ಗುರುವಾರ , ಮೇ 13, 2021
16 °C

ದಲಿತರಿಗೆ ಭೂಮಿ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಆಡಂಬರದ ಅಂಬೇಡ್ಕರ್ ಜಯಂತಿ ಆಚರಿಸುವ ಬದಲು ಭೂಹೀನ ಬಡವರಿಗೆ ಭೂಮಿ ಹಂಚಿಕೆ ಮೂಲಕ ಅರ್ಥಪೂರ್ಣ ಜಯಂತಿ ಆಚರಣೆ ಮಾಡುವಂತೆ ಒತ್ತಾಯಿಸಿ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನಾ ರ‌್ಯಾಲಿ ನಡೆಯಿತು.ಸರಕಾರಿ ಹೆಚ್ಚುವರಿ ಶೇ. 75ರಷ್ಟು ಭೂಮಿಯನ್ನು ದಲಿತರಿಗೆ, ಆದಿವಾಸಿಗಳಿಗೆ ಮೀಸಲಿಟ್ಟು ಹಂಚಬೇಕು ಎಂದು ಕೆಂದ್ರ ಹಾಗೂ ರಾಜ್ಯ ಸರಕಾರಗಳು ಒಟ್ಟಿಗೆ ಆದೇಶ ಮಾಡಿ ಈಗಾಗಲೇ ಇಪ್ಪತ್ತು ವರ್ಷಗಳೇ ಕಳೆದಿದ್ದರೂ, ಹೆಚ್ಚುವರಿ ಭೂಮಿಯನ್ನು ಸಮಪರ್ಕವಾಗಿ ಹಂಚಲು ಸಾಧ್ಯವಾಗದೆ ಅಂಬೇಡ್ಕರ್ ಹಾಗೂ ದಲಿತರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ದೂರಿದರು.ಸರಕಾರ ಅಭಿವೃದ್ದಿ ನೆಪದಲ್ಲಿ ರಾಜ್ಯದ ಫಲವತ್ತಾದ ಕೃಷಿ ಭೂಮಿ ಅಕ್ರಮವಾಗಿ ಭೂಸ್ವಾಧೀನ ಮಾಡಿ ಭೂಮಾಲೀಕರಿಗೆ, ದೇಶ, ವಿದೇಶಿ ಬಹು ರಾಷ್ಟ್ರೀಯ ಕಂಪೆನಿಗಳಿಗೆ ಪರಭಾರೆ ಮಾಡುತ್ತಿದೆ. ಆದರೆ, ಕಳೆದ 50 ವರ್ಷಗಳಿಂದಲೂ ತುಂಡು ಭೂಮಿಗಾಗಿ ಸಾಗುವಳಿ ಮಾಡುತ್ತ ಹಕ್ಕು ಪತ್ರಕ್ಕಾಗಿ ಒತ್ತಾಯಿಸುತ್ತಿದ್ದರೂ, ಬಡ ಭೂಹೀನರಿಗೆ ಭೂಮಿ ಕೊಡುವ ಕನಿಷ್ಟ ಕಾಳಜಿ ತೋರಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.ಕೌಟುಂಬಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ಸತೀಶ್‌ನಾಯ್ಕನನ್ನು ಬಂಧಿಸಿ ಠಾಣೆಯಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ.  ಪೊಲೀಸರ ಮಾನಸಿಕ ಕಿರುಕುಳದಿಂದ ಮನನೊಂದು ಸತೀಶ್ ನಾಯ್ಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ.

ಸಾವಿನ ಪ್ರಕರಣದ ಸತ್ಯಾಂಶ ತಿಳಿಯಲು ಭರಮಸಾಗರ ಪೊಲೀಸ್ ಸಬ್ ಇನ್ಸಪೆಕ್ಟರ್‌ರನ್ನು ಅಮಾನತುಗೊಳಿಸಬೇಕು ಮತ್ತು ಈ ಪ್ರಕರಣ ಸಿಐಡಿ ತನಿಖೆ ಆಗಬೇಕು ಎಂದು ಆಗ್ರಹಿಸಿ ಜಿಲ್ಲಾಕಾರಿಗೆ ಮನವಿ ಸಲ್ಲಿಸಿದರು.ಬಡವರು, ದಲಿತರು, ಅಸಹಾಯಕರ ಸಮುದಾಯಗಳನ್ನು ಕ್ಷುಲ್ಲಕ ಕಾರಣದಿಂದ ಆರೋಪಿಯನ್ನಾಗಿ ಮಾಡಿ ಪೊಲೀಸ್ ಠಾಣೆಗೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿ ಸಾವಿಗೆ ಕಾರಣರಾಗುತ್ತಿದ್ದು, ಇವರ ದೌರ್ಜನ್ಯ ಹಾಗೂ ಉಪಟಳದಿಂದ ಭರಮಸಾಗರ ವ್ಯಾಪ್ತಿಯ ಪರಿಶಿಷ್ಟ ಜಾತಿ, ದಲಿತರು, ಲಂಬಾಣಿ ಜನಾಂಗದವರಿಗೆ ಕಾನೂನಿನ ರಕ್ಷಣೆ ಇಲ್ಲದಂತಾಗಿದೆ.ಈ ಕಾರಣದಿಂದ ಭಯಬೀತರಾಗಿ ಬದುಕುವ ವಾತಾವರಣ ನಿರ್ಮಾಣವಾಗಿದೆ. ನಮಗೆ ರಕ್ಷಣೆ ಕೊಡಿ ಮತ್ತು ಮಗನನ್ನು ಕಳೆದುಕೊಂಡ ಅನಾಥೆ ಸತೀಶನ ತಾಯಿಗೆ ಸರಕಾರ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ರಾಜ್ಯ ಸಂಘಟನಾ ಸಂಚಾಲಕ ಮಾಡನಾಯಕನಹಳ್ಳಿ ರಂಗಪ್ಪ, ಸಾಕಿಬಾಯಿ, ವೀರಭದ್ರನಾಯ್ಕ, ಧನಲಕ್ಷ್ಮೀ, ಗೀತಾ, ನವ್ಯಾ, ತಿಪ್ಪೇಸ್ವಾಮಿ, ವೇದಿಕೆಯ ಜಿಲ್ಲಾ ಸಂಚಾಲಕ ಭೀಮನಕೆರೆ ಶಿವಮೂರ್ತಿ, ಜಿಲ್ಲಾ ಸಂಘಟನಾ ಸಂಚಾಲಕ ಪ್ರಕಾಶ, ಎನ್. ಹೊನ್ನೂರು ಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.