ಗುರುವಾರ , ಮೇ 26, 2022
30 °C

ದಿಗ್ವಿಜಯ್ ಲೇವಡಿಗೆ ಅಣ್ಣಾ ತಂಡ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಸ್ಸಾರ್ (ಪಿಟಿಐ): ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ತಮ್ಮ ವಿರುದ್ಧ ಮಾಡಿರುವ ಆರೋಪ ಅತ್ಯಂತ ಕ್ರೂರ ಹಾಗೂ ಆಧಾರರಹಿತ ಎಂದು ಕಿಡಿಕಾರಿರುವ ಅಣ್ಣಾ ಹಜಾರೆ ತಂಡ, ತಾವು ನಡೆಸುತ್ತಿರುವ ಆಂದೋಲನಕ್ಕೂ ಯಾವುದೇ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

`ಅಣ್ಣಾ ಕಾಂಗ್ರೆಸ್ ವಿರೋಧಿ ಪಕ್ಷಗಳ ಮುಖವಾಡ ಹಾಕಿಕೊಂಡಿದ್ದಾರೆ~ ಎಂದು ಸಿಂಗ್ ಭಾನುವಾರ ಲೇವಡಿ ಮಾಡಿದ್ದಕ್ಕೆ ತಂಡ ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.

ಇಲ್ಲಿನ ಆರ್ಯ ನಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ತಂಡದ ಸದಸ್ಯ ಅರವಿಂದ್ ಕೇಜ್ರಿವಾಲ್, `ನಮ್ಮದು ಮತ ಬ್ಯಾಂಕ್ ರಾಜಕೀಯವಲ್ಲ, ಜನರಿಗೆ ಸಂಬಂಧಿಸಿದ ರಾಜಕೀಯ. ನಮಗೂ ರಾಜಕೀಯ ಪಕ್ಷಕ್ಕೂ ಸಂಬಂಧವೇ ಇಲ್ಲ~ ಎಂದು ಹೇಳಿದರು.

`ಅವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಮ್ಮದು ಜನರ ಚಳವಳಿಯಾಗಿದ್ದು ಅದು ಹಾಗೇ ಮುಂದುವರಿದುಕೊಂಡು ಹೋಗಲು ನಾವು ಬಯಸುತ್ತೇವೆ. ಜನಲೋಕಪಾಲ್ ಮಸೂದೆ ಮಂಡನೆಯಾಗುವಂತೆ ಮಾಡುವುದೇ ನಮ್ಮ ಮುಖ್ಯ ಗುರಿ. ಭ್ರಷ್ಟಾಚಾರ ತೊಲಗುವವರೆಗೂ ಹೋರಾಟ ಮುಂದುವರಿಸುತ್ತೇವೆ~ ಎಂದು ಅವರು ಒತ್ತಿ ಹೇಳಿದರು.

ಮತ್ತೆ ಲೇವಡಿ

ನವದೆಹಲಿ, (ಪಿಟಿಐ):
ಸಮಾಜದ ದುರ್ಬಲ ವರ್ಗದವರ ವಿರುದ್ಧ ಸಾಗಿರುವವರು ಹಾಕಿಕೊಟ್ಟ ಹೂವಿನ ಹಾದಿಯನ್ನೇ ಅಣ್ಣಾ ಹಜಾರೆ ತಂಡ ಮುನ್ನಡೆಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತೊಮ್ಮೆ ಲೇವಡಿ ಮಾಡಿದ್ದಾರೆ.

`ಕಾಂಗ್ರೆಸ್‌ನ ಸಿದ್ಧಾಂತಗಳನ್ನು ವಿರೋಧಿಸುವವರು ಮತ್ತು ದುರ್ಬಲ ವರ್ಗದವರ ವಿರೋಧಿಗಳಾಗಿರುವವರು ತೋರಿಸಿಕೊಟ್ಟ ಹೂವಿನ ಹಾದಿಯಲ್ಲೇ ಅಣ್ಣಾ ಸಾಗುತ್ತಿದ್ದಾರೆ. ಅವರ ತಂಡದ ಅರವಿಂದ್ ಕೇಜ್ರಿವಾಲ್ ಅವರು ಮೀಸಲಾತಿ ವಿರೋಧಿ ಧೋರಣೆಗೆ ಖ್ಯಾತಿ ಪಡೆದವರು  ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ~ ಎಂದು ಹೇಳಿದ್ದಾರೆ. ಅಣ್ಣಾ ಆಂದೋಲನದಿಂದ ದೂರ ಸರಿಯಲು ನಿರ್ಧರಿಸಿರುವ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಕ್ರಮವನ್ನು ದಿಗ್ವಿಜಯ್ ಸ್ವಾಗತಿಸಿದ್ದಾರೆ. `ಹೆಗ್ಡೆ ಅವರ ಕ್ರಮಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅವರು ಅಣ್ಣಾ ತಂಡದಿಂದ ಅಂತರ ಕಾಪಾಡಿಕೊಳ್ಳಬೇಕು~ ಎಂದು ಸಲಹೆ ನೀಡಿದ್ದಾರೆ.

ಸ್ಟೀವ್ ಜಾಬ್ಸ್ ಶ್ಲಾಘಿಸಿದ ಅಣ್ಣಾ

ನವದೆಹಲಿ, (ಪಿಟಿಐ):
`ಜನ ಲೋಕಪಾಲ್ ಮಸೂದೆಗಾಗಿ ನಡೆಸಿದ ಹೋರಾಟದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಸಂಶೋಧಕ ಸ್ಟೀವ್ ಜಾಬ್ಸ್ ಅವರ ಸಂಶೋಧನೆಗಳು ನನಗೆ ಸಹಾಯ ಮಾಡಿವೆ~ ಎಂದು ಹೇಳುವ ಮೂಲಕ ಅಣ್ಣಾ ಹಜಾರೆ, ಆ್ಯಪಲ್ ಕಂಪೆನಿಯ ಸಹ ಸಂಸ್ಥಾಪಕನನ್ನು ನೆನೆದಿದ್ದಾರೆ.

ಇತ್ತೀಚೆಗೆ ತಾವು ನಡೆಸಿದ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ನಡೆದ ನಿರ್ಣಾಯಕ ಚರ್ಚೆಯನ್ನು ಅಣ್ಣಾ ಐಪಾಡ್ ಮೂಲಕ ವೀಕ್ಷಿಸಿದ್ದರು. ಐಪಾಡ್ ಅನ್ನು ಅಭಿವೃದ್ಧಿಪಡಿಸಿದ ಜಾಬ್ಸ್ ನ್ಯೂಯಾರ್ಕ್‌ನಲ್ಲಿ ಇತ್ತೀಚೆಗೆ ಮೃತರಾಗಿದ್ದಾರೆ.

`ತಾಂತ್ರಿಕ ಜಗತ್ತಿಗೆ ಅಸಾಧಾರಣ ಕೊಡುಗೆ ನೀಡಿದ್ದಕ್ಕಾಗಿ ಸ್ಟೀವ್ ಜಾಬ್ಸ್ ಯಾವಾಗಲೂ ನೆನಪಿನಲ್ಲಿರುತ್ತಾರೆ. ಅವರ ಸಾವಿನ ಸುದ್ದಿ ಬೇಸರ ಉಂಟು ಮಾಡುವಂಥದ್ದು~ ಎಂದು ಅಣ್ಣಾ ಬ್ಲಾಗ್‌ನಲ್ಲಿ ಬರೆದಿದ್ದಾರೆ.

`ಅನ್ಯಾಯ ಮತ್ತು ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕಾಗಿ ಜನರನ್ನು ಸಂಘಟಿಸಲು ತಂತ್ರಜ್ಞಾನ ಸಹಾಯಕ. ಜಾಬ್ಸ್ ಅವರ ಸಂಶೋಧನೆಗಳು ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿವೆ. ಜನ ಲೋಕಪಾಲ್ ಮಸೂದೆಗಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಇದು ಖುದ್ದು ನನ್ನ ಅನುಭವಕ್ಕೆ ಬಂದಿದೆ~ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.