ಗುರುವಾರ , ಏಪ್ರಿಲ್ 15, 2021
24 °C

ದಾಖಲೆಗಳ ಮರ ಸಿಕ್ಪೋಯಾ

ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

ಇದೊಂದು ವೃಕ್ಷ. ಅದ್ವಿತೀಯ ದಾಖಲೆಗಳ, ಅತಿ ವಿಸ್ಮಯದ ಗುಣಗಳ, ಅಸದಳ ಸಾಮರ್ಥ್ಯಗಳ ವೃಕ್ಷ. `ಸಿಕ್ಪೋಯಾ~ ಎಂಬ ಹೆಸರಿನ ಈ ವೃಕ್ಷದ್ದೇ ಎರಡು ಪ್ರಭೇದಗಳಿವೆ ಕೂಡ: `ಸಿಕ್ಪೋಯಾ ಜೈಗಾಂಟಿಯಾ ಮತ್ತು ಸಿಕ್ಪೋಯಾ ಸೂಪರ್ ವೈರೆಸ್ಸ್~ ಆದರೂ ಈ ಎರಡೂ ಪ್ರಭೇದಗಳನ್ನೂ ಒಟ್ಟಾಗಿ `ರೆಡ್ ಉಡ್ಸ್~ ಎಂದೇ ಕರೆವುದು ಸಾಮಾನ್ಯ `ಬಿಗ್ ಟ್ರೀಸ್~ (ಬೃಹತ್ ವೃಕ್ಷಗಳು) ಎಂಬ ಹೆಸರಿನಿಂದಲೂ ಅವು ಪ್ರಸಿದ್ಧ.ಗೆಳೆಯರೇ, ನಿಮಗೇ ತಿಳಿದಂತೆ ವೃಕ್ಷಗಳಲ್ಲಿ ಹತ್ತಾರು ಸಾವಿರ ವಿಧಗಳಿವೆ. ಭವ್ಯತೆಗೆ, ರಮ್ಯತೆಗೆ, ಉಪಯಕ್ತತೆಗೆ, ಭಾರೀ ಗಾತ್ರಕ್ಕೆ, ದೀರ್ಘ ಆಯುಷ್ಯಕ್ಕೆ ಅವು ಪ್ರತಿಮೆಗಳಾಗಿವೆ.

 

ಹೇರಳ ಜೀವಿಗಳಿಗೆ ಆಶ್ರಯತಾಣವಾಗಿ, ಆಹಾರದ ಆಕರವಾಗಿ ಜೀವಲೋಕದ ಅತ್ಯದ್ಭುತ, ಅಸದೃಶ, ಅತ್ಯವಶ್ಯ ಸೃಷ್ಟಿಗಳಾಗಿವೆ. ಅಂತಹ ವೃಕ್ಷ ಸಾಮ್ರಾಜ್ಯದಲ್ಲಿ ಅತಿ ವಿಶಿಷ್ಟ ವೃಕ್ಷಗಳೂ ಹೇರಳ.ಉದಾಹರಣೆಗೆ ದೀರ್ಘಾಯುಷ್ಯಕ್ಕೆ `ಪೈನ್~ ವೃಕ್ಷ (ಚಿತ್ರ - 2), ಅತಿ ವಿಚಿತ್ರ ಜೀವನ ಕ್ರಮಕ್ಕೆ `ಫಿಗ್~ ವೃಕ್ಷ (ಚಿತ್ರ - 3) ಇತ್ಯಾದಿ. ಆದರೆ ಉನ್ನತಿಯಲ್ಲಿ, ಒಟ್ಟು ದ್ರವ್ಯರಾಶಿಯಲ್ಲಿ, ಯಶಸ್ವೀ ಬದುಕಿನ ತಂತ್ರಗಳಲ್ಲಿ ಸಿಕ್ಪೋಯಾ ವೃಕ್ಷಗಳಿಗೆ ಸರಿಸಾಟಿ ಬೇರಾವ ವೃಕ್ಷವೂ ಇಲ್ಲ. ಸಿಕ್ಪೋಯಾ ವೃಕ್ಷಗಳ ಅನನ್ಯ ದಾಖಲೆಗಳನ್ನು ಗಮನಿಸಿ:- ಎತ್ತರದ ಬೆಳವಣಿಗೆಯಲ್ಲಿ ಈ ವೃಕ್ಷದ್ದೇ ವಿಶ್ವದಾಖಲೆ. ಸಿಕ್ವೋಯಾ ವೃಕ್ಷದ ಇಪ್ಪತ್ತೇ ವರ್ಷ ವಯಸ್ಸಿನ ಎಳೆ ಸಸಿಗಳೇ 50 ಅಡಿ ಎತ್ತರ ಇರುತ್ತವೆ. ಸಿಕ್ವೋಯಾ ವೃಕ್ಷಗಳು 350 ಅಡಿ ಎತ್ತರವನ್ನೂ ಮೀರಿ ಬೆಳೆಯುತ್ತವೆ. ಇಸವಿ 2006 ರಲ್ಲಿ ಪತ್ತೆಯಾದ `ಸಿಕ್ಪೋಯಾ ಸೂಪರ್ ನೈರೆನ್ಸ್~ ಪ್ರಭೇದದ ಒಂದು ವೃಕ್ಷದ್ದೇ ಎತ್ತರದಲ್ಲಿ ಈ ವರೆಗಿನ ವಿಶ್ವದಾಖಲೆ. `ಹೈಪರಿಯಾನ್~ ಎಂಬ ಹೆಸರಿನ ಈ ವೃಕ್ಷದ ಈಗಿನ ಎತ್ತರ 379 ಅಡಿ! ಅಂಗುಲ! ಎಂದರೆ ಸುಮಾರು ನಲವತ್ತೈದು ಮಹಡಿ ಕಟ್ಟಡದಷ್ಟು ಎತ್ತರ!-ಸಿಕ್ಪೋಯಾದ ಮತ್ತೊಂದು ಪ್ರಭೇದ `ಸಿಕ್ಪೋಯಾ ಜೈಂಗಾಟಿಯಾ~ದ ಒಂದು ವೃಕ್ಷ ಗಾತ್ರ ಮತ್ತು ತೂಕ ಎರಡರಲ್ಲೂ ವಿಶ್ವದಾಖಲೆ ಸೃಷ್ಟಿಸಿದೆ. ಅದರ ಎತ್ತರ 272 ಅಡಿ, ಕಾಂಡದ ಸುತ್ತಳತೆ 101 ಅಡಿ 7 ಅಂಗುಲ; ಒಟ್ಟು ತೂಕ 2145 ಟನ್! ಈ ಪ್ರಭೇದದ ಒಂದು ವೃಕ್ಷದ ಕಾಂಡದ ಮೂಲಕವೇ ರಸ್ತೆಯನ್ನೇ ಕೊರೆದ ಅದ್ಭುತ ದಾಖಲೆಯೂ ಇದೆ (ಚಿತ್ರ - 5).- ಆಯುಷ್ಯದಲ್ಲಿ ವಿಶ್ವದಾಖಲೆ ಹೊಂದಿಲ್ಲದಿದ್ದರೂ ಸಿಕ್ಪೋಯಾಗಳದು ಬಹು ದೀರ್ಘ ಆಯುಷ್ಯ - ಇಪ್ಪತ್ತು ವರ್ಷವಾದರೂ `ಸಸಿ~ ಆಗಿ, ಎಪ್ಪತ್ತು ವರ್ಷದ ವೇಳೆಗೆ `ಹದಿಹರೆಯ~ ತಲುಪುವ, ಮುನ್ನೂರು ವರ್ಷ ವಯಸ್ಸಾದಾಗ `ವಯಸ್ಕ~ ಆಗುವ ಸಿಕ್ಪೋಯಾಗಳು ನಾಲ್ಕು - ಐದು ಸಾವಿರ ವರ್ಷ ಆರಾಮವಾಗಿ ಬಾಳಬಲ್ಲವು! (ವಿವಿಧ ಎತ್ತರ, ಗಾತ್ರಗಳ ಸಿಕ್ಪೋಯಾ ವೃಕ್ಷಗಳನ್ನೂ ಸಿಕ್ಪೋಯಾ ತೋಪುಗಳನ್ನೂ ಚಿತ್ರಗಳಲ್ಲಿ ಗಮನಿಸಿ).ಇಲ್ಲೊಂದು ಪ್ರಶ್ನೆ: ಸಿಕ್ಪೋಯಾ ವೃಕ್ಷಗಳ ಇಷ್ಟೊಂದು ಎತ್ತರಕ್ಕೆ, ಇಂಥ ಮಹಾಗಾತ್ರಕ್ಕೆ ಬೆಳೆದು, ದೃಢವಾಗಿಯೇ ಉಳಿದು ಸಾವಿರಾರು ವರ್ಷ ಬಾಳಬಲ್ಲವು ಹೇಗೆ? ಅಷ್ಟೆತ್ತರ ಇದ್ದೂ ಮುರಿದು ಬೀಳದೆ, ಅಷ್ಟು ಕಾಲ ಪಿಡುಗುಕಾರಕಗಳ ದಾಳಿಗೆ ಸಿಲುಕದೆ ಬದುಕಬಲ್ಲವು ಹೇಗೆ?ಅದಕ್ಕೆ ಕಾರಣವಾಗಿರುವ ಐದು ವಿಶಿಷ್ಟ ತಂತ್ರಗಳನ್ನು ಸಿಕ್ಪೋಯಾ ವೃಕ್ಷಗಳು ಮೈಗೂಡಿಸಿಕೊಂಡಿವೆ. ಅಚ್ಚರಿಯ ಆ ಪಂಚಕೌಶಲ್ಯಗಳನ್ನು ನೀವೇ ಗಮನಿಸಿ:1) ಸಿಕ್ಪೋಯಾ ವೃಕ್ಷಗಳದು ಅತಿ ಸೂಕ್ಷ್ಮ ದ್ಯುತಿ ಸಂಶ್ಲೇಷಣಾ ಸಾಮರ್ಥ್ಯ, ಅತ್ಯಂತ ಮಂದ, ಕನಿಷ್ಟ ಸೂರ್ಯರಶ್ಮಿಯಲ್ಲೂ ಅವು ಸಮರ್ಥವಾಗಿ ಆಹಾರ ತಯಾರಿಸಿಕೊಳ್ಳುತ್ತವೆ, ಬೆಳೆಯುತ್ತವೆ. ಹಾಗಾಗಿ ಅಡವಿ ಚಾವಣಿಯ ನೆರಳಿನಲ್ಲಿ ಸಿಕ್ಪೋಯಾ ಸಸಿಗಳು ನೆಮ್ಮದಿಯಾಗಿಯೇ ಬೆಳೆಯುತ್ತವೆ.2) ಸಿಕ್ಪೋಯಾ ವೃಕ್ಷಗಳು ದೂರ ದೂರ ಚಾಚಿಕೊಳ್ಳದ ಕೆಲವೇ ಕೊಂಬೆಗಳನ್ನು ಧರಿಸುತ್ತವೆ; ನೆಲದಿಂದ ಬಹು ಎತ್ತರದವರೆಗೂ ಬೋಳಾಗಿ ಕಂಬದಂತೆಯೇ ಉಳಿಯುತ್ತವೆ (ಚಿತ್ರಗಳಲ್ಲಿ ಗಮನಿಸಿ) ಹಾಗಾಗಿ ಅವುಗಳ ನಿಲುವು ಅತ್ಯಂತ ನೇರ, ದೃಢ.3) ಸಿಕ್ಪೋಯಾ ವೃಕ್ಷಗಳು ಬೇರು ಹರಡುವ ಕ್ರಮವೂ ತುಂಬ ವಿಭಿನ್ನ, ವಿಶಿಷ್ಟ. 350 ಅಡಿ ಮೀರಿ ಮೋಡಗಳನ್ನೇ ಇರಿಯುವಂತೆ ನಿಲ್ಲುವ ಈ ಗಗನಚುಂಬಿಗಳ ಬೇರುಗಳು ಕೇವಲ ಮೂರರಿಂದ ಆರು ಅಡಿ ಆಳಕ್ಕಷ್ಟೇ ಇಳಿದಿರುತ್ತದೆ. ಆದರೆ ಅಷ್ಟೂ ಆಳಕ್ಕೆ ಈ ಬೇರುಗಳು ಕಾಂಡದ ಸುತ್ತಲೂ 50 ರಿಂದ 150 ಅಡಿ ದೂರದವರೆಗೂ ದಟ್ಟವಾಗಿ ಹರಡಿ ಇತರ ವೃಕ್ಷಗಳ ಬೇರುಗಳೊಡನೆ ನೇಯ್ದು ನಿಲ್ಲುತ್ತವೆ. ಹಾಗಾಗಿ ಎಂಥ ಬಿರುಗಾಳಿಯಲ್ಲೂ ಎಷ್ಟೇ ತೂಗಾಡಿದರೂ ಸಿಕ್ಪೋಯಾ ವೃಕ್ಷಗಳು ಮುರಿದು ಬೀಳುವುದಿಲ್ಲ.4) ಸಿಕ್ಪೋಯಾ ವೃಕ್ಷಕ್ಕೆ ದಿನಕ್ಕೆ ಕನಿಷ್ಟ ಒಂದು ಸಾವಿರ ಲೀಟರ್ ನೀರು ಬೇಕು. ಮಳೆಗಾಲವಲ್ಲದ ದಿನಗಳಲ್ಲಿ ನೆಲದಿಂದ ಬೇರುಗಳ ಮೂಲಕ ಈ ಪ್ರಮಾಣದ ನೀರು ಒದಗುವುದಿಲ್ಲ. ಅದಕ್ಕೇ ಈ ವೃಕ್ಷಗಳು ಎಲೆಗಳ ಮೂಲಕವೇ ನೀರನ್ನು ಹೀರಿಕೊಳ್ಳುವ ತಂತ್ರ ಪಡೆದಿವೆ. ಮುಗಿಲ ಚುಂಬಿಸುವ ಈ ವೃಕ್ಷಗಳ ಎಲೆಗಳು ಅವನ್ನಾವರಿಸಿ ಸಾಗುವ ಮೋಡಗಳಿಂದಲೇ ತೇವಾಂಶವನ್ನು ಕಸಿಯುತ್ತವೆ.5) ಸಿಕ್ಪೋಯಾ ವೃಕ್ಷಗಳ ಮೇಲೆ ಪಿಡುಗುಕಾರಕ ಕೀಟಗಳ, ಶಿಲೀಂದ್ರಗಳ ದಾಳಿ ಬಹುಪಾಲು ಶೂನ್ಯ. ಏಕೆಂದರೆ ಸಿಕ್ಪೋಯಾ ವೃಕ್ಷದ ಬೇರು ಕಾಂಡ ಎಲೆಗಳಲ್ಲೆಲ್ಲ ಆಮ್ಲೀಯ ಟ್ಯಾನಿನ್‌ಗಳು ಭಾರೀ ಪ್ರಮಾಣದಲ್ಲಿ ಬೆರೆತಿವೆ. ಈ `ವಿಷ ವಸ್ತು~ವಿನಿಂದಾಗಿ ಸಿಕ್ಪೋಯಾಗಳು ರೋಗರಹಿತವಾಗಿದ್ದು ದೀರ್ಘಾಯುಷಿಗಳಾಗಿವೆ.ಆದರೇನು? ಎಂತೆಂತಹ ಶಕ್ತಿ ಸಾಮರ್ಥ್ಯಗಳನ್ನು ಸಿಕ್ಪೋಯಾಗಳು ನೈಸರ್ಗಿಕವಾಗಿ ಪಡೆದಿದ್ದರೂ ಮನುಷ್ಯರ ಹಾವಳಿಗಳಿಂದ ಅವು ತತ್ತರಿಸಿಹೋಗಿವೆ. ಉತ್ತರ ಅಮೆರಿಕದ ಖಂಡದ ಅದರಲ್ಲೂ ಯು.ಎಸ್.ಎ.ಯ ಪಶ್ಚಿಮ ಕರಾವಳಿಗಷ್ಟೇ ಸೀಮಿತವಾಗಿರುವ ನೆಲೆ ಹೊಂದಿವೆ.ಅಲ್ಲಿ ಹಬ್ಬಿರುವ `ಸಿಯೆರ‌್ರಾ ನಿವ್ಯಾಡಾ~ ಪರ್ವತ ಪಂಕ್ತಿಯ ಪಶ್ಚಿಮದ ಇಳುಕಲಿನುದ್ದಕ್ಕೂ ನಿಬಿಡ ಕಾನನವನ್ನೇ ರೂಪಿಸಿದ್ದ ಈ ವೃಕ್ಷಗಳು ಶತಮಾನಗಳಿಂದ ಮನುಷ್ಯರ ಗರಗಸಕ್ಕೆ ಸಿಲುಕಿ ಈಗ ಅಲ್ಲಲ್ಲಿ ಅಲ್ಲಲ್ಲಿ ತೇಪೆಗಳಂತೆ ಉಳಿದಿವೆ. ಈಗ ರಾಷ್ಟ್ರೀಯ ಉದ್ಯಾನಗಳಲ್ಲಿ ಸೇರಿ ಸಂಪೂರ್ಣ ರಕ್ಷಣೆಗೆ ಒಳಗಾಗಿ ಉಳಿದಿವೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.