ಮಂಗಳವಾರ, ಏಪ್ರಿಲ್ 20, 2021
32 °C
ಬಡತನ ರೇಖೆಗಿಂತ ಮೇಲಿರುವವರಿಗೂ ಸೇವೆ ವಿಸ್ತರಣೆಯಾಗಲಿ- ಶೆಟ್ಟರ್

`ದುಬಾರಿ' ಡಯಾಲಿಸಿಸ್ ಇಲ್ಲಿ `ಉಚಿತ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ದುಬಾರಿ' ಡಯಾಲಿಸಿಸ್ ಇಲ್ಲಿ `ಉಚಿತ'

ಬೆಂಗಳೂರು: `ಡಯಾಲಿಸಿಸ್ ಚಿಕಿತ್ಸೆ ತುಂಬಾ ದುಬಾರಿ. ಕೇವಲ ಬಡವರಿಗಷ್ಟೇ ಅಲ್ಲ, ಬಡತನ ರೇಖೆಗಿಂತಲೂ ಮೇಲಿರುವ ಮಧ್ಯಮ ವರ್ಗದ ಜನರಿಗೂ ಇದು ಹೊರೆಯಾಗುತ್ತದೆ. ಆದ್ದರಿಂದ ಈ ಸೇವೆಯನ್ನು ಎಪಿಎಲ್ ಕಾರ್ಡ್ ಹೊಂದಿರುವವರಿಗೂ ವಿಸ್ತರಿಸಬೇಕು' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೂಚನೆ ನೀಡಿದರು.

ರಾಜಾಜಿನಗರದ 2ನೇ ಬ್ಲಾಕ್‌ನಲ್ಲಿ ನಿರ್ಮಾಣವಾಗಿರುವ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಡಯಾಲಿಸಿಸ್ ಕೇಂದ್ರವನ್ನು ಬುಧವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಅಗತ್ಯ ಬಿದ್ದರೆ ಸರ್ಕಾರದಿಂದ ಹೆಚ್ಚಿನ ನೆರವು ಪಡೆಯುವಂತೆ ಸಚಿವ ಸುರೇಶ್ ಕುಮಾರ್ ಅವರಿಗೆ ತಿಳಿಸಿದರು.

`ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಬೇಕಾದ ನೂರಾರು ರೋಗಿಗಳು ನೆರವಿಗಾಗಿ ನಮ್ಮ ಕಚೇರಿಗೆ ಬರುತ್ತಾರೆ. ವಿವಿಧ ಚಿಕಿತ್ಸೆಗಳಿಗೆ ಅನುದಾನ ಕೋರಿ ಸಾವಿರಾರು ಪತ್ರಗಳು  ಬರುತ್ತವೆ. ಅವುಗಳನ್ನು ಓದಲು ಪ್ರತಿದಿನ ಸುಮಾರು ಒಂದು ಗಂಟೆ ಸಮಯ ಮೀಸಲಿಡಲಾಗುತ್ತದೆ. ಬಡ ರೋಗಿಗಳ ನೋವು ಏನು ಎನ್ನುವುದನ್ನು ಕಣ್ಣಾರೆ ಕಂಡಿದ್ದೇನೆ. ರಾಜ್ಯದ ಜನತೆಗೆ ಇಂತಹ ಕೇಂದ್ರದ ಅಗತ್ಯವಿತ್ತು' ಎಂದು ಅವರು ಅಭಿಪ್ರಾಯಪಟ್ಟರು.

ಕಾನೂನು ಸಚಿವ ಎಸ್.ಸುರೇಶ್ ಕುಮಾರ್, ರಾಜ್ಯದಲ್ಲಿ  ಮೊದಲ ಬಾರಿಗೆ ಸರ್ಕಾರ, ಖಾಸಗಿ ಸಹಭಾಗಿತ್ವದಲ್ಲಿ ಇಂಥ ಯೋಜನೆ ಕೈಗೊಂಡಿದೆ ಎಂದರು.

ಬಿಪಿಎಲ್ ಕಾರ್ಡ್ ಹೊಂದಿರುವ ಬಡ ರೋಗಿಗಳಿಗೆ ಇದು ಸಂಪೂರ್ಣ ಉಚಿತ. ಆದರೆ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ರಿಯಾಯಿತಿ ದರದಲ್ಲಿ, ಅಂದರೆ ಕೇವಲ 500 ರೂಪಾಯಿಯಲ್ಲಿ ಚಿಕಿತ್ಸೆ ಒದಗಿಸಲಾಗುವುದು. ಆದರೆ ಬೇರೆ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಗೆ ರೂ 2000ದಿಂದ ರೂ 3000 ವೆಚ್ಚ ತಗುಲುತ್ತದೆ ಎಂದು ವಿವರ ನೀಡಿದರು.

ವಿಧಾನ ಪರಿಷತ್ ಸದಸ್ಯ ರಾಮಚಂದ್ರೇಗೌಡ ಮಾತನಾಡಿ, ಈ ಕೇಂದ್ರಕ್ಕೆ ಶಾಸಕರ ನಿಧಿಯಿಂದ ಪ್ರತಿ ತಿಂಗಳು 50,000 ರೂಪಾಯಿ ಅನುದಾನ ನೀಡಲಾಗುವುದು. ಇದರಲ್ಲಿ ಎಪಿಎಲ್ ಕಾರ್ಡ್ ಹೊಂದಿರುವ 100 ಜನರಿಗೆ ಉಚಿತ ಚಿಕಿತ್ಸೆ ನೀಡಬಹುದು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಈ ಕೇಂದ್ರದಲ್ಲಿ ಈಗಾಗಲೇ 9 ಚಿಕಿತ್ಸಾ ಘಟಕಗಳಿವೆ. ಆರೋಗ್ಯ ಇಲಾಖೆಯಿಂದ ಮತ್ತೆ ಎರಡು ಘಟಕಗಳನ್ನು ನೀಡಲಾಗುವುದು ಎಂದರು.

ಶೀಘ್ರದಲ್ಲಿಯೇ ದೂರವಾಣಿ ಮೂಲಕವೇ ಆರೋಗ್ಯ ಸಮಸ್ಯೆಗೆ ಸಲಹೆ ನೀಡುವ `104' ಸೇವೆಯನ್ನು ಆರಂಭಿಸಲಾಗುವುದು. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗುವ ತಾಯಿ-ಮಗುವನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಗುಜರಾತ್ ಮಾದರಿಯಲ್ಲಿ `ಹ್ಯಾಪಿ ಡ್ರಾಪ್' ಯೋಜನೆಗೆ ಎರಡು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ಅವರು ವಿವರಿಸಿದರು.

ಕರಪತ್ರ ಹಂಚಿಕೆ: ಇಬ್ಬರ ಬಂಧನ

`ಕೂಡಲೇ ಲೋಕಾಯುಕ್ತರ ನೇಮಕ ಮಾಡಿ ಇಲ್ಲವೇ ಕುರ್ಚಿ ಬಿಡಿ' ಎಂಬ ಕರಪತ್ರವನ್ನು ಸಮಾರಂಭದಲ್ಲಿ ಹಂಚುತ್ತಿದ್ದ ಆರೋಪದ ಮೇಲೆ ಇಬ್ಬರು ಕಾರ್ಯಕರ್ತರನ್ನು ಇದೇ ಸಂದರ್ಭದಲ್ಲಿ ಪೊಲೀಸರು ಬಂಧಿಸಿದರು.ಅಂಚೆಕಚೇರಿ ಸಿಬ್ಬಂದಿ ವೇಷ ಧರಿಸಿ ಬಂದಿದ್ದ ಆರ್.ಟಿ.ಐ ಕಾರ್ಯಕರ್ತ ಎಸ್ .ಸುಭಾಷ್ ಎನ್ನುವರನ್ನು ಸಂಜೆ 5 ಗಂಟೆಯ ಸುಮಾರಿಗೆ ಬಂಧಿಸಲಾಗಿತ್ತು. ನಂತರ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಕರಪತ್ರವನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕುಳಿತಿರುವ ವೇದಿಕೆ ಕಡೆಗೆ ಎಸೆದ ಕರ್ನಾಟಕ ಜಾಗೃತಿ ಜನಾಂದೋಲನದ ಜಯಕುಮಾರ್ ಹಿರೇಮಠ ಅವರನ್ನು ಕೂಡ ಬಂಧಿಸಲಾಯಿತು.  15 ತಿಂಗಳು ಕಳೆದರೂ ಲೋಕಾಯುಕ್ತರ ನೇಮಕ ಮಾಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಕೂಡಲೇ ಲೋಕಾಯುಕ್ತರ ನೇಮಕವಾಗಬೇಕು. ಬಿಬಿಎಂಪಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಭ್ರಷ್ಟ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನು ಕರಪತ್ರದಲ್ಲಿ ಪ್ರಕಟಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.