ಶನಿವಾರ, ಮೇ 15, 2021
25 °C
ಅಭಿವೃದ್ಧಿ ಅನುದಾನ ವಿನಿಯೋಗಿಸಲು ಜಿಲ್ಲಾ ಪಂಚಾಯ್ತಿಗಳಿಗೆ ಮಾರ್ಗಸೂಚಿ

ಧಾರ್ಮಿಕ ಕ್ಷೇತ್ರಗಳಿಗೆ ದೇಣಿಗೆ ನಿರ್ಬಂಧ

ಎಂ. ಮಹೇಶ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿಗಳಿಗೆ ವಾರ್ಷಿಕ ದೊರೆಯುವ ಅಭಿವೃದ್ಧಿ ಅನುದಾನ ಬಳಕೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ.ಪ್ರಸಕ್ತ ಸಾಲಿನಲ್ಲಿ ಎಲ್ಲ ಜಿಲ್ಲಾ ಪಂಚಾಯ್ತಿಗಳಿಗೆ ರೂ 2 ಕೋಟಿ ಹಾಗೂ ತಾಲ್ಲೂಕು ಪಂಚಾಯ್ತಿಗಳಿಗೆ ರೂ 1 ಕೋಟಿಯನ್ನು ಅಭಿವೃದ್ಧಿ ಅನುದಾನವಾಗಿ ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ ಕೈಗೊಳ್ಳುವ ಕಾಮಗಾರಿಗಳು ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿಯ ಅಭಿವೃದ್ಧಿಯ ಭಾಗವಾಗಿರಬೇಕು, ಪ್ರತ್ಯೇಕವಾಗಿ ಅನುದಾನದ ಕಂತುವಾರು ಕ್ರಿಯಾಯೋಜನೆ ತಯಾರಿಸುವುದನ್ನು ನಿರ್ಬಂಧಿಸಲಾಗಿದೆ.ವಿರುದ್ಧವಿದ್ದಲ್ಲಿ ತಾನಾಗಿಯೇ ರದ್ದು : ಅನುದಾನದಲ್ಲಿ, ಶೇ 90ರಷ್ಟು ದೀರ್ಘಕಾಲ ಬಾಳಿಕೆ ಬರುವ ಮೂಲಸೌಕರ್ಯ ಕಲ್ಪಿಸಲು ಹಾಗೂ ಶೇ 10ರಷ್ಟನ್ನು ಇತರ ಅಭಿವೃದ್ಧಿ ಯೋಜನೆಗೆ ಕಾಯ್ದಿರಿಸಬೇಕು (ಎಲ್ಲಾ ಖರೀದಿ ಪ್ರಕ್ರಿಯೆ ಪ್ರತಿಬಂಧಿಸಲಾಗಿದೆ). ಗ್ರಾಮೀಣ ಜನರ ಜೀವನಮಟ್ಟ ಹೆಚ್ಚಿಸಲು ಅನುಕೂಲ ಆಗುವಂಥ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಪೌಷ್ಟಿಕಾಂಶ ಕಲ್ಪಿಸುವ ಕಾರ್ಯಕ್ರಮ ಒಳಗೊಂಡಂತೆ ಅಭಿವೃದ್ಧಿ ಯೋಜನೆ ರೂಪಿಸಬೇಕು.ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕಾಗಿ ಕನಿಷ್ಠ ಶೇ 25ರಷ್ಟನ್ನು ಹಾಗೂ ಅಂಗವಿಕಲರಿಗೆ ಶೇ 3ರಷ್ಟು ಅನುದಾನವನ್ನು ಕಾಯ್ದಿರಿಸುವುದು ಕಡ್ಡಾಯ. ವಾರ್ಡ್ ಸಭೆ ಮತ್ತು ಗ್ರಾಮಸಭೆ ಶಿಫಾರಸುಗಳ ಅನ್ವಯ ಅಭಿವೃದ್ಧಿ ಯೋಜನೆ ತಯಾರಿಸಬೇಕು. ಇದಕ್ಕೆ ವಿರುದ್ಧವಾಗಿದ್ದಲ್ಲಿ ಅಂಥ ಯೋಜನೆಗಳು ತಾನಾಗಿಯೇ ರದ್ದಾಗುತ್ತವೆ. ಸಾಮಾನ್ಯಸಭೆಯಲ್ಲಿ ಯೋಜನೆಗಳ ಅನುಷ್ಠಾನದ ಬಗ್ಗೆ ಕಡ್ಡಾಯವಾಗಿ ಪರಾಮರ್ಶಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ನಿರ್ದೇಶಕ ಪಿ.ಕುಮಾರ್ ಈಚೆಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.ಏನೇನು ಮಾಡಬಾರದು?: ಅಭಿವೃದ್ಧಿ ಅನುದಾನದಲ್ಲಿ, ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಅಥವಾ ವೈಯಕ್ತಿಕ ಜ್ಞಾಪಕಾರ್ಥ ಪ್ರತಿಮೆಗಳನ್ನು ಸ್ಥಾಪಿಸುವುದು, ಆಸ್ತಿ ಗಳಿಕೆ ಅಥವಾ ಕಟ್ಟಡ ನಿರ್ಮಿಸುವುದನ್ನು ನಿಷೇಧಿಸಲಾಗಿದೆ.ಧಾರ್ಮಿಕ ಕ್ಷೇತ್ರಗಳಿಗೆ ದೇಣಿಗೆ ನೀಡುವಂತಿಲ್ಲ ಹಾಗೂ ಆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಟ್ಟಡ ಅಥವಾ ಇತರ ಕಾಮಗಾರಿ ತೆಗೆದುಕೊಳ್ಳುವಂತೆಯೂ ಇಲ್ಲ. ಪಂಚಾಯಿತಿಗಳಿಗೆ ಭೂಮಿ ಸ್ವಾಧೀನಗೊಳಿಸುವುದನ್ನು ಅಥವಾ ಸ್ವಾಧೀನಗೊಳಿಸಲಿರುವ ಭೂಮಿಗೆ ಪರಿಹಾರ ನೀಡಲು ಬಳಸುವಂತಿಲ್ಲ. ವೈಯಕ್ತಿಕ ಫಲಾನುಭವಿಗಳು ಅಥವಾ ಖಾಸಗಿ ಸಂಸ್ಥೆಗಳಿಗೆ ಸಹಾಯ ಧನ, ಸಾಲ ಕೊಡುವಂತಿಲ್ಲ. ಕಚೇರಿಯ ಆವರ್ತಕ ವೆಚ್ಚ, ಸಿಬ್ಬಂದಿ ವೇತನಕ್ಕೆ ಬಳಸಬಾರದು. ಕಚೇರಿಗೆ ಅಗತ್ಯವಿರುವ ಸಾಧನ ಖರೀದಿಸುವಂತಿಲ್ಲ.ಯಾವುದೇ ಕಾರಣಕ್ಕೂ, ಈ ಅನುದಾನದಲ್ಲಿ ನೀರಿನ ಯೋಜನೆಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ಕಾಮಗಾರಿ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ (ಕಾರಣ- ಇದಕ್ಕೆ ಪ್ರತ್ಯೇಕ ಅನುದಾನ ದೊರೆಯುವುದರಿಂದ). ಚುನಾಯಿತ ಪ್ರತಿನಿಧಿಗಳಿಗೆ ಗೌರವಧನ ನೀಡಲು ಬಳಸಬಾರದು.ಯಾವುದೇ ರೀತಿಯ ಪ್ರವಾಸ ಕಾರ್ಯಕ್ರಮಕ್ಕೆ ವೆಚ್ಚ ಮಾಡುವಂತಿಲ್ಲ. ಜಿಲ್ಲಾ ಪಂಚಾ ಯ್ತಿ, ತಾಲ್ಲೂಕು ಪಂಚಾಯ್ತಿ ಅಥವಾ ಗ್ರಾಮ ಪಂಚಾಯ್ತಿಯ ಯಾವುದೇ ಕಚೇರಿ, ಕಟ್ಟಡಗಳ ದುರಸ್ತಿಗೆ ವಿನಿಯೋಗಿಸಬಾರದು. ಜಿಲ್ಲಾ ಪಂಚಾಯ್ತಿ ಸದಸ್ಯರ ಕ್ಷೇತ್ರವಾರು ಅನುದಾನ ಹಂಚಿಕೆ ಮಾಡಬಾರದು. ಯಾವುದೇ `ತಂತ್ರಾಂಶ' ತಯಾರಿಸಲು ಈ ಹಣ ಬಳಕೆ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.`ಹಿಂದಿನ ಸಾಲಿನಲ್ಲಿ ಅಭಿವೃದ್ಧಿ ಅನುದಾನವನ್ನು ಇತರ ಕೆಲಸಗಳಿಗೆ ಬಳಸಲಾಗುತ್ತಿತ್ತು. ಮಠಗಳಿಗೆ ಕೊಟ್ಟ ಉದಾಹರಣೆಯೂ ಇತ್ತು. ಈ ಸಾಲಿನಲ್ಲಿ, ಇದಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮಾತ್ರ ಬಳಕೆ ಮಾಡಬೇಕಿದೆ. ಹೊಸ ಮಾರ್ಗಸೂಚಿಯಂತೆ ಯೋಜನೆ ಸಿದ್ಧಗೊಳಿಸಲು ಕ್ರಮ ಕೈಗೊಳ್ಳಲಾಗಿದೆ' ಎಂದು ಜಿಲ್ಲಾ ಪಂಚಾಯ್ತಿ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.