ಗುರುವಾರ , ಜೂನ್ 17, 2021
29 °C

ದಲಿತರ ಬೀದಿಗೆ ಗ್ರಹಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ:ಮನೆ ಮುಂದೆಯೇ ನಿಂತು ಕೊಳೆತು ನಾರುವ ಕೊಚ್ಚೆಗುಂಡಿ, ಚರಂಡಿಯ ನೀರು ಹೊರ ಹೋಗಲು ಅವಕಾಶ ಇಲ್ಲದೇ ಕಸಕಡ್ಡಿಗಳಿಂದ ಭರ್ತಿಯಾಗಿ ಕೊಳೆತು ನಾರುವ ಚರಂಡಿ. ಇದು ಪಟ್ಟಣದ ಕೂಗಳತೆಯಲ್ಲಿರುವ ಲಿಂಗಣಾಪುರ ಗ್ರಾಮದ ದಲಿತರ ಬಡಾವಣೆಯ ದೃಶ್ಯ.ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಲಿಂಗಣಾಪುರ ಗ್ರಾಮದ ದಲಿತರ ಹಳೇ ಬೀದಿಗಳು ಮತ್ತು ಹೊಸ ಬಡಾವಣೆಯಲ್ಲಿ ಇಷ್ಟು ವರ್ಷ ಕಳೆದರೂ ಚರಂಡಿ ನಿರ್ಮಿಸಿಕೊಡಬೇಕು ಎಂಬ ಅರಿವು ಯಾರಿಗೂ ಬಂದಿಲ್ಲ.ಚರಂಡಿ ನಿರ್ಮಿಸದ ಕಾರಣ ಮನೆಯಲ್ಲಿ ಜನರು ಹೆಚ್ಚಾಗಿ ನೀರನ್ನು ಬಳಕೆ ಮಾಡಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಮನೆಬಳಕೆಯ ನೀರು ಮನೆ ಮುಂಭಾಗವೇ ನಿಂತು ಕೊಚ್ಚೆಗುಂಡಿಯಾಗಿ ಪರಿಣಮಿಸಿ ಬೀದಿ ಸೊಳ್ಳೆಗಳ ಅವಾಸಸ್ಥಾನವಾಗಿ ಪರಿಣಮಿಸಿದೆ.ಉದ್ಯೋಗ ಖಾತ್ರಿ ಯೋಜನೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಸೇರಿದಂತೆ ಹಲವಾರು ಕಡೆಗಳಿಂದ ಚರಂಡಿ ನಿರ್ಮಾಣ ಕಾಮಗಾರಿಗೆ ವಿಫುಲ ಅವಕಾಶಗಳು ಇದ್ದಾಗಲೂ ಕೂಡ ಈ ಗ್ರಾಮದ ದಲಿತರ ಬಡಾವಣೆಗೆ ಚರಂಡಿ ನಿರ್ಮಿಸಿಲ್ಲ ಎಂದು ಸಿಂಧು ಮಹಿಳಾ ಸ್ವಸಹಾಯ ಸಂಘದ ಸದಸ್ಯರು. ದೂರಿದ್ದಾರೆ.ಬಡಾವಣೆಯ ಎರಡು ಕಡೆಗಳಲ್ಲಿ ಚರಂಡಿ ನಿರ್ಮಿಸಿದ್ದು, ಇದು ಕೇವಲ ಗುತ್ತಿಗೆದಾರರ ಜೇಬು ತುಂಬಿಸುವ ಕೆಲಸ ಆಗಿದೆ. ಈ ಚರಂಡಿಯಿಂದ ಈ ಬಡಾವಣೆ ಜನತೆಗೆ ಮತ್ತಷ್ಟು ತೊಂದರೆಯಾಗಿದೆ. ಚರಂಡಿಯ್ಲ್ಲಲಿನ ನೀರು ಮುಂದೆ ಎಲ್ಲಿಯೂ ಹೋಗದ ಕಾರಣ ಚರಂಡಿ ಕಸಕಡ್ಡಿಗಳಿಂದ ತುಂಬಿ ದುರ್ನಾತ ಬೀರುವ ತೊಟ್ಟಿಯಾಗಿ ಪರಿಣಮಿಸಿ ಜನತೆಗೆ ರೋಗರುಜಿನ ತರುವ ಸ್ಥಿತಿ ನಿರ್ಮಾಣವಾಗಿದೆ.ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಡಾವಣೆಯಲ್ಲಿ ಚರಂಡಿಗಳನ್ನು ನಿರ್ಮಿಸಿ ಚರಂಡಿ ನೀರು ಸರಾಗವಾಗಿ ಹೊರ ಹೋಗುವ ವ್ಯವಸ್ಥೆ ಕಲ್ಪಿಸುವ ಬಗ್ಗೆ ಗಮನಹರಿಸಬೇಕು ಎಂದು ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.