ಸೋಮವಾರ, ಮೇ 17, 2021
21 °C

ದಸರಾ: ಗತಕಾಲದ ಚಿತ್ರ, ಪತ್ರ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಸಮೀಪಿಸುತ್ತಿದೆ. ಇದು ಮೈಸೂರಿನ ಗತವೈಭವ, ಅಂದಿನ ಅರಸರ ದರ್ಬಾರ್‌ಗಳನ್ನು ಮೆಲುಕು ಹಾಕುವ ಸಮಯವೂ ಹೌದು. ಇಂಥದೊಂದು ಅವಕಾಶವನ್ನು ಕಲ್ಪಿಸಿದೆ ರಾಜ್ಯ ಪತ್ರಾಗಾರ ಇಲಾಖೆ.ಇಲ್ಲಿನ `ಮಿಥಿಕ್ ಸೊಸೈಟಿ~ಯಲ್ಲಿ ಶುಕ್ರವಾರ ಆರಂಭವಾದ `ಕಲೆ ಮತ್ತು ಸಂಸ್ಕೃತಿ, ಐತಿಹಾಸಿಕ ದಾಖಲೆಗಳ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮ~ದಲ್ಲಿ 1910, 1920ರ ಅವಧಿಯ ಮೈಸೂರು ದಸರಾ ಕಾರ್ಯಕ್ರಮದ ವೈಭವದ ಕುರಿತು ಮಾಹಿತಿ ನೀಡುವ ಅಪೂರ್ವ ಛಾಯಾಚಿತ್ರಗಳು ಮತ್ತು ಪತ್ರಗಳು ನೋಡಲು ಲಭ್ಯವಿದೆ.ಖ್ಯಾತ ಚಿತ್ರ ಕಲಾವಿದರಾದ ರಾಜಾ ರವಿವರ್ಮ, ವೆಂಕಟಪ್ಪ, ರುಮಾಲೆ ಚನ್ನಬಸವಯ್ಯ ಮುಂತಾದವರು ಕಲಾಕೃತಿಗಳ ಬಗ್ಗೆ ನಡೆಸಿದ ಪತ್ರ ವ್ಯವಹಾರಗಳು, 1922ರಲ್ಲಿ ಅಂದಿನ ದಿವಾನರಾಗಿದ್ದ ಸರ್. ಮಿರ್ಜಾ ಇಸ್ಮಾಯಿಲ್ ಅವರು ಕವಿ ರವೀಂದ್ರನಾಥ ಟ್ಯಾಗೋರ್ ಅವರನ್ನು ಮೈಸೂರಿಗೆ ಆಹ್ವಾನಿಸಿ ಬರೆದಿದ್ದ ಪತ್ರಗಳನ್ನು ಪ್ರದರ್ಶನದಲ್ಲಿ ನೋಡಲು ಅವಕಾಶ ಕಲ್ಪಿಸಲಾಗಿದೆ.ಇದಲ್ಲದೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವಿವಾಹ ಸಮಾರಂಭದ ಆಹ್ವಾನ ಪತ್ರಿಕೆ, ಜಯಚಾಮರಾಜೇಂದ್ರ ಒಡೆಯರ್ ಅವರ ಯಜ್ಞೋವೀತ ಧಾರಣಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ, ಅವರ ಸಹೋದರಿಯ ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆಗಳನ್ನೂ ಇಲ್ಲಿ ನೋಡಬಹುದು.ಶುಕ್ರವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ತುಮಕೂರು ವಿ.ವಿ.ಯ ನಿವೃತ್ತ ಕುಲಪತಿ ಒ. ಅನಂತರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ಕಾರ್ಯದರ್ಶಿ ಸುಧಾಕರ ಶೆಟ್ಟಿ, ಪ್ರಾಚ್ಯವಸ್ತು ಇಲಾಖೆಯ ನಿರ್ದೇಶಕ ಸಿದ್ಧನಗೌಡ, ಮಿಥಿಕ್ ಸೊಸೈಟಿಯ ಅಧ್ಯಕ್ಷ ಡಾ.ಎಂ.ಕೆ.ಎಲ್.ಎನ್. ಶಾಸ್ತ್ರಿ ಮತ್ತಿತರರು ಪಾಲ್ಗೊಂಡಿದ್ದರು. ಶನಿವಾರವೂ ನಡೆಯಲಿದ್ದು, ಬೆಳಿಗ್ಗೆ 10.30ರಿಂದ ಸಂಜೆ 6ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.