ಗುರುವಾರ , ಮೇ 6, 2021
32 °C

ದುಃಸ್ಥಿತಿಯಲ್ಲಿ ಗಜೇಂದ್ರ ಮೋಕ್ಷ ಕೊಳ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಸೆ. 30 ರಿಂದ ಅ. 4ರ ವರೆಗೆ ದಸರಾ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆದರೆ ನಾಡಹಬ್ಬ ದಸರಾ ಆಚರಣೆಯ ಜತೆ ತಳುಕು ಹಾಕಿಕೊಂಡಿರುವ ಪರಂಪರೆಯ ಕುರುಹುಗಳು ಹಾಳು ಸುರಿಯುತ್ತಿವೆ.ಶ್ರೀರಂಗನಾಥ ದೇವಾಲಯದ ಎಡ ಬದಿಯಲ್ಲಿ, ಕಣ್ಣಳತೆಯ ದೂರದಲ್ಲಿರುವ ಗಜೇಂದ್ರ ಮೋಕ್ಷ ಕೊಳ ಭಾಗಶಃ ಮುಚ್ಚಿ ಹೋಗಿದೆ. ಕೊಳದ ಒಳಗಿನ ಶಿಲಾ ಗಜೇಂದ್ರ ಬಿಸಿಲು, ಮಳೆ ಹೊಡೆತಕ್ಕೆ ಬಣ್ಣಗೆಟ್ಟಿದೆ. ಕೊಳದ ಸುತ್ತ ಇದ್ದ ಕಲ್ಲಿನ ಚಪ್ಪಡಿಗಳು ಜಾರಿ ಬಿದ್ದಿದ್ದು, ಒಳಾವರಣದಲ್ಲಿ ಪಾರ್ಥೇನಿಯಂ, ಇತರ ಗಿಡಗಂಟೆಗಳು ಬೆಳೆದಿವೆ.ಆನೆಯ ಮುಂದಿನ ಎರಡು ಕಲ್ಲಿನ ಸ್ತಂಭಗಳು ವಾಲಿಕೊಂಡಿದ್ದು ಬೀಳುವ ಸ್ಥಿತಿಯಲ್ಲಿವೆ. ಚಚ್ಚೌಕಾಕಾರದ ಕೊಳ ಅಕ್ಷರಶಃ ತಿಪ್ಪೆಗುಂಡಿಯಂತೆ ಕಾಣುತ್ತಿದೆ.ವಿಜಯನಗರ ಸಾಮ್ರಾಜ್ಯ ಪತನದ ನಂತರ ನವರಾತ್ರಿ ಉತ್ಸವ ಮೆರಗು ಪಡೆದದ್ದು ಶ್ರೀರಂಗಪಟ್ಟಣದಲ್ಲಿ. ರಾಜ ಒಡೆಯರ್ ಕ್ರಿ.ಶ. 1610ರಲ್ಲಿ ವಿಜಯನಗರದ ರಾಜ ಪ್ರತಿನಿಧಿ (ಪ್ರಾಂತೀಯ ರಾಜ್ಯಪಾಲ) ಶ್ರೀರಂಗರಾಯನಿಂದ ಸುವರ್ಣ ಸಿಂಹಾಸನವನ್ನು ವಶಪಡಿಸಿಕೊಂಡು ಸ್ವತಂತ್ರರಾದ ಬಳಿಕ ಇಲ್ಲಿ ದಸರಾ ಆಚರಣೆ ಶುರುವಾಗಿ ಹೈದರ್ ಕಾಲದ ವರೆಗೆ ವಿಜೃಂಭಣೆಯಿಂದ ನಡೆಯಿತು ಎಂದು ಇತಿಹಾಸ ಹೇಳುತ್ತದೆ. ನವರಾತ್ರಿ ಉತ್ಸವದ ವೇಳೆ ನಡೆಯುತ್ತಿದ್ದ ಮಲ್ಲಯುದ್ಧ, ಟಗರು ಕಾಳಗ, ದೊಣ್ಣೆ ವರಸೆ, ಯಕ್ಷಿಣಿ ವಿದ್ಯೆ ಇತರ ಮನರಂಜನಾ ಕಾರ್ಯಕ್ರಮಗಳ ಜತೆ ಪುರಾಣದ ಗಜೇಂದ್ರ ಮೋಕ್ಷ ಪ್ರಸಂಗ ಕೂಡ ಜೀವ ಪಡೆಯುತ್ತಿತ್ತು. ಗಜೇಂದ್ರನ ಕಾಲು ಹಿಡಿದ ಮೊಸಳೆಗೆ ಮಂಟಪದ ಮೇಲೆ ನಿಂತು ಬಾಣ ಹೂಡಲಾಗುತ್ತಿತ್ತು.ಪ್ರಸಂಗ: ದೇವತೆಗಳ ಶಾಪಕ್ಕೆ ಗುರಿಯಾದ ಗಂಧರ್ವ ಆನೆಯಾಗಿ ಜನ್ಮ ತಳೆಯುತ್ತಾನೆ. ನೀರು ಕುಡಿಯಲು ನದಿಗೆ ಇಳಿದಾಗ ಮೊಸಳೆ ಗಜೇಂದ್ರನ ಕಾಲು ಹಿಡಿಯುತ್ತದೆ. ವಿಷ್ಣು ಪ್ರತ್ಯಕ್ಷನಾಗಿ ಮೊಸಳೆಗೆ ಬಾಣ ಹೂಡಿ ಗಜೇಂದ್ರ ರೂಪದ ಗಂಧರ್ವನನ್ನು ರಕ್ಷಿಸುತ್ತಾನೆ... ಎಂಬ ಪುರಾಣದ ಕಥೆಗೆ ಪೂರಕವಾಗಿ ನವರಾತ್ರಿ ಸಂದರ್ಭದಲ್ಲಿ ಗಜೇಂದ್ರ ಮೋಕ್ಷ ಪ್ರಸಂಗ ನಡೆಯುತ್ತಿತ್ತು. ಈ ಪ್ರಸಂಗವನ್ನು ಪುರದ ಜನರು ಕಣ್ತುಂಬಿಕೊಳ್ಳುತ್ತಿದ್ದರು.ಕಳೆದ 4 ವರ್ಷಗಳಿಂದ ಪಟ್ಟಣದಲ್ಲಿ ದಸರಾ ಕಾರ್ಯಕ್ರಮ ನಡೆಯುತ್ತಿದೆ. ಇಂತಹ ಐತಿಹಾಸಿಕ ಮಹತ್ವ ಪಡೆದಿರುವ ಕೊಳ, ದಸರಾ ಕುರುಹುಗಳ ಸ್ವಚ್ಛತೆ ಹಾಗೂ ರಕ್ಷಣೆಗೆ ಜಿಲ್ಲಾಡಳಿತ ಇದುವರೆಗೂ ಮುಂದಾಗಿಲ್ಲ. ಜನತಾ ದಸರಾವಾಗಿ ಮಾರ್ಪಟ್ಟಿರುವ ಕಾರ್ಯಕ್ರಮಕ್ಕೆ ಸರ್ಕಾರದಿಂದ ಬಿಡುಗಡೆಯಾದ ಹಣ, ಬರಬೇಕಾದ ಮತ್ತಷ್ಟು ಹಣದ ಬಗ್ಗೆಯೇ ಚರ್ಚೆಗಳು ಹೆಚ್ಚು ನಡೆಯುತ್ತಿವೆ. ಮೂಲ ದಸರಾ ಉತ್ಸವದ ಸೊಬಗು ಮೇಳೈಸುವಂತೆ ಕಾರ್ಯಕ್ರಮ ರೂಪಿಸುವ ಬಗ್ಗೆ ಜನಪ್ರತಿನಿಧಿಗಳಾದಿಯಾಗಿ ಯಾರೊಬ್ಬರೂ ಚಕಾರ ಎತ್ತದೇ ಇರುವುದು ಟೀಕೆಗೆ ಗ್ರಾಸವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.