ಸೋಮವಾರ, ಜನವರಿ 20, 2020
29 °C

ದಲಿತರ ಕಾಲೊನಿ ಒತ್ತುವರಿ ತೆರವಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ತಾಲ್ಲೂಕಿನ ಹುಚ್ಚವ್ವನಹಳ್ಳಿಯ ದಲಿತರ ಕಾಲೊನಿಗೆ ಹೊಂದಿಕೊಂಡು ಇರುವ ಜಮೀನಿನ ರೈತರೊಬ್ಬರು, ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಶನಿವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

 

ಅತಿಕ್ರಮಣ ಮಾಡಿಕೊಂಡಿರುವ ಜಾಗದಲ್ಲಿ ತಂತಿ ಬೇಲಿ ನಿರ್ಮಿಸಿರುವ ಕಾರಣ, ರೈತರ ಜಮೀನುಗಳಿಗೆ ಹೋಗಲು ಇದ್ದ ಕಾಲುದಾರಿ ಇಲ್ಲದಂತಾಗಿದೆ. ತಾವು ಖುದ್ದು ಸ್ಥಳಕ್ಕೆ ಆಗಮಿಸಿ, ದಾಖಲೆಗಳನ್ನು ಪರಿಶೀಲಿಸಿ, ಗ್ರಾಮಸ್ಥರ ಅಭಿಪ್ರಾಯ ಪಡೆದು ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ತಹಶೀಲ್ದಾರರಿಗೆ ಸಲ್ಲಿಸಿರುವ ಮನವಿಯಲ್ಲಿ  ತಿಳಿಸಿದ್ದಾರೆ.ಪ್ರತಿಭಟನೆಯಲ್ಲಿ ಡಾ.ಪ್ರಕಾಶ್, ಷಣ್ಮುಖ, ರಾಘವೇಂದ್ರ, ಕರಿಯಪ್ಪ, ರಮಾ, ಸುಧಾ, ಗೌರಮ್ಮ, ಚಂದ್ರಮ್ಮ, ಜಯಮ್ಮ, ಸಿ. ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.ಎನ್‌ಎಸ್‌ಎಸ್ ಶಿಬಿರ

ಯುವಕರಿಂದ ಮಾತ್ರ ರಾಷ್ಟ್ರದಲ್ಲಿ ಕ್ರಿಯಾತ್ಮಕ ಬದಲಾವಣೆ ತರಲು ಸಾಧ್ಯ ಎಂದು ಮುಖ್ಯ ಶಿಕ್ಷಕ ಕೆ.ಎಂ. ನಾಗರಾಜ್ ಹೇಳಿದರು.ತಾಲ್ಲೂಕಿನ ಕಳವಿಬಾಗಿ ಗ್ರಾಮದಲ್ಲಿ ನಗರದ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಎರಡನೇ ದಿನವಾದ ಭಾನುವಾರ `ರಾಷ್ಟ್ರಾಭಿವೃದ್ಧಿಯಲ್ಲಿ ಯುವಜನರ ಪಾತ್ರ~ ವಿಷಯ ಕುರಿತು ಅವರು ಮಾತನಾಡಿದರು.ದೇಶದಿಂದ ನಮಗೇನು ಸಿಗುತ್ತಿದೆ ಎಂದುಕೊಳ್ಳುವ ಬದಲು, ದೇಶಕ್ಕಾಗಿ ನಾನೇನು ಮಾಡಲು ಸಾಧ್ಯ ಎಂಬ ಚಿಂತನೆ ಮಾಡಬೇಕಿದೆ. ದೇಶದಲ್ಲಿ ಬದಲಾವಣೆಯ ಗಾಳಿಯನ್ನು ಯುವಕರಿಂದ ಮಾತ್ರ ನಿರೀಕ್ಷಿಸಲು ಸಾಧ್ಯ. ಗುರುಗಳ ಮಾರ್ಗದರ್ಶನದಲ್ಲಿ, ಸರಿದಾರಿಯಲ್ಲಿ ನಡೆದು, ತಮ್ಮ ವೈಯಕ್ತಿಕ ಬದುಕಿನ ಜತೆಗೆ ಹುಟ್ಟಿದ ಸಮಾಜದ ಋಣವನ್ನು ತೀರಿಸುವ ಹೊಣೆ ಯುವಕರ ಮೇಲಿದೆ ಎಂದು ಅವರು ತಿಳಿಸಿದರು.ಗ್ರಾ.ಪಂ. ಅಧ್ಯಕ್ಷ ಲಕ್ಷ್ಮಣಪ್ಪ ಅಧ್ಯಕ್ಷತೆ ವಹಿಸಿದ್ದರು. ಪಿ.ಕೆ. ಶ್ರೀಧರ, ಕೆ.ಎಂ. ವೀರೇಂದ್ರ, ವಿಠಲ, ರಾಮಚಂದ್ರ, ರಂಗನಾಥ, ದಯಾನಂದ, ಅರವಿಂದ್, ಪ್ರಸಾದ್  ಮತ್ತಿತರರು ಉಪಸ್ಥಿತರಿದ್ದರು. 

ಶಿಬಿರಾಧಿಕಾರಿ ಸಿ.ಟಿ. ಶ್ರೀನಿವಾಸ್ ಸ್ವಾಗತಿಸಿದರು. ಕಾವ್ಯಾ ವಂದಿಸಿದರು. ರಾಹುಲ್ ಕಾರ್ಯಕ್ರಮ ನಿರೂಪಿಸಿದರು.ಶಿಬಿರಾರ್ಥಿಗಳು ಶ್ರಮದಾನದ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣವನ್ನು ಸ್ವಚ್ಛಗೊಳಿಸಿದರು.ಹನುಮಂತಪ್ಪ ಆಯ್ಕೆ

ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ  ಬಿ. ಹನುಮಂತಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಮೇಶ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)