ಭಾನುವಾರ, ಮಾರ್ಚ್ 7, 2021
29 °C
ಜಿಮ್ನಾಸ್ಟಿಕ್ಸ್‌: ವಾಲ್ಟ್‌ ವಿಭಾಗದ ಫೈನಲ್‌ಗೆ ಭಾರತದ ಸ್ಪರ್ಧಿ

ದೀಪಾ ಐತಿಹಾಸಿಕ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೀಪಾ ಐತಿಹಾಸಿಕ ಸಾಧನೆ

ರಿಯೊ ಡಿ ಜನೈರೊ (ಪಿಟಿಐ): ಭಾರತದ ಜಿಮ್ನಾಸ್ಟ್‌ ದೀಪಾ ಕರ್ಮಾಕರ್‌ ರಿಯೊ ಒಲಿಂಪಿಕ್‌ ಕೂಟದ ವೈಯಕ್ತಿಕ ವಾಲ್ಟ್‌ ವಿಭಾಗದ ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.ಭಾನುವಾರ ರಾತ್ರಿ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ದೀಪಾ ಎಂಟನೇ ಸ್ಥಾನ ಪಡೆದರು. ಮೊದಲ ಎಂಟು ಸ್ಥಾನ ಪಡೆದ ಸ್ಪರ್ಧಿಗಳು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡರು.ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಾಗಲೇ ದೀಪಾ ಹೆಸರು ಚರಿತ್ರೆಯ ಪುಟಗಳಲ್ಲಿ ಸೇರಿತ್ತು. ಏಕೆಂದರೆ ಭಾರತದ ಯಾವುದೇ ಮಹಿಳಾ  ಜಿಮ್ನಾಸ್ಟ್‌ ಒಮ್ಮೆಯೂ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರಲಿಲ್ಲ. ಇದೀಗ ಫೈನಲ್‌ ಪ್ರವೇಶಿಸಿ ದೇಶಕ್ಕೆ ಹೆಮ್ಮೆ ತಂದಿತ್ತಿದ್ದಾರೆ.ಎರಡು ಪ್ರಯತ್ನಗಳ ಬಳಿಕ ‘ಪ್ರೊಡುನೋವಾ ವಾಲ್ಟ್‌’ ಎಂಬ ಅತಿ ಕಠಿಣ ಸಾಹಸವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದ ಅವರು 14.850 ಪಾಯಿಂಟ್‌ಗಳನ್ನು ಕಲೆಹಾಕಿದರು.

ಅರ್ಹತಾ ಸ್ಪರ್ಧೆಯ ಐದು ಸುತ್ತುಗಳಲ್ಲಿ ಮೂರು ಸುತ್ತುಗಳು ಕೊನೆಗೊಂಡಾಗ ದೀಪಾ ಆರನೇ ಸ್ಥಾನದಲ್ಲಿದ್ದರು. ಕೆನಡಾದ ಶಾಲನ್‌ ಒಸ್ಲೆನ್‌ ಅದ್ಭುತ ಕಸರತ್ತು ಪ್ರದರ್ಶಿಸಿ 14.950 ಪಾಯಿಂಟ್ ಕಲೆಹಾಕಿದರು. ಇದರಿಂದ ದೀಪಾ ಎಂಟನೇ ಸ್ಥಾನಕ್ಕೆ ಕುಸಿತ ಕಂಡರಾದರೂ, ಆಗಸ್ಟ್‌ 14 ರಂದು ನಡೆಯಲಿರುವ ಫೈನಲ್‌ಗೆ ಸ್ಥಾನ ಪಡೆದರು.ದೀಪಾ ಮೊದಲ ಪ್ರಯತ್ನ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿಬರಲಿಲ್ಲ. ಆದರೆ ಎರಡನೇ ಪ್ರಯತ್ನದಲ್ಲಿ ಎರಡು ಸಲ ಆಕರ್ಷಕ ‘ಸಮರ್‌ಸಾಲ್ಟ್’ (ಲಯಬದ್ಧವಾದ ಲಾಗ) ಹೊಡೆದು ಪಾಯಿಂಟ್‌ ಹೆಚ್ಚಿಸಿಕೊಂಡರು.‘ಇದು ನನ್ನ ಮೊದಲ ಒಲಿಂಪಿಕ್‌ ಕೂಟ. ಸ್ಪರ್ಧೆಗೆ ಮುನ್ನ ಅಮೆರಿಕದ ಸಿಮೊನ್‌ ಬಿಲ್ಸ್‌ ನನ್ನ ಬಳಿ ಬಂದು ಶುಭ ಕೋರಿದರು. ಇದು  ನನ್ನ ಆತ್ಮವಿಶ್ವಾಸವ ನ್ನು ಹೆಚ್ಚಿಸಿತು’ ಎಂದು ದೀಪಾ ಹೇಳಿದ್ದಾರೆ.ಮೂರು ಸಲ ವಿಶ್ವಚಾಂಪಿಯನ್‌ ಪಟ್ಟ ತಮ್ಮದಾಗಿಸಿ ಕೊಂಡಿ ರುವ ಬಿಲ್ಸ್‌ ಅವರು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ದಾಖಲೆಯ 10 ಚಿನ್ನದ ಪದಕ ಗೆದ್ದಿಕೊಂಡಿದ್ದಾರೆ.

ಬಿಲ್ಸ್‌ ಅವರು ವಾಲ್ಟ್‌ನಲ್ಲಿ 16.050 ಪಾಯಿಂಟ್  ಕಲೆಹಾಕಿ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ತಮ್ಮದಾಗಿಸಿ ಕೊಂಡರು. ಉತ್ತರ ಕೊರಿಯದ ಜಾಂಗ್‌ ಉನ್‌ ಹಾಂಗ್‌ (15.683) ಮತ್ತು ಸ್ವಿಟ್ಜರ್‌ಲೆಂಡ್‌ನ ಗಿಲಿಯಾ ಸ್ಟೈನ್‌ಗ್ರಬೆರ್‌ (15.266) ಕ್ರಮವಾಗಿ ಎರಡು ಮೂರು ಮೂರನೇ ಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿದರು.ದೀಪಾ ಒಟ್ಟಾರೆಯಾಗಿ 47ನೇ ಸ್ಥಾನದಲ್ಲಿ ಕಾಣಿಸಿಕೊಂಡರು. ತ್ರಿಪುರಾದ ಈ ಜಿಮ್ನಾಸ್ಟ್‌ ಎಲ್ಲ ವಿಭಾಗಗಳಲ್ಲಿ ಒಟ್ಟು 51.665 ಪಾಯಿಂಟ್‌ ಕಲೆಹಾಕಿದರು.ದೀಪಾ ಅವರು ಅನ್‌ಈವನ್‌ ಬಾರ್ಸ್‌ (11.666 ಪಾಯಿಂಟ್‌), ಬ್ಯಾಲೆನ್ಸ್‌ ಬೀಮ್‌ (12.866) ಮತ್ತು ಫ್ಲೋರ್‌ ಎಕ್ಸರ್‌ಸೈಜ್‌ (12.033) ವಿಭಾಗ ಗಳಲ್ಲಿ ವಿಶ್ವದ ಇತರ ಸ್ಪರ್ಧಿಗಳಿಗೆ ಸರಿಸಾಟಿಯಾಗಿ ನಿಲ್ಲುವಲ್ಲಿ ವಿಫಲರಾದರು.ಸಂಪರ್ಕಕ್ಕೆ ಸಿಗದ ದೀಪಾ

ರಿಯೊ ಡಿ ಜನೈರೊ (ಪಿಟಿಐ):  ಜಿಮ್ನಾಸ್ಟಿಕ್ಸ್‌ನ ವಾಲ್ಟ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿ ಇತಿಹಾಸ ಬರೆದಿರುವ ದೀಪಾ ಕರ್ಮಾಕರ್‌ ಈಗ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು,  ಒಲಿಂಪಿಕ್ಸ್‌ ಕ್ರೀಡಾ ಗ್ರಾಮದ ಕೊಠಡಿಯಲ್ಲೂ ಅವರು ಕಾಣಿಸುತ್ತಿಲ್ಲ.ಮಂಗಳವಾರ 23ನೇ ವಸಂತಕ್ಕೆ ಕಾಡಲಿಡಲಿರುವ ದೀಪಾ ಏಕಾಗ್ರತೆ ಕಳೆದುಕೊಳ್ಳಬಹುದೆಂಬ ಆತಂಕದಿಂದ ಅವರ ಕೋಚ್‌ ವಿಶ್ವೇಶ್ವರ ನಂದಿ  ಅವರು ದೀಪಾ ಅವರ ಮೊಬೈಲ್‌ನ ಸಿಮ್‌  ತೆಗೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಪೋಷಕರನ್ನು ಬಿಟ್ಟು ಬೇರೆ ಯಾರಿಗೂ ದೀಪಾ ಜೊತೆ ಮಾತನಾಡುವ ಅವಕಾಶ ನೀಡದಿರಲು ನಿರ್ಧರಿಸಿದ್ದಾರೆ.‘ ದೀಪಾ ಈಗ ಫೈನಲ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವತ್ತ ಗಮನ ಹರಿಸಬೇಕಿದೆ.  ಈ ಸಂದರ್ಭದಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುವುದು ಸೂಕ್ತವಲ್ಲ.  ಹೀಗಾಗಿ ಅವರ ಮೊಬೈಲ್‌ ನಿಂದ ಸಿಮ್‌ ಕಾರ್ಡ್‌  ತೆಗೆದು ಹಾಕಿದ್ದೇನೆ. ಬಿಡುವಿನ ವೇಳೆಯಲ್ಲಿ ಮಾತ್ರ ಅಪ್ಪ, ಅಮ್ಮನೊಂದಿಗೆ ಮಾತ ನಾಡಲು ಅವಕಾಶ ಮಾಡಿಕೊಟ್ಟಿದ್ದೇನೆ. ಉಳಿದ ಸಮಯದಲ್ಲಿ ಅವರ ಗಮನ ಕೇವಲ ಅಭ್ಯಾಸದೆಡೆಗೆ ಮಾತ್ರ ಇರಬೇಕು’ ಎಂದು ನಂದಿ ತಿಳಿಸಿದ್ದಾರೆ.ಏನಿದು ‘ಪ್ರೊಡುನೋವಾ ವಾಲ್ಟ್‌’

ರಷ್ಯಾದ ಜಿಮ್ನಾಸ್ಟ್‌ ಎಲೆನಾ ಪ್ರೊಡುನೋವಾ 1999 ರಲ್ಲಿ ಮೊದಲ  ಬಾರಿ ವಾಲ್ಟ್‌ನಲ್ಲಿ ಅದ್ಭುತ ಕಸರತ್ತು ತೋರಿದ್ದರು. ಅದುವರೆಗೆ ಯಾರೂ ಅಂತಹ ಸಾಹಸಕ್ಕೆ ಮುಂದಾಗಿರಲಿಲ್ಲ. ಅವರು ಹೊಸದಾಗಿ ಪರಿಚಯಿಸಿದ ಕಸರತ್ತು ‘ಪ್ರೊಡುನೋವಾ’ ಎಂಬ ಹೆಸರಿನಿಂದ ಜನಪ್ರಿಯತೆ ಪಡೆಯಿತು.

ದೂರದಿಂದ ಓಡೋಡಿ ಬಂದು ಎರಡೂ ಕೈಗಳನ್ನು ವಾಲ್ಟ್‌ ಮೇಲೆ ಒತ್ತಿ ಮೇಲಕ್ಕೆ ಜಿಗಿದು, ಎರಡು ‘ಸಮರ್‌ಸಾಲ್ಟ್’ (ಲಯಬದ್ಧವಾದ ಲಾಗ) ಹೊಡೆದು, ನೆಲದ (ಮ್ಯಾಟ್‌) ಮೇಲೆ ನಿಲ್ಲುವ ಕಸರತ್ತು ಇದು. ಕೈಗಳು ಸ್ಪ್ರಿಂಗ್‌ನಂತೆ ಕೆಲಸ ಮಾಡಿ ದೇಹವನ್ನು ಮೇಲಕ್ಕೆ ಚಿಮ್ಮುವಂತೆ ಮಾಡುತ್ತವೆ. ನೆಲಕ್ಕೆ ಬೀಳುವ ಸಂದರ್ಭದಲ್ಲೂ ದೇಹ ಅತ್ತಿತ್ತ ವಾಲದಂತೆ ನೋಡಿಕೊಳ್ಳಬೇಕು.ಸ್ವಲ್ಪ ಆಯ ತಪ್ಪಿದರೂ ಕುತ್ತಿಗೆಯ ಮೂಳೆ ಮುರಿಯುವ ಅಥವಾ ಬೆನ್ನೆಲುಬು ಘಾಸಿಗೊಳ್ಳುವ ಅಪಾಯ ಇದೆ. ಆದ್ದರಿಂದ ಈ ಸಾಹಸಕ್ಕೆ ‘ವಾಲ್ಟ್‌ ಆಫ್‌ ಡೆತ್‌’ ಎಂಬ ಹೆಸರೂ ಇದೆ. ಈ ಕಸರತ್ತು ನಿಷೇಧಿಸಬೇಕು ಎಂಬ ಕೂಗು ಕೂಡಾ ಎದ್ದಿತ್ತು.ವೃತ್ತಿಪರ ಚಾಂಪಿಯನ್‌ ಷಿಪ್‌ಗಳಲ್ಲಿ ದೀಪಾ ಸೇರಿದಂತೆ ವಿಶ್ವದ ಕೇವಲ ಐವರು ಜಿಮ್ನಾಸ್ಟ್‌ಗಳು ಮಾತ್ರ ಈ ಕಸರತ್ತು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ.

ಆದರೆ ಎಲೆನಾ ಪ್ರೊಡೊನೊವಾ ಅವರಷ್ಟು ಅಚ್ಚುಕಟ್ಟಾಗಿ ಈ ಕಸರತ್ತು ಪ್ರದರ್ಶಿಸಲು ಯಾರಿಗೂ ಆಗಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.