ಭಾನುವಾರ, ಜೂನ್ 13, 2021
20 °C
ಚುನಾವಣಾ ಸ್ವಾರಸ್ಯ

ನಂಗೂ ನಾಮಪತ್ರ ಬೇಕು...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೋಕಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾದ ದಿನ ಬುಧವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಗೆ ಬಂದ ಸಣಕಲ ವ್ಯಕ್ತಿಯೊಬ್ಬರು ‘ನಂಗೆ ನಾಮಪತ್ರ ಬೇಕು. ನಾನೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸ್ತೀನಿ’ ಎಂದಾಗ ನಾಮಪತ್ರಗಳ ನಿರ್ವಹಣೆಗೆಂದೇ ನಿಯೋಜಿತರಾದ ಸಿಬ್ಬಂದಿ ಅಚ್ಚರಿಪಟ್ಟರು.ರಾಜಕಾರಣಿಗಳಿಗಿರುವ ಯಾವುದೇ ಲಕ್ಷಣಗಳಿಲ್ಲದ ಮಾಮೂಲಿ ವ್ಯಕ್ತಿಯಾದ ಇವರು ನಾಮಪತ್ರ ಸಲ್ಲಿಸುತ್ತಾರೆಯೇ ಎಂದು ತಮ್ಮಲ್ಲೇ ಸಿಬ್ಬಂದಿ ಪ್ರಶ್ನೆ ಕೇಳಿಕೊಂಡ ಸಿಬ್ಬಂದಿ ಅವರನ್ನು ಜಿಲ್ಲಾಧಿಕಾರಿ ಬಳಿಗೆ ಕಳಿಸಿದರು. ಅಲ್ಲಿಗೆ ತೆರಳಿದ ವ್ಯಕ್ತಿ ವಿನೀತರಾಗಿ ನಾನೂ ಸ್ಪರ್ಧಿಸಬೇಕು ಸಾರ್. ನಾಮಪತ್ರದ ಅರ್ಜಿ ಕೊಡಿ ಎಂದು ಕೋರಿದರು. ತಮ್ಮ ಕೊಠಡಿಯಿಂದ ಹೊರ ಬಂದ ಜಿಲ್ಲಾಧಿಕಾರಿ ವ್ಯಕ್ತಿಯ ಹೆಸರನ್ನು ಕೇಳಿ ಅರ್ಜಿಯೊಂದನ್ನು ಕೊಟ್ಟು ತೆರಳಿದರು.ಅರ್ಜಿ ಪಡೆದ ಬಳಿಕ ವ್ಯಕ್ತಿಯು ತನ್ನ ಪುರ್ವಾಪರವನ್ನು ಹೇಳಲಾರಂಭಿಸಿದರು. ವಿವರಗಳನ್ನು ಕೇಳಿದ ಸಿಬ್ಬಂದಿ ಮತ್ತು ಕೆಲವು ಪತ್ರಕರ್ತರು ಮೂಗಿನ ಮೇಲೆ ಬೆರಳಿಟ್ಟುಕೊಂಡರು.ಮಾಲೂರು ತಾಲ್ಲೂಕಿನ ಸಂತೇಹಳ್ಳಿಯ ಜಿ.ನಾರಾಯಣ ಈಗಾಗಲೇ ರಾಷ್ಟ್ರಪತಿಗಳ ಸ್ಥಾನಕ್ಕೂ ನಾಮಪತ್ರ ಸಲ್ಲಿಸಿದ್ದವರು. ‘ಯಾವೊಬ್ಬ ಸಂಸದರೂ ಶಿಫಾರಸು ಮಾಡದೇ ಹೋದ ಪರಿಣಾಮ ನನ್ನ ನಾಮಪತ್ರ ತಿರಸ್ಕೃತಗೊಂಡಿತು. 2008ರಲ್ಲಿ ನಡೆದ ಲೋಕಸಭೆ ಚುನಾವಣೆ, 2009, 20013ರ ವಿಧಾನಸಭೆ ಚುನಾವಣೆಗಳಲ್ಲೂ ಪಕ್ಷೇತರರಾಗಿ ಸ್ಪರ್ಧಿಸಿದ್ದೆ. 2013ರಲ್ಲಿ 776 ಓಟು ಸಿಕ್ಕಿತು. ಅದಕ್ಕೂ ಮುನ್ನ 2009ರಲ್ಲಿ ಗ್ರಾಮ ಪಂಚಾಯತಿ, 2010ರಲ್ಲಿ ತಾ.ಪಂ. ಚುನಾವಣೆಗಳಲ್ಲೂ ಸ್ಪರ್ಧಿಸಿದ್ದೆ’ ಎಂದು ಅವರು ನಗುತ್ತಾ ಹೇಳಿದರು.ತಮ್ಮದು ಯಾವ ಜಾತಿ ಎಂದು ಕೇಳಿದಾಗ ಅವರು ಒಕ್ಕಲಿಗರು ಎಂದರು. ಪರಿಶಿಷ್ಟರಿಗೆ ಮೀಸಲಾಗಿರುವ ಕ್ಷೇತ್ರದಲ್ಲಿ ಹೇಗೆ ಸ್ಪರ್ಧಿಸುತ್ತೀರಿ? ಎಂದು ಕೇಳಿದರೆ, ನಾಮಪತ್ರವನ್ನು ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಬಳಿಯೂ ಯಾರು ಬೇಕಾದರೂ ಪಡೆಯಬಹುದು. ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ನಾನು ಕೋಲಾರದ ಮನುಷ್ಯ. ಹೀಗಾಗಿ ಕೋಲಾರದಲ್ಲೇ ನಾಮಪತ್ರ ಪಡೆದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧಿಸುವೆ’ ಎಂದು ಹೇಳಿದರು!ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾರಾಯಣ ಅವರ ವೃತ್ತಿ ಸಮಾಜಸೇವೆ. ಸಮಾಜಸೇವೆಯನ್ನು ಹೇಗೆ ಮಾಡುತ್ತೀರಿ ಎಂದರೆ, ಈ ಜಗತ್ತಿನಲ್ಲಿ ಕಷ್ಟದಲ್ಲಿರುವವರು ಬಹಳ ಮಂದಿ ಇದ್ದಾರೆ. ಅವರಲ್ಲೇ ಕೆಲವು ಮಂದಿಗೆ ಸಹಾಯ ಮಾಡುವೆ ಎಂದು ಅವರು ಚಿಕ್ಕಬಳ್ಳಾಪುರದ ಕಡೆಗೆ ನಡೆದು ಹೋದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.