ದುಬೈನ ಶ್ರೀಮಂತರು; ಇಲ್ಲಿ ಕೂಲಿ ಕಾರ್ಮಿಕರು
ಗಂಗಾವತಿ: ದೂರದ ದುಬೈನಲ್ಲಿ ನೆಲೆಸಿರುವ ಭಾರಿ ಧನಿಕ ಇಲ್ಲಿ ಕೂಲಿ ಕಾರ್ಮಿಕ, ನಿತ್ಯ ಹತ್ತಾರು ಆಳುಗಳಿಂದ ಹೊಲ, ಮನಿ ಕೆಲಸ ಮಾಡಿಸುವ ಸಿರಿವಂತ ಇಲ್ಲಿ ಕಡು ಬಡವ, ಹತ್ತಾರು ಎಕರೆ ಜಮೀನಿನ ರೈತ ಕೂಡ ಇಲ್ಲಿ ಸರ್ಕಾರದ ಹಣಕ್ಕೆ ಅಂಗಲಾಚುವ ಕೂಲಿಕಾರ.
ಇದು ವಿಚಿತ್ರ ಆದರೂ ಸತ್ಯ. ತಾಲ್ಲೂಕಿನ ಮಲ್ಲಾಪುರದಲ್ಲಿ ಕಂಡು ಬರುತ್ತಿರುವ ನೈಜ ಚಿತ್ರಣ.
ಕೇವಲ ಹಣಕ್ಕಾಗಿ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಸಾರ್ವಜನಿಕ ಹಣಕ್ಕೆ ಕನ್ನ ಹಾಕಲು ಕಂಡುಕೊಂಡ ವಾಮ ಮಾರ್ಗ ಇದೀಗ ಬಯಲಾಗಿದೆ.
ಸುಮಾರು ರೂ, 75ಲಕ್ಷ ಮೊತ್ತದ ಅನಧಿಕೃತ ಚೆಕ್ಡ್ಯಾಂ ನಿರ್ಮಾಣ, ಎನ್ಆರ್ಇಜಿಯ ಅವ್ಯವಹಾರದಿಂದ ಇತ್ತೀಚೆಗೆ ಜಿಲ್ಲೆಯಾದ್ಯಂತ ಸದ್ದು ಮಾಡಿದ ಮಲ್ಲಾಪುರ ಗ್ರಾಮದಲ್ಲಿ ಮತ್ತೀಗ ಅನರ್ಹ ಕೂಲಿಕಾರ್ಮಿಕರ ಸದ್ದು ಕೇಳಿ ಬರುತ್ತಿದೆ. ತನ್ನತ್ತ ಗಮನ ಸೆಳೆಯುತ್ತಿದೆ.
ಸದಸ್ಯರ ಕೈಚಳಕ
ಕೇಂದ್ರ ಸರ್ಕಾರದ ರಾಷ್ಟ್ರೀಯ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಣ ಲಪಟಾಯಿಸಲು ಮಲ್ಲಾಪುರ ಗ್ರಾಮ ಪಂಚಾಯಿತಿಯ ಕೆಲ ಸದಸ್ಯರ ಕೈ ಚಳಕದಿಂದ ಸ್ವತಃ ಫಲಾನುಭವಿಗಳಿಗೇ ಗೊತ್ತಿಲ್ಲದೆ ಧನಿಕರು ಬಡವರಾಗಿ, ರೈತರು ನಿರ್ಗತಿಕರ ಅವತಾರ ಎತ್ತಿದ್ದಾರೆ.
ಪಂಚಾಯಿತಿ ವ್ಯಾಪ್ತಿಯಲ್ಲಿ 2010-11 ಮತ್ತು 2011-12ನೇ ಸಾಲಿನಲ್ಲಿ ಕೈಗೊಂಡ ಎನ್ಆರ್ಇಜಿಯಲ್ಲಿ ಸುಮಾರು 80 ಲಕ್ಷ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸ್ವತಃ ಗ್ರಾಮಸ್ಥರೇ ಇದೀಗ `ವ್ಯವಸ್ಥೆ~ಯ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ.
ದುಬೈ ಸಿರಿವಂತ
ಕಳೆದ 14 ವರ್ಷದಿಂದ ದೂರದ ದುಬೈನಲ್ಲಿ ಸ್ಥಿರವಾಗಿ ನೆಲೆಸಿರುವ ಮಲ್ಲಾಪುರ ಪಂಚಾಯಿತಿ ವ್ಯಾಪ್ತಿಯ ರಾಂಪುರದ ನಿವಾಸಿ ಸತ್ಯಮಹೇಶ್ವರ ರೆಡ್ಡಿ ಸತ್ಯನಾರಾಯಣ ರೆಡ್ಡಿ ಎಂಬುವವರು ಪಂಚಾಯಿತಿ ಸದಸ್ಯರ ಪವಾಡದಿಂದ ಮಲ್ಲಾಪುರದಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ.
ಅವರಷ್ಟೆ ಅಲ್ಲ ಗೊಬ್ಬರ ಅಂಗಡಿ ಹೊಂದಿದ, ಶ್ರೀಮಂತಿಕೆ, ಜಮೀನ್ದಾರಿ ಕುಟುಂಬ ಹಿನ್ನೆಲೆಯ ಸೋಮರೆಡ್ಡಿ, ನಾರಾಯಣರೆಡ್ಡಿ, ಶ್ರೀನಿವಾಸ ರೆಡ್ಡಿ, ಗೋವಿಂದರೆಡ್ಡಿ, ವಿಠ್ಠಲ, ಮಂಜುನಾಥ, ಕೆ. ಮಲ್ಲಿಕಾರ್ಜುನ, ಕರಿವೆಂಕಾರೆಡ್ಡಿ ಕೂಲಿಕಾರ್ಮಿಕರ ಪಟ್ಟಿಯಲ್ಲಿದ್ದಾರೆ.
ನಿತ್ಯ ಹತ್ತಾರು ಆಳು-ಕಾಳುಗಳಿಂದ ಕೆಲಸ ಮಾಡಿಸುವ ಗಂಗಾರತ್ನಂ, ಸತ್ಯ ವೆಂಕಟೇಶ್ವರ ರೆಡ್ಡಿ, ಸತ್ಯ ಮಹೇಶ್ವರ ರೆಡ್ಡಿ, ಎನ್. ಸೂರ್ಯಕುಮಾರಿ, ಸತ್ಯಾರೆಡ್ಡಿ, ಸತ್ಯ ಸುಭಾಕರ ರೆಡ್ಡಿ, ಪೆದ್ದಾರೆಡ್ಡಿ, ಜಿ. ಸತ್ಯನಾರಾಯಣ ಕೂಲಿಗಳ ಹೆಸರಲ್ಲಿ ಲಕ್ಷಾಂತರ ರೂಪಾಯಿ ಬಾಚಿದ್ದಾರೆ.
ಫಲಾನುಭವಿಗಳೇ ಗೊತ್ತಿಲ್ಲ
ಎನ್ಆರ್ಇಜಿಯಲ್ಲಿ ಕೂಲಿಕಾರ್ಮಿಕರ ಖಾತೆ ತೆಗೆದು ಈ ಫಲಾನಭವಿಗಳ ಗಮನಕ್ಕಿಲ್ಲದಂತೆಯೆ ಬ್ಯಾಂಕ್ ಖಾತೆಯಿಂದ ಒಬ್ಬೊಬ್ಬರ ಹೆಸರಲ್ಲಿ ಕನಿಷ್ಟ ರೂ, 2125ರಿಂದ ಗರಿಷ್ಠ ರೂ, 12125 ಹಣ ಅಕ್ರಮವಾಗಿ ಲೂಟಿ ಮಾಡಲಾಗಿದೆ ಎಂಬ ಆರೊಪ ವ್ಯಕ್ತವಾಗಿದೆ.
ಮೇಲ್ಕಾಣಿಸಿದವರಿಗೆ ತಮ್ಮ ಹೆಸರು ಕೂಲಿಕಾರರ ಪಟ್ಟಿಯಲ್ಲಿ ಇದ್ದುದ್ದೆ ಗೊತ್ತಿಲ್ಲ ಎನ್ನಲಾಗಿದೆ.
`ಪ್ರಜಾವಾಣಿ~ಗೆ ಲಭ್ಯವಾದ ಮಾಹಿತಿ ಪ್ರಕಾರ ಗ್ರಾಮದ ಒಂದು ವಾರ್ಡಿನ ಕೇವಲ 17 ಫಲಾನುಭವಿಗಳ ಹೆಸರಲ್ಲೆ 97,750 ಅಕ್ರಮ ಹಣ ಎತ್ತಲಾಗಿದೆ. ಇನ್ನು ಪಂಚಾಯಿತ ವ್ಯಾಪ್ತಿಯಲ್ಲಿ ನಡೆದ ವ್ಯವಹಾರ ಎಷ್ಟೆಂಬುವುದು ತನಿಖೆಯಿಂದ ಮಾತ್ರ ದೃಢಪಡಬೇಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.