಿದು ದೂರು ಕೊಟ್ಟಿಲ್ಲ. ಆದ್ದರಿಂದ ಅವರ ಈಗಿನ ಹೇಳಿಕೆಯನ್ನು ಪರಿಗಣಿಸಬಾರದು.

 

ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಆರೋಪಿ ಪ್ರಭಾವಿ ಆಗಿರುವುದರಿಂದ ಆತನಿಗೆ ಜಾಮೀನು ನೀಡಬಾರದು~ ಎಂದರು. ಎರಡೂ ಕಡೆಯವರ ವಾದ ಆಲಿಸಿದ ನ್ಯಾಯಾಧೀಶ ವೆಂಕಟೇಶ್ ಆರ್. ಹುಲಗಿ ಜಾಮೀನು ಅರ್ಜಿ ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿರುವುದಾಗಿ ಹೇಳಿದರು.ಮುಂದುವರೆದ ಚಿಕಿತ್ಸೆ: ಉಸಿರಾಟದ ತೊಂದರೆ ಇರುವ ಕಾರಣ ನಟ ದರ್ಶನ್ ಅವರಿಗೆ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. `ಸೋಮವಾರ ಬೆಳಿಗ್ಗೆ ದರ್ಶನ್ ಅವರಿಗೆ ಉಸಿರಾಟದ ತೊಂದರೆ ಇತ್ತು. ಆದ್ದರಿಂದ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದ್ದು, ಸ್ಟಿರಾಯ್ಡ ನೀಡಲಾಗಿದೆ. ಕಾಮಾಲೆ ರೋಗದ ಲಕ್ಷಣಗಳೂ ಅವರಿಗೆ ಇವೆ~ ಎಂದು ಆಸ್ಪತ್ರೆ ನಿರ್ದೇಶಕ ಡಾ.ಶಶಿಧರ್ ಬುಗ್ಗಿ ಅವರು `ಪ್ರಜಾವಾಣಿ~ಗೆ ತಿಳಿಸಿದರು.`ಮಂಗಳವಾರ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪರೀಕ್ಷೆಯ ವರದಿಯ ನಂತರ ಮುಂದೆ ಏನು ಮಾಡಬೇಕೆಂಬುದನ್ನು ನಿರ್ಧರಿಸಲಾಗುತ್ತದೆ~ ಎಂದು ಅವರು ಹೇಳಿದರು.

Post Comments (+)