ದೇಸಿ ಕ್ರಿಕೆಟ್‌ಗೂ ದಾದಾ ವಿದಾಯ

7

ದೇಸಿ ಕ್ರಿಕೆಟ್‌ಗೂ ದಾದಾ ವಿದಾಯ

Published:
Updated:
ದೇಸಿ ಕ್ರಿಕೆಟ್‌ಗೂ ದಾದಾ ವಿದಾಯ

ಕೋಲ್ಕತ್ತ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಾಲ್ಕನೇ ಅವತರಣಿಕೆಯಲ್ಲಿಯೂ ಆಡಬೇಕೆನ್ನುವ ಕನಸು ನುಚ್ಚುನೂರಾದ ನಂತರ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಎಲ್ಲ ಕ್ರಿಕೆಟ್ ಪ್ರಕಾರದಿಂದಲೂ ನಿವೃತ್ತಿ ಹೊಂದುವ ನಿರ್ಧಾರ ಪ್ರಕಟಿಸಿದ್ದಾರೆ.ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಐಪಿಎಲ್‌ನಲ್ಲಿ ಆಡುವುದನ್ನು ಮುಂದುವರಿಸಿದ್ದ ‘ದಾದಾ’ ತಮ್ಮ ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳಲು ರಣಜಿ ಕ್ರಿಕೆಟ್‌ನಲ್ಲಿಯೂ ಆಡುತ್ತಾ ಬಂದಿದ್ದರು. ಆದರೆ ಇನ್ನುಮುಂದೆ ಯಾವುದೇ ಪ್ರಕಾರದ ದೇಸಿ ಕ್ರಿಕೆಟ್‌ನಲ್ಲಿಯೂ ಆಡುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ.ತಾವು ದೇಸಿ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದಾಗಿ ಗಂಗೂಲಿ ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ‘ಐಪಿಎಲ್‌ನಲ್ಲಿ ಆಡುತ್ತೇನೆ ಎನ್ನುವ ನಿರೀಕ್ಷೆಗಳು ಹುಸಿಯಾದವು. ಆದ್ದರಿಂದ ದೇಶದಲ್ಲಿ ನಡೆಯುವ ಬಾಕಿ ಟೂರ್ನಿಗಳಲ್ಲಿ ಆಡುವುದೂ ಅರ್ಥವಿಲ್ಲ’ ಎಂದು ಅವರು ಹೇಳಿದರು.‘ಐಪಿಎಲ್‌ನಲ್ಲಿ ಆಡುವುದಕ್ಕೆ ಅಗತ್ಯವಿರುವ ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಂಡು ಹೋಗುವುದಕ್ಕಾಗಿಯೇ ನಾನು ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡುತ್ತಾ ಬಂದಿದ್ದೆ. ಆದರೆ ಈಗ ಅದೂ ಅಗತ್ಯವಿಲ್ಲ’ ಎಂದು ವಿವರಿಸಿದರು.ಸೌರವ್ 2008ರ ಅಕ್ಟೋಬರ್ 7ರಂದೇ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದರು. ಆದರೆ ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಪಶ್ಚಿಮ ಬಂಗಾಳ ರಣಜಿ ಕ್ರಿಕೆಟ್ ತಂಡದ ಪರವಾಗಿ ಆಡುವುದನ್ನು ಮುಂದುವರಿಸಿದ್ದರು. ಐಪಿಎಲ್ ನಾಲ್ಕನೇ ಅವತರಣಿಕೆಯ ಆಟಗಾರರ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿಗಳು ಗಂಗೂಲಿಯನ್ನು ಕೊಳ್ಳಲಿಲ್ಲ. ಆನಂತರ ಕೊಚ್ಚಿ ತಂಡದ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಾರೆನ್ನುವ ನಿರೀಕ್ಷೆಯೂ ಹುಸಿ ಆಯಿತು. ಈಗ ಯಾವುದೇ ಪ್ರಕಾರದ ಕ್ರಿಕೆಟ್ ಆಡುವುದೇ ಬೇಡ ಎನ್ನುವ ತಿರ್ಮಾನಕ್ಕೆ ಬಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry