ಶುಕ್ರವಾರ, ಜೂನ್ 18, 2021
28 °C

ದಿಗ್ಗಜರಿಗೆ ತ್ರಿಶಂಕು; ಮಾಜಿ ಸಿ.ಎಂ.ಗಳಿಗೆ ಅಭದ್ರತೆ

ಬಾಲಕೃಷ್ಣ ಪುತ್ತಿಗೆ / ಪ್ರವೀಣ್‌ ಕುಮಾರ್‌ ಪಿ.ವಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಷ್ಟ್ರ ರಾಜಕಾರಣಕ್ಕೆ ಪ್ರಮುಖ ರಾಜಕಾರಣಿಗಳನ್ನು ನೀಡಿರುವ ಕ್ಷೇತ್ರ ಮಂಗಳೂರು. ಅಚ್ಚರಿಯೆಂದರೆ, ಈ ಕ್ಷೇತ್ರವನ್ನು ಪ್ರತಿನಿಧಿಸಿ ರಾಜಕೀಯದಲ್ಲಿ ಪ್ರಭಾವಿ ಸ್ಥಾನವನ್ನು ಅಲಂಕರಿಸಿದ ಕೆಲವರು ಈ ಬಾರಿ ಟಿಕೆಟ್‌ ಗಿಟ್ಟಿಸುವುದಕ್ಕೂ ಹರಸಾಹಸ ಪಡಬೇಕಾದ ಪರಿಸ್ಥಿತಿ ಇಲ್ಲಿದೆ. ಇಲ್ಲಿಂದ ಗೆದ್ದು ಅಧಿಕಾರ ಅನುಭವಿಸಿದ ಕೆಲವು ನಾಯಕರು ಇಲ್ಲಿಂದ ಪಲಾಯನ ಮಾಡಿ ಬೇರೆ ಜಿಲ್ಲೆಗಳಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಹವಣಿಸುತ್ತಿದ್ದಾರೆ.ಮಂಗಳೂರು ಕ್ಷೇತ್ರವನ್ನು ಒಮ್ಮೆ ಪ್ರತಿನಿಧಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ಎರಡು ಬಾರಿ ಸೋತಿದ್ದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಇಲ್ಲಿಂದ ಮರು ಸ್ಪರ್ಧೆಗೆ ಹಿಂದೆಮುಂದೆ ನೋಡುತ್ತಿದ್ದಾರೆ.  ಕಾಂಗ್ರೆಸ್‌ ಪಕ್ಷವು ಇದುವರೆಗೆ ನಡೆದ 15 ಲೋಕಸಭಾ ಚುನಾವಣೆಗಳ ಪೈಕಿ 8ರಲ್ಲಿ ಜನಾರ್ದನ ಪೂಜಾರಿ ಅವರನ್ನೇ ಈ ಕ್ಷೇತ್ರದಿಂದ ಕಣಕ್ಕಿಳಿಸಿತ್ತು.  1977ರಿಂದ 1991ರವರೆಗೆ ಸತತ ನಾಲ್ಕು ಬಾರಿ (14 ವರ್ಷ) ಅವರು ಸಂಸದರಾಗಿದ್ದರು. ಕೇಂದ್ರ ಸರ್ಕಾರದಲ್ಲಿ ಹಣಕಾಸು ಹಾಗೂ ಗ್ರಾಮಿಣಾಭಿವೃದ್ಧಿ ಖಾತೆ ಸಹಾಯಕ ಸಚಿವರಾಗಿದ್ದರು. ಈಗಲೂ ಹಳ್ಳಿಗಳಲ್ಲಿ ಜನ ಪೂಜಾರಿ ಅವರನ್ನು ಕರೆಯುವುದು ‘ಸಾಲ ಮೇಳದ ಪೂಜಾರಿ’ ಎಂದೇ.ಸುದೀರ್ಘ ಕಾಲ ರಾಜಕೀಯದಲ್ಲಿದ್ದರೂ ಅವರು ಎಲ್ಲೂ ಭ್ರಷ್ಟಾಚಾರದ ಕಳಂಕ ಹೊತ್ತವರಲ್ಲ. ಆದರೆ, ಅವರ ಬಾಯಿ ಮಾತ್ರ ತುಸು ಜೋರು. ಸಿಟ್ಟಾದಾಗ ಪೂಜಾರಿ, ಯಾರನ್ನು? ಹೇಗೆ? ಎಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಾಂಗ್ರೆಸ್‌ ಮುಖಂಡರಿಗೇ ಇನ್ನೂ ಸಾಧ್ಯವಾಗಿಲ್ಲ. ಅವರ ಈ ನೇರ ನಡೆಯೇ ತಳಹಂತದ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಕಠೋರ ಮಾತುಗಳಿಂದಾಗಿಯೇ ಪೂಜಾರಿ ತಾವೇ ಬೆಳೆಸಿದ ನಾಯಕರನ್ನು ಎದುರು ಹಾಕಿಕೊಂಡಿದ್ದುಂಟು.ವೀರಪ್ಪ ಮೊಯಿಲಿ ಹಾಗೂ ಪೂಜಾರಿ ಅವರಿಗೆ ಅಷ್ಟಕ್ಕಷ್ಟೇ. 1996ರಲ್ಲಿ ಬಿಜೆಪಿಯ ಧನಂಜಯ ಕುಮಾರ್‌ ಅವರ ಎದುರು ಪೂಜಾರಿ ಎರಡನೇ ಬಾರಿ ಸೋತ ಬಳಿಕ ಮೊಯಿಲಿ ಮಂಗಳೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಅಲ್ಲಿಂದ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಜೋರಾಗಿಯೇ ಕಾಣಿಸಿಕೊಂಡಿತು.1999ರಲ್ಲಿ ಪೂಜಾರಿ ಬದಲು ಕಣಕ್ಕಿಳಿದ ಮೊಯಿಲಿ ಕೂಡ ಧನಂಜಯ ಕುಮಾರ್‌ ಎದುರು ಸೋಲುಂಡರು. 2004ರಲ್ಲಿ ಸದಾನಂದ ಗೌಡ ಅವರ ವಿರುದ್ಧವೂ ಮೊಯಿಲಿ ಸೋತರು. 2009ರಲ್ಲಿ ಮೊಯಿಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರಿಂದ ಇನ್ನೇನು ಮಂಗಳೂರು ಕ್ಷೇತ್ರದಿಂದ ಪೂಜಾರಿ ಗೆದ್ದೇ ಬಿಟ್ಟರು ಎಂದು ಕಾಂಗ್ರೆಸ್‌ ಕಾರ್ಯಕರ್ತರು ಬೀಗುತ್ತಿದ್ದರು. ಆದರೆ, ರಾಜಕೀಯಕ್ಕೇ ಹೊಸಮುಖವಾದ ನಳಿನ್‌ ಕುಮಾರ್‌ ವಿರುದ್ಧ ಮತ್ತೆ ಕಾಂಗ್ರೆಸ್‌ ಸೋತಿತ್ತು. ನಾಲ್ಕು ಬಾರಿ ಗೆದ್ದು, ನಾಲ್ಕು ಬಾರಿ ಸೋಲನುಭವಿಸಿದರೂ ಪೂಜಾರಿ ಸೋಲಿನಿಂದ ಧೃತಿಗೆಟ್ಟವರಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಓಡಾಡಿ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಳಿವಯಸ್ಸಿನಲ್ಲೂ ಅವರ ಹುಮ್ಮಸ್ಸು ಕಂಡು, ಅವರೊಂದಿಗೆ ಸಣ್ಣಪುಟ್ಟ ಕಾರಣಕ್ಕೆ ಮುನಿಸಿಕೊಂಡಿದ್ದ ಜಿಲ್ಲಾ ಮಟ್ಟದ ನಾಯಕರೂ ಬೆರಗಾಗಿದ್ದರು. ಲೋಕಸಭಾ ಚುನಾವಣೆಗೆ ಪೂಜಾರಿ ಅವರನ್ನೇ ಕಣಕ್ಕಿಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಸರ್ವಾನುಮತದ ನಿರ್ಣಯವನ್ನೂ ಈ ಬಾರಿ ಕೈಗೊಂಡಿತ್ತು.ಅಷ್ಟರಲ್ಲಿ ಪೂಜಾರಿ ಅವರಿಗೆ ಇನ್ನೊಬ್ಬ ‘ಮೊಯಿಲಿ’ ಎದುರಾದರು. ಇಷ್ಟರವರೆಗೆ ಒಮ್ಮೆಯೂ ಕೇಳಿಬರದ ಹರ್ಷ ಮೊಯಿಲಿ (ವೀರಪ್ಪ ಮೊಯಿಲಿ ಅವರ ಮಗ) ಹೆಸರು ಏಕಾಏಕಿ ಚಲಾವಣೆಗೆ ಬಂತು. ಎಐಸಿಸಿ ಕೂಡಾ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಸರ್ವಾನುಮತದ ತೀರ್ಮಾನವನ್ನು ಬದಿಗಿಟ್ಟು ಆಂತರಿಕ ಚುನಾವಣೆ ಮೂಲಕ ಅಭ್ಯರ್ಥಿ ಆಯ್ಕೆಗೆ ಮುಂದಾಯಿತು. ನಾಟಕೀಯ ಬೆಳವಣಿಗೆಯಲ್ಲಿ, ಪಕ್ಷದ ಅಭ್ಯರ್ಥಿ ಆಯ್ಕೆಯ ಚುನಾವಣೆಯಲ್ಲಿ ಹರ್ಷ ಮೊಯಿಲಿ ಅನರ್ಹಗೊಂಡಿದ್ದಾರೆ. ಇಷ್ಟಾಗಿಯೂ ಪೂಜಾರಿ ಹಾದಿ ಸುಲಭವೇನಲ್ಲ. ಇದೇ 9ರಂದು ನಡೆಯುವ ಆಂತರಿಕ ಚುನಾವಣೆಯಲ್ಲಿ ಯು.ಕೆ.ಮೋನು ವಿರುದ್ಧ ಗೆದ್ದರಷ್ಟೇ ಪೂಜಾರಿ ಅವರಿಗೆ ಟಿಕೆಟ್‌ ದೃಢಪಡಬಹುದು.

ಇನ್ನೊಂದೆಡೆ ಬಿಜೆಪಿಯ ಪರಿಸ್ಥಿತಿಯೂ ಕಳೆದ ಚುನಾವಣೆಯಷ್ಟು ಸುಲಭವಾಗಿಲ್ಲ.‘ಈ ಬಾರಿ ನರೇಂದ್ರ ಮೋದಿ ಪರ ಅಲೆಯು ಬೆಂಬಲಕ್ಕೆ ಬರಲಿದೆ’ ಎಂಬ ಲೆಕ್ಕಾಚಾರದಲ್ಲಿ ಮುಳುಗಿರುವ ಬಿಜೆಪಿಗೆ ಸಂಸದ ನಳಿನ್‌ ಕುಮಾರ್‌ ಬಗ್ಗೆ ಪಕ್ಷದಲ್ಲೇ ಭುಗಿಲೆದ್ದಿರುವ ಅಸಮಾಧಾನವೂ ಮಗ್ಗುಲ ಮುಳ್ಳಾಗುವ ಅಪಾಯದ  ಅರಿವಿದೆ. ವಕೀಲ ಪದ್ಮಪ್ರಸಾದ ಹೆಗ್ಡೆ ಅವರೂ ಲೋಕಸಭಾ ಟಿಕೆಟ್‌ಗೆ ಕಣ್ಣಿಟ್ಟಿದ್ದರು. ಅವರಿಗೆ ಪಕ್ಷದ ರಾಷ್ಟ್ರೀಯ ಸುರಕ್ಷಾ ಘಟಕದ ದಕ್ಷಿಣ ಭಾರತ ಪ್ರಭಾರಿ ಹುದ್ದೆ ನೀಡಿ ತೆಪ್ಪಗಾಗಿಸುವ ಪ್ರಯತ್ನ ನಡೆದಿದೆ. ನಳಿನ್‌ ಕುಮಾರ್‌ ತೇಜೋವಧೆಗೆ ಪಕ್ಷದೊಳಗೂ ಬಹಳಷ್ಟು ಪ್ರಯತ್ನಗಳು ನಡೆದಿದ್ದವು.ಆ ಕಾರಣಕ್ಕಾಗಿಯೇ ನರೇಂದ್ರ ಮೋದಿ ಅವರನ್ನು ಮಂಗಳೂರಿಗೆ ಕರೆಸಿ ಯುವಕಾರ್ಯಕರ್ತರ ಅಸಮಾಧಾನ­ವನ್ನು ಶಮನಗೊಳಿಸುವ ಪ್ರಯತ್ನವನ್ನು ಮಾಡಲಾಗಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು  ಜಿಲ್ಲೆಯಲ್ಲಿ ಅನುಭವಿಸಿದ ಸೋಲಿನಿಂದ ಇನ್ನೂ ಚೇತರಿಸಿಕೊಂಡಿಲ್ಲ. ಪಕ್ಷಕ್ಕೆ ಮುಖ ಉಳಿಸಿಕೊಟ್ಟ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಅಂಗಾರ ಗೆದ್ದಿದ್ದು ಕೇವಲ 1373 ಮತಗಳ ಅಂತರದಿಂದ. ಹಾಗಾಗಿ ಈ ಬಾರಿ ಗೆಲುವಿನ ದಡ ಸೇರುವುದಕ್ಕೆ ಬಿಜೆಪಿ ಭಾರಿ ಪ್ರಯತ್ನವನ್ನು ನಡೆಸುತ್ತಿದೆ. ಈಗಾಗಲೇ ಕೆಲವು ತಾಲ್ಲೂಕುಗಳಲ್ಲಿ ಮನೆ ಮನೆ ಭೇಟಿಯನ್ನೂ ಪೂರ್ಣಗೊಳಿಸಿದೆ.ಬಿ.ಎಸ್‌.ಯಡಿಯೂರಪ್ಪ ಅವರ ಹಿಂಬಾಲಕರಾಗಿದ್ದುಕೊಂಡು ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ ಅವರನ್ನೇ ವಾಚಾಮಗೋಚರ ಬೈದಿದ್ದ ಜಿಲ್ಲೆಯ ಇನ್ನೊಬ್ಬ ರಾಜಕಾರಣಿ ಧನಂಜಯ ಕುಮಾರ್‌ ಅವರದೂ ತ್ರಿಶಂಕು ಸ್ಥಿತಿ. ಪೂಜಾರಿ, ಮೊಯಿಲಿ ಅವರಂಥಹ ದಿಗ್ಗಜರಿಗೇ ನೀರು ಕುಡಿಸಿದ್ದ ಧನಂಜಯ ಕುಮಾರ್‌, 1991ರಿಂದ ಸತತ ನಾಲ್ಕು ಬಾರಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿದ್ದರು. ಆದರೆ, ಈಗ ಬಿಜೆಪಿಯಲ್ಲೂ ಇಲ್ಲದ ಕೆಜೆಪಿಯಲ್ಲೂ ಸಲ್ಲದ ‘ರಾಜಕೀಯ ದೈನೇಸಿ’ ಪರಿಸ್ಥಿತಿ ಅವರದು.‘ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ, ನಾನು  ಮಂಗಳೂರಿನಲ್ಲಿ ಕೆಜೆಪಿಯಿಂದಲೇ ಕಣಕ್ಕಿಳಿಯುತ್ತೇನೆ’ ಎನ್ನುವ ಮೂಲಕ ಅವರು ಬಿಜೆಪಿಯನ್ನು ಬೆದರಿಸುವ ತಂತ್ರ ಅನುಸರಿಸಿದ್ದಾರೆ. ಆದರೆ, ಜಿಲ್ಲೆಯಲ್ಲಿ ಕೆಜೆಪಿ ಎಲ್ಲಿದೆ ಎಂದು ದುರ್ಬೀನು ಹಿಡಿದ ಹುಡುಕಬೇಕಾದ ಸ್ಥಿತಿ ಇದೆ. ಧನಂಜಯ ಕುಮಾರ್‌ ಸ್ಪರ್ಧೆಯ ಬಗ್ಗೆ ಜಿಲ್ಲೆಯ ಬಿಜೆಪಿ ಮುಖಂಡರೂ ತಲೆಕೆಡಿಸಿಕೊಂಡಿಲ್ಲ.2004ರ ಲೋಕಸಭಾ ಚುನಾವಣೆ­ಯಲ್ಲಿ ಮೊಯಿಲಿ ಅವರನ್ನು ಮಣಿಸಿದ್ದ ಸದಾನಂದ ಗೌಡರು ಬಳಿಕ ಮುಖ್ಯಮಂತ್ರಿ ಆದರು. ಮಂಗಳೂರು ಕ್ಷೇತ್ರದಲ್ಲಿ ಮತ್ತೊಮ್ಮೆ ಕಣಕ್ಕಿಳಿಯುವ ಧೈರ್ಯವನ್ನು ಅವರೂ ಮಾಡಿಲ್ಲ. ಸೋಲುವ ಭೀತಿಯಿಂದಲೇ 2009ರ ಚುನಾವಣೆಯಲ್ಲಿ ಮಂಗಳೂರಿನ ಬದಲು ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಅವರ ಪಕ್ಷದವರೇ ಹೇಳುತ್ತಾರೆ.ಈಗಲೂ, ಸದಾನಂದ ಗೌಡರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಟಿಕೆಟ್‌ ನೀಡಿ ಎಂದು ದುಂಬಾಲು ಬಿದ್ದಿದ್ದಾರೆಯೇ ಹೊರತು ತಾವು ಈ ಹಿಂದೆ ಪ್ರತಿನಿಧಿಸಿದ್ದ ಮಂಗಳೂರು ಅಥವಾ ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಟಿಕೆಟ್‌ ಕೊಡಿ ಎಂದು ಕೇಳಿಲ್ಲ.

‘ಸಂಸದರಾಗಿ ಮಾಡಿದ ‘ಮಹದುಪಕಾರವನ್ನು’ ಜನರು ಮರೆಯುವುದಿಲ್ಲ ಎಂಬ ಒಳಮರ್ಮವೂ ಅವರಿಗೆ ಚೆನ್ನಾಗಿಯೇ ತಿಳಿದಿದೆ’ ಎಂಬ ಮಾತು ಅವರ ಪಕ್ಷದಲ್ಲಿಯೇ ಕೇಳಿಬರುತ್ತಿದೆ.ವೀರಪ್ಪ ಮೊಯಿಲಿ ಕತೆಯೂ ಇದಕ್ಕೆ ಹೊರತಾಗಿಲ್ಲ. ‘ಎತ್ತಿನಹೊಳೆ ಯೋಜನೆ’ ಬಗ್ಗೆ ಎಲ್ಲಿಲ್ಲದ ಪ್ರೀತಿ ಬೆಳೆಸಿಕೊಂಡಿರುವ ಮೊಯಿಲಿ ಹೆಸರು ಕೇಳಿದರೆ ಕರಾವಳಿ ಜನ ಉರಿದು ಬೀಳುತ್ತಾರೆ. ಮೊಯಿಲಿ ಜಿಲ್ಲೆಗೆ ಭೇಟಿ ನೀಡಿದರೆ ಕಪ್ಪುಬಾವುಟ ಹಾರಿಸಲು ಕೆಲವು ಸಂಘಟನೆಗಳ ಕಾರ್ಯಕರ್ತರು ಕಾಯುತ್ತಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್‌ ಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲ. ವಿಧಾನಸಭಾ ಚುನಾವಣೆಯಲ್ಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅದು ಪರದಾಡಿತ್ತು.ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಹೋರಾಡುತ್ತಾ ಬಂದಿರುವ  ಸಿಪಿಎಂ, ಜಿಲ್ಲೆಯಲ್ಲಿ ಜನರ ಒಲವು ಹೆಚ್ಚಿಸಿಕೊಂಡಿದೆ. ಸೌಜನ್ಯಾ ಕೊಲೆ ಪ್ರಕರಣದಲ್ಲಿ ಪ್ರಭಾವಿ ಧಾರ್ಮಿಕ ಮುಖಂಡರ ವಿರುದ್ಧ ಸಿಪಿಎಂ ನಡೆಸಿದ್ದ  ಹೋರಾಟ ಜನ ಬೆಂಬಲವನ್ನೂ ಗಳಿಸಿತ್ತು. ಪ್ರಮುಖ ರಾಜಕೀಯ ಪಕ್ಷಗಳಿಗಿಂತ ಮುನ್ನವೇ ಪಕ್ಷವು ಅಧಿಕೃತ ಅಭ್ಯರ್ಥಿಯನ್ನು ಘೋಷಿಸಿದೆ. ರೈತಪರ ಹೋರಾಟಗಾರ ಯಾದವ ಶೆಟ್ಟಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.ಆಮ್‌ ಆದ್ಮಿ ಪ್ರಭಾವ

ಇನ್ನೊಂದೆಡೆ ಆಮ್‌ ಆದ್ಮಿ ಪಕ್ಷವೂ ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ. ಕೇವಲ ಮೂರೇ ತಿಂಗಳಲ್ಲಿ 15 ಸಾವಿರಕ್ಕೂ ಅಧಿಕ ಸದಸ್ಯರು ಈ ಪಕ್ಷಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇರ್ಪಡೆಯಾಗಿದ್ದಾರೆ. ಇದೇ 15ರಂದು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್‌ ಅವರನ್ನು ಮಂಗಳೂರಿಗೆ ಕರೆಸುವ ಮೂಲಕ ಜಿಲ್ಲೆಯಲ್ಲಿ ಪಕ್ಷಕ್ಕೆ ಸಿಗುತ್ತಿರುವ ಬೆಂಬಲವನ್ನು ಮತವನ್ನಾಗಿ ಪರಿವರ್ತಿಸುವ ಬಗ್ಗೆಯೂ ಚಿಂತನೆಗಳು ನಡೆದಿವೆ. ಆದರೆ, ಪಕ್ಷ  ನೆಲೆಯೂರುವ ಮುನ್ನವೇ ಜಿಲ್ಲಾ ಸಂಚಾಲಕ ಸ್ಥಾನಕ್ಕಾಗಿ ಭಿನ್ನಮತ ಭುಗಿಲೆದ್ದಿದೆ. ಅಭ್ಯರ್ಥಿ ಆಯ್ಕೆ  ಇನ್ನೂ ಆಗಿಲ್ಲ. 

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿತ್ತು. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿಕಟ ಪೈಪೋಟಿಯ ನಿರೀಕ್ಷೆ ಇದೆ. ಆಮ್‌ ಆದ್ಮಿ ಪಕ್ಷ, ಕಮ್ಯುನಿಸ್ಟ್‌ ಪಕ್ಷ– ಜೆಡಿಎಸ್‌ ಅಭ್ಯರ್ಥಿಗಳು ಪಡೆಯುವ ಮತಗಳು ಕೂಡಾ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.ಒಬ್ಬ ಸಂಸದ ಕ್ಷೇತ್ರವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಮಂಗಳೂರು ಕ್ಷೇತ್ರದ ಪ್ರಥಮ ಸಂಸದರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯ ಅವರು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅವರ ಕಾಲದಲ್ಲಿ ಸ್ಥಾಪನೆಯಾದ ನವ ಮಂಗಳೂರು ಬಂದರು, ಬಜಪೆ ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಸುರತ್ಕಲ್‌ನ ಕೆಆರ್‌ಇಸಿ (ಈಗಿನ ಎನ್‌ಐಟಿಕೆ) ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ದಿಕ್ಕನ್ನೇ ಬದಲಾಯಿಸಿದವು ಎಂಬುದನ್ನು ಬಹುತೇಕ ಎಲ್ಲಾ ಪಕ್ಷಗಳ ಮುಖಂಡರೂ ಒಪ್ಪಿಕೊಳ್ಳುತ್ತಾರೆ. ನಮ್ಮ ಜಿಲ್ಲೆಗೆ ಅಂತಹ ಇನ್ನೊಬ್ಬ ಸಂಸದ ಬೇಕು ಎಂಬುದು ಜನರ ಆಶಯ.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.