ಭಾನುವಾರ, ಜೂನ್ 20, 2021
28 °C

ದಾಳಿಂಬೆಯಲ್ಲಿ ವಿಭಿನ್ನ ಪ್ರಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧ್ಯ ಕರ್ನಾಟಕದ ಹಿರಿಯೂರು ತೋಟಗಾರಿಕೆ ಬೆಳೆಗಳಿಗೆ ಹೇಳಿ ಮಾಡಿಸಿದ ಸ್ಥಳ. ಆದರೆ ಹಣ್ಣುಗಳ ತವರೂರು ಎಂದೇ ಬಣ್ಣಿಸಲಾಗುತ್ತಿರುವ ಬಯಲು ಸೀಮೆಯ ಈ ನಾಡಿನಲ್ಲಿ ರೈತರು ಕೈಸುಟ್ಟಿಕೊಂಡಿದ್ದೇ ಹೆಚ್ಚು.ಇಂತಹ ಕಷ್ಟ ನಷ್ಟಗಳ ನಡುವೆಯೂ ವಿನೂತನ ಮತ್ತು ವಿಶಿಷ್ಟ ಪ್ರಯೋಗಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ ಹಿರಿಯೂರು ತಾಲ್ಲೂಕಿನ ಸೋಮೇರಹಳ್ಳಿ ಗ್ರಾಮದ ಎಚ್.ಎಲ್. ಬಾಬು. ಬಳ್ಳಾರಿ ಸೀಮೆ ಜಾಲಿ, ಕಲ್ಲುಗಳಿಂದ ಕೂಡಿದ್ದ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿ ಮತ್ತು ವಿಭಿನ್ನ ಪ್ರಯೋಗಗಳ ಮೂಲಕ ದಾಳಿಂಬೆ ಬೆಳೆದು ಒಳ್ಳೆಯ ಫಸಲು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ದುಂಡಾಣು ಅಂಗಮಾರಿ ರೋಗ (ಬ್ಯಾಕ್ಟೇರಿಯಲ್ ಬ್ಲೈಟ್), ಚಿಬ್ಬು ರೋಗ, ಕಾಯಿ ಬಿರಿಯುವಿಕೆ ಮುಂತಾದ ಸಮಸ್ಯೆಗಳು ದಾಳಿಂಬೆಗೆ ಜಾಸ್ತಿ. ಆದರೆ ಇವುಗಳ ನಿವಾರಣೆಗೆ ನಿರಂತರವಾಗಿ ರಾಸಾಯನಿಕಗಳನ್ನು ಸಿಂಪಡಿಸುವುದರಿಂದ ಹಣ್ಣು ವಿಷಪೂರಿತವಾಗುತ್ತದೆ ಎನ್ನುವ ದೂರುಗಳ ಮಧ್ಯೆ ಸ್ವಾದಿಷ್ಟ ಹಣ್ಣುಗಳನ್ನು ಸಾವಯವ ವಿಧಾನದಲ್ಲಿ ಬೆಳೆಯುತ್ತಿದ್ದಾರೆ ಬಾಬು.ಇವರು ಬಿಎಸ್ಸಿ ಪದವೀಧರ. ಎರಡೂವರೆ ಎಕರೆ ಜಮೀನಿನಲ್ಲಿ ಹತ್ತು ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಸಾವಯವ ಕೃಷಿ ಪದ್ಧತಿ ಜತೆಯಲ್ಲಿ ತೆಂಗಿನ ಮರದಿಂದ ಇಳಿಸಿದ ನೀರಾ, ಬೇಲಿಯಲ್ಲಿ ದೊರೆಯುವ ಕತ್ತಾಳೆ ರಸ, ಸುಣ್ಣದ ನೀರು, ಜಾನುವಾರುಗಳ ಗಂಜಲು ಸಿಂಪಡಿಸಿದ್ದಾರೆ.ದಾಳಿಂಬೆ ಗಿಡಗಳಿಗೆ ಕಾಡುವ ಕೀಟಗಳ ನಿಯಂತ್ರಣಕ್ಕಾಗಿ ನಾಟಿ ಕೋಳಿಗಳ ಮೊರೆ ಹೋಗಿದ್ದಾರೆ. ತೋಟದಲ್ಲಿ ಸಾಕಿರುವ ಕೋಳಿಗಳು ಕೀಟಗಳನ್ನು ತಿನ್ನುವುದರಿಂದ ದಾಳಿಂಬೆಗೆ ಕೀಟಗಳ ಕಾಟ ಕಡಿಮೆಯಾಗಿದೆ.`ದಾಳಿಂಬೆ ಫಸಲು ಆರಂಭದ ಮೊದಲ ಹಂತದಲ್ಲಿ ಜಾನುವಾರುಗಳ ಗಂಜಲು ಮತ್ತು ಸುಣ್ಣ ಸಿಂಪಡಿಸಿ ಹಳೇ ಎಲೆಗಳನ್ನು ಉದುರಿಸಿ ಚಿಗುರೆಲೆ ಬರುವಂತೆ ಮಾಡಬೇಕು.ನಂತರ ಗಿಡದಲ್ಲಿ ಮೊಗ್ಗು, ಹೂ ಬಿಡಲು ಆರಂಭವಾಗುತ್ತದೆ. ಹೂಗಳಿಗೆ ಜೇನು ದುಂಬಿಗಳು ಆಕರ್ಷಿತವಾಗಿ ಪರಾಗಸ್ಪರ್ಶ ನಡೆಯಲಿ ಎಂದು ನೀರಾ ಸಿಂಪಡಿಸಬೇಕು.ಕತ್ತಾಳೆಯಲ್ಲಿನ ಔಷಧಿಯ ಗುಣ ಮೊಗ್ಗು, ಕೊಂಬೆ, ಹೂ ಬೆಳವಣಿಗೆಗೆ ಸಹಕಾರಿ. ಆದರೆ, ಕತ್ತಾಳೆ ರಸವನ್ನು ಹೆಚ್ಚಿಗೆ ಬಳಸಿದರೆ ಅಪಾಯವೂ ಉಂಟು. ಈ ಬಗ್ಗೆ ಎಚ್ಚರ ವಹಿಸಬೇಕು~ ಎಂದು ಬಾಬು ಹೇಳುತ್ತಾರೆ.ದಾಳಿಂಬೆ ಗಿಡಗಳಿಗೆ ಅಗತ್ಯವಿರುವ ಕ್ಯಾಲ್ಸಿಯಂಗಾಗಿ ಸುಣ್ಣವನ್ನು ಸಿಂಪಡಿಸುತ್ತಿದ್ದಾರೆ. ಜತೆಗೆ  ಶಿಲೀಂದ್ರ (ಫಂಗಸ್) ಸುಟ್ಟು ಹಾಕುವುದರಿಂದ ಅನುಕೂಲವಾಗಲಿದೆ. ಗಂಜಲ, ನೀರಾ, ಸುಣ್ಣ, ಕತ್ತಾಳೆ ರಸವನ್ನು  13 ರಿಂದ 15 ದಿನಕ್ಕೊಮ್ಮೆ ಸಿಂಪರಣೆ ಮಾಡಿದರೆ ಗಿಡಗಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದಾಗಿದೆ ಎಂದು ವಿವರಿಸುತ್ತಾರೆ.ಎರಡೂವರೆ ಎಕರೆ ಜಮೀನಿನಲ್ಲಿ `ಬಗವಾ~ ತಳಿಯ 734 ದಾಳಿಂಬೆ ಗಿಡಗಳಿಗೆ ನೇರವಾಗಿ ಯಾವುದೇ ರಾಸಾಯನಿಕ ಗೊಬ್ಬರ ಹಾಕದೇ ಸಗಣಿ ಗೊಬ್ಬರ, ತರಗಲೆಗಳು, ಕತ್ತಾಳೆ ಪುಡಿ, ಹೊಗೆ ಸೊಪ್ಪಿನ ಪುಡಿ ಮತ್ತಿತರ ಸಾವಯವ ಅಂಶವುಳ್ಳ ಪದಾರ್ಥಗಳನ್ನು ಮಾತ್ರ ಕೊಡುತ್ತಿದ್ದಾರೆ.ನಾಟಿ ಮಾಡಿದ ದಿನದಿಂದ ಹಿಡಿದು ಹಣ್ಣು ಕೊಯ್ಲು ಮಾಡುವ ತನಕ 1.75 ಲಕ್ಷ ರೂ ಖರ್ಚಾಗಿದೆಯಂತೆ. ಆದರೆ ಸುಮಾರು 7.76 ಲಕ್ಷ ರೂ ಆದಾಯ ಬಂದಿದೆ. ಅದೂ ಸಹ ದಾಳಿಂಬೆಯನ್ನು ಸರಾಸರಿ ಒಂದು ಕಿಲೊಗೆ 70 ರೂಪಾಯಿಯಂತೆ ಮಾರಾಟ ಮಾಡಿ ಈ ಲಾಭ ಪಡೆದಿದ್ದಾರೆ.

ಅವರ ಮೊಬೈಲ್ ಸಂಖ್ಯೆ 99808 29606                

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.