ಶುಕ್ರವಾರ, ಜುಲೈ 30, 2021
20 °C

ದೇವಳ ಭೂಮಿ ಒತ್ತುವರಿ : ಬ್ರಿಟಿಷ್‌ ವರದಿಗೆ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ನಗರಸಭಾ ವ್ಯಾಪ್ತಿಯ ಹಿರೇಜಂತಕಲ್ಲಿನ ಐತಿಹಾಸಿಕ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಳದ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳ ಕೊರತೆ ಏರ್ಪಟ್ಟಿದ್ದು, ಸಮಸ್ಯೆ ಇತ್ಯಾರ್ಥದ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಕೈಚೆಲ್ಲುವ ಹಂತಕ್ಕೆ ಬಂದಿದ್ದಾರೆ.ಇದರಿಂದಾಗಿ ಭೂಮಿ ಒತ್ತುವರಿ ಪ್ರಕರಣ ಮತ್ತೆ ತಿರುವು ಪಡೆದು ಎರಡು ಗುಂಪುಗಳ ಮಧ್ಯದ ವಿವಾದ ಸಂಘರ್ಷದಲ್ಲಿ ಕೊನೆಗೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ. ಈಗಾಗಲೆ ಎರಡು ಕೋಮಿನ ಮಧ್ಯ ಭೂ ಒತ್ತುವರಿ ಪ್ರಕರಣ ಸಾಕಷ್ಟು ಬಿಸಿ ಚರ್ಚೆಗೆ ಕಾರಣವಾಗಿದೆ.ಈ ನಡುವೆ ವಿವಾದದ ಮಧ್ಯೆ ಪ್ರವೇಶಿಸಿದ್ದ ತಹಸೀಲ್ದಾರ ಎಲ್‌. ಭೀಮಾನಾಯ್ಕ್‌ ಎರಡು ದಿನದ ಕಾಲವಕಾಶ ಕೋರಿದ್ದರು. `ಸೂಕ್ತ ದಾಖಲಾತಿಗಳೊಂದಿಗೆ ಭೂಮಿ ಸರ್ವೇ ಮಾಡಿಸಿ, ಒತ್ತುವರಿಯಾದ ಎಲ್ಲ ಸ್ಥಳ ತೆರವು ಮಾಡಿ ದೇವಸ್ಥಾನ ಸಂರಕ್ಷಿಸಲಾಗುವುದು~ ಎಂದು ಭರವಸೆ ನೀಡಿದ್ದರು.ಅಲ್ಲಿಲ್ಲ, ಇಲ್ಲಿಯೂ ಇಲ್ಲ: ವಾಸ್ತವಿಕವಾಗಿ ಹಿರೇಜಂತಕಲ್‌ ನಗರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ದೇವಸ್ಥಾನದ ಸಕಲ ದಾಖಲೆಗಳು ನಗರಸಭೆಯಲ್ಲಿರಬೇಕು. ಆದರೆ 1954ರಿಂದ ಇತ್ತೀಚಿನ ಯಾವ ದಾಖಲೆಗಳು ನಗರಸಭೆ ಸರಿಯಾಗಿ ನಿರ್ವಹಿಸಿಲ್ಲದಿರುವುದು ಸಮಸ್ಯೆಗೆ ಕಾರಣ ಎಂದು ಹೇಳಲಾಗಿದೆ.ತನ್ನ ವ್ಯಾಪ್ತಿಗೆ ಸಂಂಧಿಸಿದ್ದಲ್ಲ ಎಂದು ನಗರಸಭೆ ಕಂದಾಯ ಇಲಾಖೆಗೆ ಹಿಂಬರ ನೀಡಿದೆ. ಕಂದಾಯ ಇಲಾಖೆ ತನ್ನ ಕಚೇರಿಯಲ್ಲಿ ಎರಡು ದಿನಕಾಲ ಜಾಲಾಡಿದರೂ ದೇವಸ್ಥಾನದ ಭೂಮಿಗೆ ಸಂಬಂಧಿಸಿದ ಯಾವುದೆ ಸೂಕ್ತ ದಾಖಲಾತಿಗಳು ಲಭ್ಯವಾಗಿಲ್ಲ.ಪ್ರಾಚ್ಯವಸ್ತು ಇಲಾಖೆಗೆ: ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಳದ ಆಸ್ತಿ ಸಂರಕ್ಷಿಸುವ ಜವಾಬ್ದಾರಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರೂ ಆಗಿರುವ ತಹಸೀಲ್ದಾರ ಅವರಿಗೆ ಸೇರಿದೆ.ಕಂದಾಯ ಮತ್ತು ನಗರಸಭೆಯಲ್ಲಿ ಸೂಕ್ತ ಮಾಹಿತಿ ಲಭ್ಯವಿಲ್ಲದ್ದರಿಂದ ಅಧಿಕಾರಿ ಸಂದಿಗ್ಧತೆಗೆ ಸಿಲುಕಿದ್ದಾರೆ.ದಾರಿ ತೋರಿಸಿ ಎಂದು ತಹಸೀಲ್ದಾರ, ಪ್ರಾಚ್ಯವಸ್ತು ಇಲಾಖೆಗೆ ಪತ್ರ ಬರೆದಿದ್ದಾರೆ. ಅದರೆ ಕೇಂದ್ರ ಸರ್ಕಾರದ 1954ರ ಕಾಯ್ದೆಯಡಿ ಸಂರಕ್ಷಿತ ಸ್ಮಾರಕ ಪಟ್ಟಿಯಲ್ಲಿ ದೇವಸ್ಥಾನ ಬಾರದ್ದರಿಂದ ಮಾಹಿತಿ ಅಲಭ್ಯ ಎಂದು ಪ್ರಾಚ್ಯವಸ್ತು ಸ್ಪಷ್ಟಪಡಿಸಿದೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.