ಶುಕ್ರವಾರ, ಮೇ 20, 2022
21 °C

ಧರ್ಮಾದಾಯ ದತ್ತಿ ಮಸೂದೆ: ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಮಸೂದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಯು, ನ್ಯಾ.ಎಂ. ರಾಮಾ ಜೋಯಿಸ್ ಸಮಿತಿ ನೀಡಿದ್ದ ವರದಿ ಮತ್ತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮುಚ್ಚಳಿಕೆಗೆ ಅನುಗುಣವಾಗಿ ಇಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷಗಳು ಈ ಕುರಿತು ಹೆಚ್ಚಿನ ಚರ್ಚೆಗೆ ಅವಕಾಶ ಕೋರಿದವು.ಪರಿಷತ್ತಿನಲ್ಲಿ ಮಂಗಳವಾರ ಮಧ್ಯಾಹ್ನ ತಿದ್ದುಪಡಿ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿದ ಜೆಡಿಎಸ್‌ನ ಎಂ.ಸಿ. ನಾಣಯ್ಯ, ‘ರಾಮಾ ಜೋಯಿಸ್ ನೇತೃತ್ವದ ಉನ್ನತ ಮಟ್ಟದ ಸಮಿತಿ ನೀಡಿದ ವರದಿ, ಸುಪ್ರೀಂ ಕೋರ್ಟ್‌ನ ಆದೇಶ ಮತ್ತು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಬರೆದುಕೊಟ್ಟ ಮುಚ್ಚಳಿಕೆಯಲ್ಲಿ ಹೇಳಿದಂತೆ ಈ ತಿದ್ದುಪಡಿ ಇಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.‘ಮಠಗಳನ್ನು ಹೊರಗಿಡಲಾಗಿದೆ’: ಎಲ್ಲ ಧಾರ್ಮಿಕ ಸಂಸ್ಥೆಗಳು ಈ ಮಸೂದೆಯ ವ್ಯಾಪ್ತಿಯಲ್ಲಿ ಬರುವಂತೆ ತಿದ್ದುಪಡಿ ತರಲಾಗುವುದು ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿದೆ, ಆದರೆ ಇಲ್ಲಿ ಮಠಗಳು ಮತ್ತು ಮಠಗಳಿಗೆ ಸೇರಿದ ದೇವಸ್ಥಾನಗಳನ್ನು ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಜೆಡಿಎಸ್‌ನ ವೈ.ಎಸ್.ವಿ. ದತ್ತ ಆಕ್ಷೇಪ ಎತ್ತಿದರು.ದತ್ತ ಬೆಂಬಲಕ್ಕೆ ನಿಂತ ನಾಣಯ್ಯ, ‘ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ, ಕೋರ್ಟ್‌ಗೆ ಬರೆದುಕೊಟ್ಟ ಮುಚ್ಚಳಿಕೆ ಒಂದು ರೀತಿ, ನೀವು ತಂದಿರುವ ತಿದ್ದುಪಡಿ ಇನ್ನೊಂದು ರೀತಿ ಇರುವುದು ಸರಿಯಲ್ಲ. ಕೋರ್ಟ್ ನಿರ್ದೇಶನದ ಉಲ್ಲಂಘನೆ ಆಗದಂತೆ ತಿದ್ದುಪಡಿ ತರಬೇಕು. ಹಾಗಾಗಿ ತಿದ್ದುಪಡಿಯನ್ನು ಇವತ್ತು ಮತಕ್ಕೆ ಹಾಕುವುದು ಬೇಡ. ತಿದ್ದುಪಡಿ ಬಗ್ಗೆ ವಿವರವಾಗಿ ಚರ್ಚಿಸೋಣ, ಸೋಮವಾರ ಮತಕ್ಕೆ ಹಾಕೋಣ’ ಎಂದು ಒತ್ತಾಯಿಸಿದರು.ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ಎಸ್.ಆರ್. ಪಾಟೀಲ್, ‘ಸುಪ್ರೀಂ ಕೋರ್ಟ್‌ಗೆ ಬರೆದುಕೊಟ್ಟ ಮುಚ್ಚಳಿಕೆಗೆ ವಿರುದ್ಧವಾಗಿ ತಿದ್ದುಪಡಿ ತರುವುದು ನ್ಯಾಯಾಂಗ ನಿಂದನೆ ಆಗುತ್ತದೆ’ ಎಂದು ವಾದಿಸಿದರು. ವಿರೋಧ ಪಕ್ಷಗಳ ಸದಸ್ಯರ ಆಕ್ಷೇಪಗಳಿಗೆ ಉತ್ತರ ನೀಡಿದ ಸಭಾನಾಯಕ ಡಾ.ವಿ.ಎಸ್. ಆಚಾರ್ಯ, ‘ಮಠಗಳು ತಮ್ಮ ಆದಾಯದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುತ್ತವೆ. ಹಾಗಾಗಿ ಮಠಗಳನ್ನು ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ’ ಎಂದರು.‘ಆರಂಭದಲ್ಲಿ ಸಿಖ್, ಬೌದ್ಧ ಮತ್ತು ಜೈನ ಧಾರ್ಮಿಕ ಸಂಸ್ಥೆಗಳನ್ನೂ ಮಸೂದೆಯ ವ್ಯಾಪ್ತಿಗೆ ತರಲಾಗಿತ್ತು. ಆದರೆ ಈ ಸಮುದಾಯಗಳ ಮುಖಂಡರು ತಮಗೆ ಪ್ರತ್ಯೇಕ ಕಾನೂನು ತರಬೇಕು ಎಂದು ಒತ್ತಾಯ ಮಾಡಿದ ಕಾರಣ ಅವುಗಳನ್ನು ಮಸೂದೆಯಿಂದ ಹೊರಗಿಡಲಾಯಿತು’ ಎಂದು ಉತ್ತರಿಸಿದರು.‘ಪ್ರತಿಪಕ್ಷಗಳ ಆಗ್ರಹದಂತೆ ಈ ಕುರಿತು ಚರ್ಚೆ ನಡೆಸೋಣ’ ಎಂದ ಆಚಾರ್ಯ, ‘ರಾಮಾ ಜೋಯಿಸ್ ಸಮಿತಿ ನೀಡಿದ್ದ ಶಿಫಾರಸುಗಳಲ್ಲಿ ಸಾಧ್ಯವಿರುವಷ್ಟನ್ನು ಮಸೂದೆಯಲ್ಲಿ ಸೇರಿಸಿದ್ದೇವೆ. ತಿದ್ದುಪಡಿಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಶಕ್ತಿ ಸರ್ಕಾರಕ್ಕಿದೆ’ ಎಂದರು. ಆದರೆ ಆಚಾರ್ಯ ಉತ್ತರಕ್ಕೆ ತೃಪ್ತರಾಗದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.