ಸೋಮವಾರ, ಏಪ್ರಿಲ್ 19, 2021
26 °C

ದಾಗಿನಕಟ್ಟೆ ರಂಗನಾಥಸ್ವಾಮಿಗೆ ಉತ್ಸವದ ರಂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಾಪಟ್ಟಣ: ಇಲ್ಲಿಗೆ ಸಮೀಪದ ದಾಗಿನಕಟ್ಟೆ  ರಂಗನಾಥ ಸ್ವಾಮಿಯ ಉತ್ಸವಕ್ಕೆ ಸಿದ್ಧತೆಗಳು  ಪೂರ್ಣಗೊಂಡಿವೆ.ಮಾರ್ಚ್ 18ರಂದು ಶುಕ್ರವಾರ ಮುಂಜಾನೆ ಸ್ವಾಮಿಯ ರಥೋತ್ಸವ ನಡೆಯಲಿದೆ. ಪ್ರತಿ ವರ್ಷ ಆಶ್ವಯುಜ ಮಾಸದಲ್ಲಿ ನವರಾತ್ರಿ ಉತ್ಸವ, ಫಾಲ್ಗುಣ ಶುಕ್ಲ ಚತುರ್ಥಿಯಂದು ಕಂಕಣ ಧಾರಣೆಯಾಗಿ ಹನ್ನೊಂದು ದಿನಗಳವರೆಗೆ ಪ್ರತಿ ದಿನ ವಿವಿಧ ಉತ್ಸವಗಳು ನಡೆಯುತ್ತವೆ. . ತ್ರಯೋದಶಿಯಂದು ರಾತ್ರಿ ರಂಗನಾಥ ಸ್ವಾಮಿಯ ಕಲ್ಯಾಣೋತ್ಸವ, ಬೆಳಿಗ್ಗೆ ಚತುರ್ಥಿಯಂದು ಬ್ರಾಹ್ಮೀ ಮುಹೂರ್ತದಲ್ಲಿ ರಥೋತ್ಸವ, ಸಂಜೆ ಮುಳ್ಳೋತ್ಸವ, ಪೌರ್ಣಿಮೆಯಂದು ಓಕಳಿ ಉತ್ಸವ ನಡೆಯುವುದು ವಿಶೇಷ.ದೇಗುಲ ವಿಶೇಷ: ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಲಾಗಿರುವ ರಂಗನಾಥ ಸ್ವಾಮಿಯ ದೇಗುಲ ನೋಡುಗರ ಕಣ್ಮನ ಸೆಳೆಯುತ್ತದೆ. ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯವನ್ನು ಇತ್ತೀಚೆಗೆ ಸಂಪೂರ್ಣವಾಗಿ ಜೀರ್ಣೋದ್ಧಾರಗೊಳಿಸಿದ್ದು, ಸಂಸದರ ಅನುದಾನದಲ್ಲಿ ಯಾತ್ರಿಕರು ತಂಗುವುದಕ್ಕಾಗಿ ಐದು ಕೊಠಡಿಗಳನ್ನು ನಿರ್ಮಿಸಲಾಗಿದೆ. ನಮ್ಮ ಗ್ರಾಮವಲ್ಲದೇ ನಾಡಿನ ವಿವಿಧ ಭಾಗಗಳಲ್ಲಿ ಸ್ವಾಮಿಯ ಭಕ್ತರು ನೆಲೆಸಿದ್ದು, ಪ್ರತಿವರ್ಷ ರಥೋತ್ಸವಕ್ಕೆ ಆಗಮಿಸುತ್ತಾರೆ ಎಂದು ದೇಗುಲದ ಧರ್ಮದರ್ಶಿಗಳು ತಿಳಿಸಿದ್ದಾರೆ. ಇತಿಹಾಸದ ಪುಟಗಳಲ್ಲಿ: ಪಾಳೇಗಾರರು ಇಲ್ಲಿಗೆ ಸಮೀಪದ ದಾಗಿನಕಟ್ಟೆಯಲ್ಲಿ ಮೂರು ಶತಮಾನಗಳ ಹಿಂದೆ ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಿರುವ ರಂಗನಾಥ ಸ್ವಾಮಿ ದೇವಾಲಯ ಈ ಭಾಗದ ಎಲ್ಲಾ ಜನರ ಆರಾಧ್ಯ ದೈವ.ವಿಜಯನಗರ ಸಾಮ್ರಾಜ್ಯ ನಾಶವಾದ ಮೇಲೆ ಬಸವಾಪಟ್ಟಣ ಪಾಳೆಯಪಟ್ಟನ್ನು ಆಳುತ್ತಿದ್ದ ಹನುಮಪ್ಪ ನಾಯಕನ ಮಗನಾದ ಕೆಂಗಣ್ಣ ನಾಯಕನು ನಿರ್ಮಿಸಿದ ಈ ದೇವಾಲಯ ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆ ಹೊಂದಿದೆ.ಕೆಂಗಣ್ಣ ನಾಯಕನ ಕನಸಿನಲ್ಲಿ ಬಂದ ರಂಗನಾಥ ಸ್ವಾಮಿ ನಾನು ಕಂಬದ ರೂಪದಲ್ಲಿರುವ ಕಲ್ಲಿನಲ್ಲಿ ನೆಲೆಸಿದ್ದು, ನಿನ್ನ ಹೆಣ್ಣುಮಕ್ಕಳು ಆಟವಾಡಲು ಅದರಲ್ಲಿ ಗುಳಿ ಕೆತ್ತಿ ಬಳಸುತ್ತಿದ್ದಾರೆ. ಕೂಡಲೇ ನೀನು ಕಲ್ಲಿನ ರೂಪದಲ್ಲಿರುವ ನನ್ನನ್ನು ದೇವಸ್ಥಾನವೊಂದನ್ನು ಕಟ್ಟಿ ನೆಲೆಗೊಳಿಸಬೇಕೆಂದು ತಿಳಿಸಿದ ಪರಿಣಾಮವಾಗಿ ಕೆಂಗಣ್ಣ ನಾಯಕನು ಈಗಿನ ದಾಗಿನಕಟ್ಟೆ ಪ್ರದೇಶದಲ್ಲಿ ಗುಡಿಯೊಂದನ್ನು ಕಟ್ಟಿಸಿ ರಂಗನಾಥ ಸ್ವಾಮಿಯನ್ನು ಪ್ರತಿಷ್ಠಾಪಿಸಿದ.ನಂತರ ಈ ನಾಯಕನು ರಂಗನಾಥ ಸ್ವಾಮಿಯ ಅನನ್ಯ ಭಕ್ತನಾಗಿ ಪ್ರತಿದಿನ ಪೂಜೆ, ರಥೋತ್ಸವ ನಡೆಯಲು ಸಾಕಷ್ಟು ಜಹಗೀರನ್ನು ಸಹ ನೀಡಿದ ಎಂದು ಸ್ಥಳೀಯ ಇತಿಹಾಸವಿದೆ. ಪಾಳೇಗಾರರು ಉಪಯೋಗಿಸುತ್ತಿದ್ದ ಆಯುಧಗಳು ಈಗಲೂ ದೇವಾಲಯದಲಿದ್ದು, ಮಹಾನವಮಿ ಹಾಗೂ ರಥೋತ್ಸವ ಸಂದರ್ಭದಲ್ಲಿ ಅವುಗಳನ್ನು ಪೂಜಿಸಲಾಗುತ್ತಿದೆ.ಸಂತ ಕವಯತ್ರಿ ಹೆಳವನಕಟ್ಟೆ ಗಿರಿಯಮ್ಮ ಈ ರಂಗನಾಥ ಸ್ವಾಮಿಯ ದೇಗುಲಕ್ಕೆ ಭೇಟಿ ನೀಡಿ, ಆತನ ಮಹಿಮೆಯನ್ನು ಕೊಂಡಾಡಿರುವ ಕೀರ್ತನೆಗಳು ಇನ್ನೂ ಜನರ ಬಾಯಿಯಲ್ಲಿ ನಲಿದಾಡುತ್ತಿವೆ.ರಂಗಮಯ ಹೆಸರು: ದಾಗಿನಕಟ್ಟೆಯ ಗ್ರಾಮದೇವತೆಯಾದ ರಂಗನಾಥಸ್ವಾಮಿಯ ಹೆಸರನ್ನು ಇಲ್ಲಿ ಹುಟ್ಟುವ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಇಡುವುದು ಪ್ರತೀತಿ. ಆದ್ದರಿಂದ ಇಲ್ಲಿನ ಜನರ ಹೆಸರೆಲ್ಲಾ ರಂಗಮಯವಾಗಿದೆ. ಈ ಹಿಂದೆ ರಥೋತ್ಸವದ ನಿಮಿತ್ತ ಕುಸ್ತಿ ಪಂದ್ಯಗಳು, ರಾತ್ರಿ ವೇಳೆ ನಾಟಕಗಳು ಗ್ರಾಮಸ್ಥರಿಂದ ನಡೆಯುತ್ತಿದ್ದವು. ಆದರೆ, ಇತ್ತೀಚೆಗೆ ಅದರ ಬದಲಾಗಿ ವೃತ್ತಿ ರಂಗಭೂಮಿಯ ಕಲಾವಿದರಿಂದ ನಾಟಕಗಳನ್ನು ಏರ್ಪಡಿಸಲಾಗುತ್ತದೆ. ದೇವಸ್ಥಾನದ ಉತ್ಸವಾದಿಗಳಲ್ಲಿ ಯುವಕರು ಆಸಕ್ತಿ ವಹಿಸಿ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ.ಶನಿವಾರ ಹೂವಿನ ಪಲ್ಲಕ್ಕಿ ಮತ್ತು ಓಕಳಿ ಉತ್ಸವ ನಡೆಯಲಿದೆ ಎಂದು ಗ್ರಾಮದ ಡಿ.ಬಿ. ಉಮೇಶ್, ಡಿ.ಆರ್. ರಂಗಸ್ವಾಮಿ, ಕೆ.ಸಿ. ಕಾಂತರಾಜ, ಕೆ.ಎಸ್. ಪರಮೇಶ್ವರಪ್ಪ ಬಿ.ಎಲ್. ಉಮೇಶ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.