ಮಂಗಳವಾರ, ಮೇ 17, 2022
24 °C

ದೋಷಪೂರಿತ ವ್ಯವಸ್ಥೆಯಿಂದ ತಾರತಮ್ಯ ಸೃಷ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೋಷಪೂರಿತ ವ್ಯವಸ್ಥೆಯಿಂದ ತಾರತಮ್ಯ ಸೃಷ್ಟಿ

ಶಿವಮೊಗ್ಗ: ದೋಷಪೂರಿತ ವ್ಯವಸ್ಥೆಯಿಂದ ಸಮಾಜದಲ್ಲಿ ಲಿಂಗಭೇದ, ಜಾತಿ-ಮತ, ತಾರತಮ್ಯಗಳು ಸೃಷ್ಟಿಯಾಗಿವೆ. ಅಲ್ಲದೇ, ತಿಮಿಂಗಲುಗಳಂತೆ ಬೆಳೆದುನಿಂತಿರುವ ಕೆಲವರಿಂದ ನಿರ್ಗತಿಕರನ್ನು ಬಗ್ಗುಬಡಿಯುವ ಹಾಗೂ ಬಡವರು ಅನ್ನಕ್ಕಾಗಿ ಹಪಹಪಿಸುವ ಸ್ಥಿತಿ ಎದುರಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಎಸ್.ಆರ್. ನಾಯಕ್ ತೀಕ್ಷ್ಣವಾಗಿ ಹೇಳಿದರು.ಶಂಕರಘಟ್ಟದ ಕುವೆಂಪು ವಿವಿ ಮತ್ತು ರಾಜ್ಯ ಮಾನವ ಹಕ್ಕು ಆಯೋಗದ ಸಂಯುಕ್ತಾಶ್ರಯದಲ್ಲಿ ವಿವಿ ಆವರಣದಲ್ಲಿ ಸೋಮವಾರ ‘ಮಾನವ ಹಕ್ಕು ಮತ್ತು ಅವುಗಳ ರಕ್ಷಣೆ’ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯ ನಂತರ ಹಲವು ದಶಕಗಳು ಉರುಳಿದರೂ ಬಹುಸಂಖ್ಯಾತರಿಗೆ ತೀರ ಅಗತ್ಯವಾದ ಆಶ್ರಯ, ಶುದ್ಧ ಕುಡಿಯುವ ನೀರು, ಹಸಿವಿನಿಂದ ನರುಳುತ್ತಿರುವವರಿಗೆ ಪೌಷ್ಟಿಕ ಆಹಾರ, ಶ್ರಮಿಕರಿಗೆ ಕೆಲಸ ಹಾಗೂ ಸಂಘಟಿತ ಸಮಾಜದಲ್ಲಿ ಬದುಕಲು ರಕ್ಷಣೆ ನೀಡಲು ಸಾಧ್ಯವಾಗದಿರುವುದು ಬೇಸರದ ಸಂಗತಿ ಎಂದು ಹೇಳಿದರು.ಇನ್ನೂ ಜೀವಂತವಾಗಿರುವ ಅಸ್ಪೃಶ್ಯತೆ, ಮಲ ಹೊರುವ ಪದ್ಧತಿ, ಮಿತಿಮೀರಿದ ಭ್ರಷ್ಟಾಚಾರ ಮುಂತಾದ ಕಳಂಕಗಳಿಂದ ಹೊರಬರಲು ಹಾಗೂ ಮಾನವ ಹಕ್ಕುಗಳ ಪ್ರತಿಷ್ಠಾಪನೆಗಾಗಿ ಮಹಾಸಂಗ್ರಾಮ ನಡೆದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.ಸಹಸ್ರಾರು ವರ್ಷಗಳ ಹಿಂದೆ ಮನುಕುಲಕ್ಕೆ ಮಾನವೀಯತೆಯ ಸಂದೇಶ ನೀಡಿದ ಭಾರತದಲ್ಲಿ ಮಾನವೀಯ ತತ್ವ-ಸಿದ್ಧಾಂತಗಳನ್ನು ಗಾಳಿಗೆ ತೂರಿ ಅಮಾನವೀಯವಾಗಿ ವರ್ತಿಸುತ್ತಿರುವುದು ಸಾಮಾಜಿಕ ದುರಂತ. ಅನೇಕ ಕುಟುಂಬಗಳ ಮಕ್ಕಳ ಬಾಲ್ಯವನ್ನು ಕಸಿದುಕೊಂಡು, ಕನಿಷ್ಠವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜದಲ್ಲಿ ಮುಖ್ಯವಾಹಿನಿಯಿಂದ ಸಾಕಷ್ಟು ಹಿಂದುಳಿದಿರುವ ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ವಿಶೇಷವಾಗಿ ಮಹಿಳೆಯರ ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಅಗತ್ಯವಾದ ಶಿಕ್ಷಣ ಮತ್ತು ತರಬೇತಿ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.ಅಲ್ಪ ಮಾನವನನ್ನು ವಿಶ್ವ ಮಾನವನನ್ನಾಗಿಸುವ ಹೊಣೆಗಾರಿಕೆ ಎಲ್ಲರದ್ದಾಗಿದೆ ಎಂದ ಅವರು, ಉಳ್ಳವರು ಮತ್ತು ಉಳ್ಳದವರ ನಡುವೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅಂತರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು ಹಾಗೂ ದಾರ್ಶನಿಕರು ಮಾನವೀಯ ನೆಲೆಯಲ್ಲಿ ನೀಡಿದ ಮಾರ್ಗದರ್ಶನವನ್ನು ಅನುಸರಿಸುವ ವಾತಾವರಣ ನಿರ್ಮಾಣವಾಗಬೇಕಾಗಿದೆ ಎಂದರು.ಕುವೆಂಪು ವಿವಿ ಕುಲಪತಿ ಪ್ರೊ.ಎಸ್.ಎ. ಬಾರಿ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಎಂ. ಕೃಷ್ಣಪ್ಪ ಉಪಸ್ಥಿತರಿದ್ದರು.ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸಾಯಿರಾಮ್ ಭಟ್, ಪ್ರೊ.ಟಿ.ಆರ್. ಸುಬ್ರಮಣ್ಯ, ಪ್ರೊ.ಜೆ.ಎಸ್. ಸದಾನಂದ ಪಾಲ್ಗೊಂಡಿದ್ದರು. ಪ್ರೊ.ಜೆ. ಮಾದೇಗೌಡ ಸ್ವಾಗತಿಸಿದರು. ಯೋಗೇಂದ್ರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.