ಶನಿವಾರ, ಏಪ್ರಿಲ್ 17, 2021
32 °C

ದೇವೇಗೌಡರ ಸತ್ಯಕ್ಕೆ ದೂರವಾದ ಮಾತು: ಕಾಂಗ್ರೆಸ್ ಮುಸ್ಲಿಂ ಮುಖಂಡರ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ನಡೆದ `ಮುಸ್ಲಿಂ ಸಮಾವೇಶ~ದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಸತ್ಯಕ್ಕೆ ದೂರವಾದ ಮಾತು ಆಡಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು, ರಾಜ್ಯದಲ್ಲಿ ಮುಸ್ಲಿಂ ಸಮುದಾಯದವರಿಗೆ ಶೇಕಡಾ 4ರಷ್ಟು ಮೀಸಲಾತಿ ಕಲ್ಪಿಸಿದ್ದು ಎಂ. ವೀರಪ್ಪ ಮೊಯಿಲಿ ನೇತೃತ್ವದ ಸರ್ಕಾರ ಎಂದು ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಶಾಸಕರಾದ ಎನ್.ಎ. ಹ್ಯಾರಿಸ್, ಆರ್. ರೋಷನ್ ಬೇಗ್ ಮತ್ತು ನಜೀರ್ ಅಹಮದ್ ಅವರು, `ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿ ಮೊಯಿಲಿ ಸರ್ಕಾರವೇ ಈ ಆದೇಶ ಹೊರಡಿಸಿದೆ~ ಎಂದರು.

ರಾಜ್ಯದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ರಚನೆಯಾಗಿದ್ದು 1980ರ ದಶಕದಲ್ಲೇ ಹೊರತು ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಲ್ಲ ಎಂದೂ ನಜೀರ್ ಹೇಳಿದರು.

`ಮುಸ್ಲಿಂ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡರೆಲ್ಲ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಅವರು ಸೋಲುಂಡ ಕುರಿತು ಪ್ರಸ್ತಾಪ ಮಾಡಿದರು. ವಿಧಾನಸಭೆಯಲ್ಲಿ 26 ಸದಸ್ಯರನ್ನು ಹೊಂದಿರುವ ಜೆಡಿಎಸ್ ತನ್ನ ಹೆಚ್ಚುವರಿ ಮತಗಳನ್ನು ಇಕ್ಬಾಲ್ ಅವರಿಗೆ ನೀಡುವ ಮೂಲಕ ಅವರ ಗೆಲುವಿಗೆ ಸಹಕರಿಸಬಹುದಿತ್ತು~ ಎಂದರು.

ರಾಮನಗರ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸುವ ಬಗ್ಗೆ ಸೈಯದ್ ಮುದೀರ್ ಆಗಾ ಅವರು ಕಾಂಗ್ರೆಸ್ ಜೊತೆ ಮಾತುಕತೆ ನಡೆಸಿದ್ದರು. ಇದನ್ನು ತಿಳಿದ ಜೆಡಿಎಸ್, ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಿದೆ ಎಂದು ಲೇವಡಿ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಾಲೇಜೊಂದರಲ್ಲಿ ಮುಸ್ಲಿಂ ಯುವತಿಯರಿಗೆ ಬುರ್ಕಾ ಧರಿಸಿ ತರಗತಿಯಲ್ಲಿ ಪಾಲ್ಗೊಳ್ಳಲು ಆಡಳಿತ ಮಂಡಳಿ ಅವಕಾಶ ನೀಡಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಗಮನಕ್ಕೆ ತರಲಾಗುವುದು ಎಂದು ರೋಷನ್ ಬೇಗ್ ತಿಳಿಸಿದರು.

ಜಾತ್ಯತೀತ ತತ್ವಗಳ ಕುರಿತು ಮಾತನಾಡುವ ಜೆಡಿಎಸ್ ಮುಖಂಡರು, ಬಜರಂಗದಳದಲ್ಲಿ ಸಕ್ರಿಯರಾಗಿದ್ದ ಮಹೇಂದ್ರ ಕುಮಾರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು ಏಕೆ ಎಂದು ಹ್ಯಾರಿಸ್ ಪ್ರಶ್ನಿಸಿದರು.

ಎಚ್‌ಡಿಕೆ ಹೊಣೆ: `ಈಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮ್ಮದ್ ಸರಡಗಿ ಅವರ ಸೋಲಿಗೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕ ಜಮೀರ್ ಅಹಮದ್ ನೇರ ಹೊಣೆ~ ಎಂದು ಜೆಡಿಎಸ್ ಪಕ್ಷಕ್ಕೆ ಭಾನುವಾರ ರಾಜೀನಾಮೆ ನೀಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಅಜೀಂ ಆರೋಪಿಸಿದರು.

`ಕುಮಾರಸ್ವಾಮಿ, ಜಮೀರ್ ಅಡ್ಡ ಮತದಾನ ನಡೆಸುವಂತೆ ತೀವ್ರವಾದ ಪೈಪೋಟಿ ನಡೆಸಿದರು. ಇದರಿಂದ ಪಕ್ಷೇತರ ಅಭ್ಯರ್ಥಿಗಳಿಗೆ ಲಾಭವಾಗಿದೆ. ಆದರೆ ಅಭ್ಯರ್ಥಿ ಸೋಲಿಗೆ ಕಾಂಗ್ರೆಸ್ಸೇ ಕಾರಣವೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ~ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.