ಸೋಮವಾರ, ಜೂನ್ 14, 2021
27 °C

ದಿನಪತ್ರಿಕೆಗಿಂತ ದೊಡ್ಡದಿತ್ತು ಮತಪತ್ರ

ಶ್ರೀಪಾದ ಯರೇಕುಪ್ಪಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ:  ಒಂದು ಕ್ಷೇತ್ರದಲ್ಲಿ ಎಷ್ಟು ಜನ ಅಭ್ಯರ್ಥಿಗಳಿರಬಹುದು? ಹತ್ತು, ಇಪ್ಪತ್ತು, ಮೂವತ್ತು... ಊಹೂಂ. ಬರೋಬ್ಬರಿ 456.

ಬಹುಶಃ ಇದೊಂದು ವಿಶ್ವ­ದಾಖ­ಲೆಯೂ ಇರಬಹುದೇನೋ. ಇದನ್ನು ಸೃಷ್ಟಿ­ಸಿದ್ದು ಬೆಳಗಾವಿ ಲೋಕಸಭಾ ಕ್ಷೇತ್ರ.ಕನ್ನಡ– ಮರಾಠಿ ಭಾಷಿಕರ ನಡುವೆ ತಂಟೆ ತಂದಿಟ್ಟು ರಾಜಕೀಯ ಬೇಳೆ ಬೇಯಿಸಿ­ಕೊಳ್ಳುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) 1996­ರಲ್ಲಿ ಚುನಾವಣೆಯೇ ನಡೆಯದಂತೆ ಮಾಡಲು 451 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಕಾಂಗ್ರೆಸ್‌, ಬಿಜೆಪಿ, ಜನತಾ­ದಳ, ಕೆಸಿಪಿ, ಎಐಐಸಿಯ (ಟಿ) 5 ಅಭ್ಯರ್ಥಿಗಳೂ ಕಣದಲ್ಲಿದ್ದರು. ಆದರೆ, ಚುನಾವಣಾ ಆಯೋಗವು ಇದಕ್ಕೆ ಸೊಪ್ಪು ಹಾಕಲಿಲ್ಲ. ದಿನಪತ್ರಿಕೆಯ ಎರಡು ಪುಟದಷ್ಟು ಅಗಲವಾದ ಮತ­ಪತ್ರ ತಯಾರಿಸಿ ಚುನಾವಣೆ ನಡೆಸಿತು.ಚುನಾವಣೆ ನಡೆಯದಂತೆ ಮಾಡಲು ಎಂಇಎಸ್‌ದಿಂದ ಬರೋಬ್ಬರಿ 521 ನಾಮ­ಪತ್ರ ಸಲ್ಲಿಕೆಯಾಗಿದ್ದವು. ನಾಮ­ಪತ್ರ ಸಲ್ಲಿಸಿದವರಲ್ಲಿ 463 ಪುರುಷರು ಹಾಗೂ 58 ಮಹಿಳೆಯರಿದ್ದರು. ಇದರಲ್ಲಿ 12 ನಾಮಪತ್ರಗಳು ತಿರಸ್ಕೃತ­ಗೊಂಡಿದ್ದವು. 53 ಮಂದಿ ನಾಮಪತ್ರ ಹಿಂದಕ್ಕೆ ಪಡೆದಿದ್ದರು. ಚುನಾವಣೆಯಲ್ಲಿ ಎಂಇಎಸ್‌ನ ಎಲ್ಲ 451 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದು ಈ ಕ್ಷೇತ್ರದ ವಿಶೇಷ.

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಒಂದೇ ಉದ್ದೇಶ­ದಿಂದ ಎಂಇಎಸ್‌ ಕಾಲುಕೆದರಿ ಜಗಳ­ವಾಡುವ ಪರಿಪಾಠವನ್ನು ಭಾಷಾವಾರು ಪ್ರಾಂತ್ಯ ರಚನೆ ಆದಂದಿನಿಂದಲೂ ನಡೆಸಿ­ಕೊಂಡು ಬಂದಿದೆ.ಆದರೆ, 1996ರ ಚುನಾವಣೆ ನಂತರ ಎಂಇಎಸ್‌ನ ಬಲ ಕುಗ್ಗುತ್ತ ಸಾಗಿತು. ಖಾನಾಪುರ ಹಾಗೂ ಉಚಗಾಂವ್‌ ವಿಧಾನ­­ಸಭಾ ಕ್ಷೇತ್ರಗಳಲ್ಲಿ ಮಾತ್ರ ಎಂಇಎಸ್‌ ಹಿಡಿತ ಸಾಧಿಸಿತ್ತು. ಹೀಗಾಗಿ ನಂತರದ ಲೋಕಸಭಾ ಚುನಾವಣೆ­ಗಳಲ್ಲಿ ಎಂಇಎಸ್‌ ಇಂಥ ದುಸ್ಸಾಹಸಕ್ಕೆ ಕೈ ಹಾಕಲಿಲ್ಲ.ಕಾಂಗ್ರೆಸ್‌ ಭದ್ರಕೋಟೆ: ಒಂದು ಕಾಲಕ್ಕೆ ಬೆಳಗಾವಿ ಕಾಂಗ್ರೆಸ್‌ ಭದ್ರಕೋಟೆ­ಯಾಗಿತ್ತು. ಇಲ್ಲಿ ‘ಕೈ’ಯನ್ನು ಮೂಲೆ­ಗುಂಪು  ಮಾಡಿದ್ದು ಹೊರಗಿನ­ವರಲ್ಲ, ಅದೇ ಪಕ್ಷದ ನಾಯಕರು. ಈ ಕ್ಷೇತ್ರ­ವನ್ನು ಪ್ರತಿನಿಧಿಸಿ ರಾಜಕೀಯವಾಗಿ ಪ್ರಭಾವಿ ಎನಿಸಿಕೊಂಡಿದ್ದ ಕೆಲವರು ಇಂದು ತಮ್ಮ ಅಸ್ತಿತ್ವವನ್ನೇ ಕಳೆದು­ಕೊಂಡಿದ್ದಾರೆ.ಇದುವರೆಗೆ ನಡೆದ 15 ಲೋಕಸಭಾ ಚುನಾವಣೆಗಳ ಪೈಕಿ, ಒಂದು ಉಪ­ಚುನಾವಣೆ ಸೇರಿದಂತೆ 12ರಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಆದರೆ, ಈ ಕ್ಷೇತ್ರ­ವನ್ನು ಪ್ರತಿನಿಧಿಸಿದ ಕಾಂಗ್ರೆಸ್‌ನ ಯಾವೊಬ್ಬ ಸದಸ್ಯರೂ ಸಚಿವರಾಗಲಿಲ್ಲ.ಐದು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಸತತ 17 ವರ್ಷ ಸಂಸದರಾಗಿದ್ದ ಎಸ್‌.ಬಿ.ಸಿದ್ನಾಳ ಕಾಂಗ್ರೆಸ್‌ನ ‘ಗೆಲ್ಲುವ ಕುದುರೆ’ ಎಂದೇ ಕ್ಷೇತ್ರದಲ್ಲಿ ಜನಜನಿತ­ರಾಗಿದ್ದರು. ಆದರೂ ಅವರಿಗೆ ಸಚಿವ­ರಾಗುವ ಭಾಗ್ಯ ಸಿಗಲಿಲ್ಲ.ಸುದೀರ್ಘ ಕಾಲ ರಾಜಕೀಯ­ದಲ್ಲಿದ್ದರೂ ಕೇಂದ್ರದಲ್ಲಿ ಪ್ರಭಾವ ಬೀರು­ವಲ್ಲಿ ವಿಫಲರಾದ್ದರಿಂದ 1996ರ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ತಪ್ಪಿತು. ಲಿಂಗಾಯತ ಸಮು­ದಾಯ­ದಲ್ಲಿ ಪ್ರಭಾವಿಯಾಗಿದ್ದ ಅವರು 1998ರ ಚುನಾವಣೆ ನಂತರ ಪಕ್ಷದಲ್ಲಿ ನಿರ್ಲಕ್ಷ್ಯಕ್ಕೊಳಗಾದರು.ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಸಿದ್ನಾಳ ಅವರಿಗೆ ಟಿಕೆಟ್‌ ತಪ್ಪಿಸಿ ತಾವು ಕಾಂಗ್ರೆಸ್‌ ಅಭ್ಯರ್ಥಿಯಾದರು. ಆದರೆ, ಫಲಿತಾಂಶ­ದಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡ­ಬೇಕಾಯಿತು. ಇಷ್ಟೊತ್ತಿಗಾಗಲೇ ಸಿದ್ನಾಳ ಅವರ ಪ್ರಭಾವ ಪಕ್ಷದಲ್ಲಿ ಕಡಿಮೆ­ಯಾಗಿತ್ತು.2004ರ ಹೊತ್ತಿಗೆ ಕನ್ನಡ ನಾಡು ಪಾರ್ಟಿ ಹಾಗೂ ನಂತರ ಜೆಡಿಎಸ್‌ ಸೇರಿದ್ದರು. ಇತ್ತೀಚೆಗೆ ಕಾಂಗ್ರೆಸ್‌ಗೆ ಮರಳಿ ಬಂದಿದ್ದರೂ ಅವರಿಗೆ ಪಕ್ಷದಲ್ಲಿ ಯಾವುದೇ ಸ್ಥಾನ­ಮಾನ ಸಿಕ್ಕಿಲ್ಲ. ಪಕ್ಷದ ಚಟುವಟಿಕೆ­ಗಳಲ್ಲೂ ಕಾಣಿಸಿಕೊಳ್ಳದ ಸಿದ್ನಾಳ ಈಗ ರಾಜಕೀಯವಾಗಿ ಮೂಲೆಗುಂಪಾಗಿ­ದ್ದಾರೆ ಎಂದು ಅವರ ಪಕ್ಷದವರೇ ಆಡಿಕೊಳ್ಳುವಂತಾಗಿದೆ.ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ರಾಜ್ಯ ರೈತ ಸಂಘದಿಂದ ಒಮ್ಮೆ ಹಾಗೂ ಬಿಜೆಪಿಯಿಂದ ಒಂದು ಬಾರಿ ಸ್ಪರ್ಧಿಸಿ ಸೋಲು ಉಂಡಿದ್ದ ಬಾಬಾಗೌಡ ಪಾಟೀಲ 1998ರಲ್ಲಿ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದರು. ಸಂಸದರಾಗಿ ಅನುಭವ ಇಲ್ಲದೇ ಹೋದರೂ ಹೋರಾಟ ಅವರ ಕೈ ಹಿಡಿದಿತ್ತು.  ಅಟಲ್‌ ಬಿಹಾರಿ ವಾಜಪೇಯಿ ನೇತೃ­ತ್ವದ ಎನ್‌ಡಿಎ ಸರ್ಕಾರದಲ್ಲಿ ಅವರು ಗ್ರಾಮೀಣಾಭಿವೃದ್ಧಿ ಖಾತೆ ಸಹಾಯಕ  ಸಚಿವರಾದರು.ಪಕ್ಷಾಂತರ ಜಾಯಮಾನದ ಬಾಬಾ­ಗೌಡ ಪಾಟೀಲ ಬಿಜೆಪಿ ಬಿಟ್ಟು ಜೆಡಿಎಸ್‌ ಸೇರ್ಪಡೆಯಾಗಿದ್ದರು. ನಂತರ  ಸಮಾಜ­ವಾದಿ ಪಕ್ಷ ಸೇರಿ, ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಆ ಪಕ್ಷವನ್ನೂ ತೊರೆದು ಮತ್ತೆ ಬಿಜೆಪಿಗೆ ಮರಳಿದ್ದಾರೆ.ಒಂದೇ ವರ್ಷದ ನಂತರ ನಡೆದ ಚುನಾವಣೆಯಲ್ಲಿ ಅಮರಸಿಂಹ ಪಾಟೀಲ ಬಿಜೆಪಿಯನ್ನು ಮಣಿಸಿ ಈ ಕ್ಷೇತ್ರವನ್ನು ಮರಳಿ ಕಾಂಗ್ರೆಸ್‌ ತೆಕ್ಕೆಗೆ ತಂದರು. ನಂತರದ ಎರಡೂ ಚುನಾವಣೆ­ಗಳಲ್ಲಿ ಬಿಜೆಪಿಯ ಸುರೇಶ ಅಂಗಡಿ ಅಮರಸಿಂಹ ಪಾಟೀಲರನ್ನು ಸೋಲಿಸಿದರು.‘ಈ ಬಾರಿ ನರೇಂದ್ರ ಮೋದಿ ಪರ ಅಲೆಯು ಬೆಂಬಲಕ್ಕೆ ಬರಲಿದೆ’ ಎಂಬ ಲೆಕ್ಕಾಚಾರದಲ್ಲಿ ಮುಳುಗಿರುವ ಸುರೇಶ ಅಂಗಡಿ ಅವರಿಗೆ ಪಕ್ಷದಲ್ಲಿರುವ ಅಸಮಾಧಾನ ಆತಂಕ ಮೂಡಿಸಿದೆ. ಅರಭಾವಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿ­ಹೊಳಿ ಬಹಿರಂಗವಾಗಿಯೇ ಅಂಗಡಿ ವಿರುದ್ಧ ಅಸಮಾಧಾನ ಹೊರಗೆಡ­ವಿದ್ದಾರೆ. ಪಕ್ಷದ ಜಿಲ್ಲಾ ಘಟಕದಲ್ಲೂ ಅಸಮಾಧಾನದ ಹೊಗೆಯಾಡುತ್ತಿದೆ.ಈ ಕ್ಷೇತ್ರದಲ್ಲಿ 2004ರಿಂದ ಕಾಂಗ್ರೆಸ್‌ ಪ್ರಾಬಲ್ಯ ಕಡಿಮೆಯಾಗುತ್ತ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿಯ ನಾಲ್ವರು, ಕಾಂಗ್ರೆಸ್‌ನ ಮೂವರು ಹಾಗೂ ಎಂಇಎಸ್‌ನ ಒಬ್ಬರು ಶಾಸಕರಿದ್ದಾರೆ. ಜಿಲ್ಲಾ ಪಂಚಾಯಿತಿ ಕೂಡ ಬಿಜೆಪಿ ವಶದಲ್ಲಿದೆ. ಬೆಳಗಾವಿ ಮಹಾನಗರ ಪಾಲಿಕೆಯು ಪಕ್ಷೇತರರ ಪಾಲಾಗಿದೆ. ನಾಲ್ಕು ತಾಲ್ಲೂಕು ಪಂಚಾಯ್ತಿಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಗೋಕಾಕ ತಾಲ್ಲೂಕು ಪಂಚಾಯಿತಿ ಜಾರಕಿಹೊಳಿ ಕುಟುಂಬದವರ ಹಿಡಿತದಲ್ಲಿದೆ. ಜಿಲ್ಲೆಯಲ್ಲಿ ಜೆಡಿಎಸ್‌ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.