ಗುರುವಾರ , ಮೇ 26, 2022
30 °C

ದಾಳಿ ಸಾಲದು; ಶಿಕ್ಷೆ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ನಿವೃತ್ತಿ ಮತ್ತು ನ್ಯಾ. ಶಿವರಾಜ ಪಾಟೀಲರ ರಾಜೀನಾಮೆ ನಂತರ ಮತ್ತೊಬ್ಬ ಲೋಕಾಯುಕ್ತರ ನೇಮಕದಲ್ಲಿ ಆಗಿರುವ ವಿಳಂಬದಿಂದ ಲೋಕಾಯುಕ್ತ ಇನ್ನು ದುರ್ಬಲಗೊಳ್ಳುತ್ತಿದೆ ಎನ್ನುವ ಶಂಕೆ ಜನರ ಮನಸ್ಸಿನಲ್ಲಿರುವಾಗಲೇ ಐವರು ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆದಿರುವುದು ಲೋಕಾಯುಕ್ತದ ಕಾರ್ಯ ಸಮಾಧಾನಕರವಾಗಿದೆ ಎಂದು ನಿಟ್ಟುಸಿರು ಬಿಡುವಂತಾಗಿದೆ.

 

ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿರುವ ಆರೋಪದ ಮೇಲೆ ಬೆಂಗಳೂರು, ಬಾಗಲಕೋಟೆ ಮತ್ತು ಭದ್ರಾವತಿಯಲ್ಲಿ ದಾಳಿ ನಡೆದು ಅಪಾರ ಅಕ್ರಮ ಆಸ್ತಿ, ನಗದು ಮತ್ತು ಚಿನ್ನಾಭರಣವನ್ನು ಪತ್ತೆ ಹಚ್ಚಲಾಗಿದೆ.ಬೆಂಗಳೂರಿನ ಜಲ ಮಂಡಳಿಯ ಎಂಜಿನಿಯರ್‌ವೊಬ್ಬರು ಪಂಚತಾರಾ ಹೋಟೆಲ್‌ನಂತಹ ಐಷಾರಾಮಿ ಬಂಗಲೆ, ಹಣ ಎಣಿಸಲು ಮತ್ತು ನಕಲಿ ನೋಟುಗಳನ್ನು ಪತ್ತೆಹಚ್ಚಲು ಯಂತ್ರಗಳನ್ನು ಹೊಂದಿರುವುದನ್ನು ನೋಡಿದರೆ ಅವರು ಸರ್ಕಾರದ ಅಭಿವೃದ್ಧಿ ಯೋಜನೆಯಲ್ಲಿ ಎಷ್ಟು ಹಣ ಕೊಳ್ಳೆ ಹೊಡೆದಿದ್ದಾರೆ ಎನ್ನುವುದು ಗೊತ್ತಾಗುತ್ತದೆ.ಬಾಗಲಕೋಟೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಶಿರಸ್ತೇದಾರ್ `ಇದೆಲ್ಲ ಮನರಂಜನೆಯಷ್ಟೇ. ಈ ದಾಳಿಯಿಂದ ನನಗೆ ಬಡ್ತಿ ಮತ್ತಿತರ ಮುಂದಿನ ಕೆಲಸಗಳಿಗೇನೂ ತೊಂದರೆ ಆಗುವುದಿಲ್ಲ~ ಎಂದು ಮಾಧ್ಯಮದವರ ಮುಂದೆ ಹೇಳಿಕೊಂಡಿರುವುದನ್ನು ಗಮನಿಸಿದರೆ ಭ್ರಷ್ಟ ಅಧಿಕಾರಿಗಳು ಎಷ್ಟು ಜಡ್ಡುಗಟ್ಟಿ ಹೋಗಿದ್ದಾರೆ ಎನ್ನುವುದು ಮನವರಿಕೆ ಆಗುತ್ತದೆ.ಸರ್ಕಾರದಲ್ಲಿ ಕೆಲಸ ಮಾಡುವುದೇ ಅಕ್ರಮವಾಗಿ ಹಣ ಸಂಪಾದಿಸುವುದಕ್ಕಾಗಿ ಎನ್ನುವ ಮನೋಭಾವ ಬಹಳಷ್ಟು ಮಂದಿ ಅಧಿಕಾರಿಗಳಿಗಿದೆ. ಇಂತಹ ಭ್ರಷ್ಟ ಅಧಿಕಾರಿಗಳಿಗೆ ರಾಜಕಾರಣಿಗಳ ಕೃಪಾಶ್ರಯ ಇರುವುದರಿಂದಲೇ ಸರ್ಕಾರಿ ಕೆಲಸವನ್ನು ಒಂದು ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಅನೇಕ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆಯಾದರೂ, ಶಿಕ್ಷೆ ಆಗಿರುವುದು ತೀರಾ ಕಡಿಮೆ.ಲೋಕಾಯುಕ್ತ ದಾಳಿ ನಡೆದರೂ ಅನೇಕರಿಗೆ ಬಡ್ತಿ ಮತ್ತು ಅದೇ ಸ್ಥಾನ ಹಾಗೂ ಮತ್ತಷ್ಟು ಹಣ ಮಾಡುವ ಹುದ್ದೆಗಳು ಸಿಕ್ಕಿರುವ ಉದಾಹರಣೆಗಳಿವೆ. ಹಾಗಾಗಿಯೇ ಇಂತಹವರು ಯಾವ ದಾಳಿಗೂ ಅಂಜುವುದಿಲ್ಲ. ದಾಳಿಗೆ ಒಳಗಾದ ಅಧಿಕಾರಿಗಳ ಮೇಲಿನ ಪ್ರಕರಣಗಳು ಆದಷ್ಟು ಬೇಗನೆ ಇತ್ಯರ್ಥವಾಗಬೇಕು.

 

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಬಿಹಾರದಲ್ಲಿ ಇತ್ತೀಚೆಗೆ ನಡೆದಿರುವಂತೆ ಭ್ರಷ್ಟ ಅಧಿಕಾರಿಗಳ ಬಂಗಲೆಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡು ಸಾರ್ವಜನಿಕ ಉದ್ದೇಶಗಳಿಗಾಗಿ ಬಳಸುವಂತಹ ಕಾನೂನನ್ನು ಜಾರಿಗೆ ತರಬೇಕು. ಆಗ ಮಾತ್ರ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಿದಂತಾಗುತ್ತದೆ.ಆದರೆ ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳುವ ಬದ್ಧತೆ ಇಲ್ಲದ ಮತ್ತು ಅದರ ಬಗೆಗೆ ಬಾಯಿ ಬಿಡದ ಆಡಳಿತ ವ್ಯವಸ್ಥೆ ಇದ್ದಾಗ ಇದನ್ನೆಲ್ಲ ನಿರೀಕ್ಷಿಸುವುದು ಕಷ್ಟ.  `ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲು ಲೋಕಾಯುಕ್ತ ವ್ಯವಸ್ಥೆಯನ್ನು ಬಲಪಡಿಸಬೇಕು.

 

ಅದಕ್ಕಾಗಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು~ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಅನೇಕ ಬಾರಿ ಮನವಿ ಮಾಡಿದರೂ ಸರ್ಕಾರ ಕಿವುಡಾದದ್ದು ವಿಪರ್ಯಾಸ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.