ಬುಧವಾರ, ಮೇ 25, 2022
22 °C

ದಸರಾಗೊಂಬೆಯಲ್ಲೂ ಪರಿಸರ ಕಾಳಜಿ

ಪ್ರಜಾವಾಣಿ ವಾರ್ತೆ, ಆರ್.ವೀರೇಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಗದಗ: ನವರಾತ್ರಿ ಪ್ರಾರಂಭವಾಯಿತೆಂದರೇ ಸಾಕು ಅಟ್ಟಣಿಗೆಯಲ್ಲಿ ಇದ್ದ ದಸರಾಗೊಂಬೆಗಳು ಕೆಳಗೆ ಇಳಿದು ಬಂದು ಜೀವ ಕಳೆ ತಂದುಕೊಳ್ಳುತ್ತವೆ. ಮಹಾಲಯ ಅಮಾವಾಸ್ಯೆಯಿಂದ ವಿಜಯದಶಮಿ ತನಕ ಮೆರೆಯಲು ಶುರು ಮಾಡುತ್ತವೆ.ದಸರಾಗೊಂಬೆಗಳನ್ನು ಕೂರಿಸುವವರು ಅಷ್ಟೆ, ತಾವು ಯಾರಿಗೇನು ಕಮ್ಮಿ ಇರಬಾರದು ಎಂದು ಒಂದಕ್ಕಿಂತ ಒಂದು ಅಂದ-ಚಂದದ ಗೊಂಬೆಗಳನ್ನು ಕೂರಿಸುತ್ತಾರೆ. ಇದೆಲ್ಲ ದಕ್ಷಿಣ ಕರ್ನಾಟಕದಲ್ಲಿ, ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಪ್ರಖ್ಯಾತಿ ಹೊಂದಿದೆ. ಉತ್ತರ ಕರ್ನಾಟಕದಲ್ಲೂ ಅಲ್ಲಲ್ಲಿ ಕೆಲವು ಕುಟುಂಬಗಳು ದಸರಾಗೊಂಬೆಗಳನ್ನು ಕೂರಿಸುತ್ತಾರೆ.ಗದುಗಿನ ಹೆಲ್ತ್‌ಕ್ಯಾಂಪಿನಲ್ಲಿ ವಾಸವಾಗಿರುವ ರಾಜೇಂದ್ರನ್ ಅವರ ಮನೆಯಲ್ಲೂ ದಸರಾಗೊಂಬೆಗಳನ್ನು ಕೂರಿಸಿದ್ದಾರೆ. ಆದರೆ ಈ ಗೊಂಬೆಗಳನ್ನು ಪ್ರದರ್ಶಿಸುವುದರ ಜೊತೆಗೆ ಪರಿಸರ ಕಾಳಜಿಯನ್ನು ಮೆರೆದಿದ್ದಾರೆ. ಗೊಂಬೆ ನೋಡಲು ಬಂದವರಿಗೆ, ಪೂಜೆ ಸಲ್ಲಿಸಲು ಬರುವ ಗೃಹಿಣಿಯರಿಗೆ ಸ್ವಲ್ಪ ಹೊತ್ತು ಪರಿಸರ ಪಾಠವೂ ನಡೆಯುತ್ತದೆ.ಈ ರೀತಿ ಪರಿಸರ ಕಾಳಜಿಯ ಗೊಂಬೆ ಪ್ರದರ್ಶನದ ಹಿಂದೆ ರಾಜೇಂದ್ರನ್ ಅವರ ಮಗಳಾದ ಅನುಷ್ಕ ಅವರ ಪರಿಶ್ರಮ ಹಾಗೂ ಪ್ರಯತ್ನ ಇದೆ. ಲೊಯಿಲಾ ಕಾನ್ವೆಂಟ್‌ನಲ್ಲಿ 9ನೇ ತರಗತಿ ಓದುತ್ತಿರುವ ಅನುಷ್ಕ, ಮನೆಯೊಳಗೆ ಸಣ್ಣದೊಂದು `ಮಾದರಿ~ ಊರನ್ನು ಸಾಕಾರಗೊಳಿಸಿದ್ದಾರೆ.ದಸರಾಗೊಂಬೆಗಳನ್ನು ಇಟ್ಟಿರುವ ಜಾಗದ ಪಕ್ಕದಲ್ಲಿಯೇ ಇಟ್ಟಿಗೆಯನ್ನು ಇಟ್ಟು, ಮಣ್ಣನ್ನು ಹಾಕಿ ರಾಗಿಯ ಪೈರನ್ನು ಬೆಳೆಸಲಾಗಿದೆ. ಪೈರಿನ ನಡುವೆ ಹುಲಿ, ಸಿಂಹ, ಆನೆ, ಸಾರಂಗ, ಜಿಂಕೆ, ಕೋತಿ, ಹಣ್ಣು ತಿನ್ನುತ್ತಿರುವ ಅಳಿಲು, ನಾಯಿ ಮರಿಯ ಗೊಂಬೆಗಳನ್ನು ಇಡಲಾಗಿದೆ. ಇವುಗಳ ಮಧ್ಯದಲ್ಲಿ ಪಕ್ಷಿಗಳು, ನೀರು ತುಂಬಿದ ಬೊಗಣಿಯೂ ಇದೆ.

ಮೂಲೆಯಲ್ಲಿ ಸಣ್ಣ ಗುಡಿಸಲು, ಅದರ ಮುಂದೊಂದು ಆಟೋ. ಜೊತೆಗೊಂದಿಷ್ಟು ಪರಿಸರ ಕಾಳಜಿಯ ಬರಹ.

ಪರಿಸರ ನಾಶವಾಗುತ್ತಿದೆ. ವಾಯು ಮಾಲಿನ್ಯ, ಜಲಮಾಲಿನ್ಯ ಹೆಚ್ಚಾಗಿ ಆಗುತ್ತಿರುವ ಬಗ್ಗೆ ಪ್ರತಿನಿತ್ಯ ಕೇಳುತ್ತಿದ್ದೇವೆ. ಆದ್ದರಿಂದ ಪರಿಸರ ಉಳಿಸಿ-ಬೆಳೆಸಿದರೆ ನಮಗೆ ಒಳ್ಳೆಯದು. ಅದಕ್ಕಾಗಿಯೇ ಈ ರೀತಿಯಾಗಿ ಪರಿಸರ ಕಾಳಜಿಯ ಬಗ್ಗೆ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ಅನುಷ್ಕ `ಪ್ರಜಾವಾಣಿ~ಗೆ ತಿಳಿಸಿದರು.15 ವರ್ಷದಿಂದ ಪೂಜೆ: ಗದುಗಿನಲ್ಲಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ರಾಜೇಂದ್ರನ್ ಅವರ ಮನೆಯಲ್ಲಿ ಕಳೆದ 15 ವರ್ಷಗಳಿಂದಲೂ ಗೊಂಬೆ ಪ್ರದರ್ಶನ ಮತ್ತು ಪೂಜೆ ನಡೆಯುತ್ತ ಬಂದಿದೆ.ಐದು ಹಂತಗಳನ್ನು ಮಾಡಿ, ಅದರ ಮೇಲೆ ನೂರಾರು ಗೊಂಬೆಗಳನ್ನು ಇಡಲಾಗಿದೆ. ಮರದಗೊಂಬೆ, ಪಿಂಗಾಣಿ ಗೊಂಬೆ, ಮಣ್ಣಿನ ಗೊಂಬೆಗಳನ್ನು ಇಡಲಾಗಿದೆ. ಇವುಗಳಿಗೆಲ್ಲಾ ಕಳಶವಿಟ್ಟಂತೆ ಗೌರಿಯ ಗೊಂಬೆಯನ್ನು ತುತ್ತತುದಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.ನಮ್ಮ ತವರು ಮನೆಯಲ್ಲಿ ಹಿಂದಿನಿಂದಲೂ ದಸರಾ ಗೊಂಬೆಗಳನ್ನು ಇಡುವುದು ಸಂಪ್ರದಾಯ. ಅದನ್ನೇ ಈಗಲೂ ಮುಂದುವರಿಸಿಕೊಂಡು ಬಂದಿದ್ದೇವೆ ಎಂದು ತ್ರಿವೇಣಿ ರಾಜೇಂದ್ರನ್ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.