ಬುಧವಾರ, ಮೇ 18, 2022
27 °C

ನಂಜುಂಡರಾವ್ ಕಲಾ ಸೇವೆ: ಸಿದ್ದರಾಮಯ್ಯ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬದಿಂದ ಬಂದ ಪ್ರೊ. ಎಂ.ಎಸ್. ನಂಜುಂಡರಾವ್ ಅವರು ಚಿತ್ರಕಲಾ ಪರಿಷತ್ತನ್ನು ಸ್ಥಾಪಿಸಿ ಅದರ ಅಭಿವೃದ್ಧಿಗೆ ಜೀವನ ಪೂರ್ತಿ ಶ್ರಮಿಸಿದರು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಪ್ರೊ.ಎಂ.ಎಸ್.ನಂಜುಂಡರಾವ್ ಸ್ಮಾರಕ ಚಾರಿಟಬಲ್ ಟ್ರಸ್ಟ್ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತು ಪ್ರೊ.ಎಂ.ಎಸ್.ನಂಜುಂಡರಾವ್ ಅವರ 81ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಅವರ ಜೀವನ ಚರಿತ್ರೆ ಆಧಾರಿತ `ಅನನ್ಯ ಕಲಾಸಾರಥಿ - ನಂಜುಂಡರಾವ್' ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.`ನಂಜುಂಡರಾವ್ ಅವರದು ಕಲಾ ಕುಟುಂಬ. ಅವರ ತಂದೆಯವರೂ ಸಹ ಕಲಾವಿದರಾಗಿದ್ದರು. ಗಾಂಧಿವಾದಿಯಾಗಿದ್ದ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಕೊನೆಯವರೆಗೂ ಸರಳ ಜೀವನ ನಡೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ' ಎಂದು ಹೇಳಿದರು.ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ, ದೇವರಾಜ್ ಅರಸು, ರಾಮಕೃಷ್ಣ ಹೆಗಡೆ ಸೇರಿದಂತೆ ಹಲವರು ಪರಿಷತ್ತಿನ ಏಳಿಗೆಗೆ ನಂಜುಂಡರಾವ್ ಅವರಿಗೆ ಸಹಕಾರ ನೀಡಿದ್ದರು. ಅವರ ಶ್ರಮದಿಂದಾಗಿ ಪರಿಷತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ಎಂದು ಅಭಿಪ್ರಾಯಪಟ್ಟರು.ವಿದ್ಯಾರ್ಥಿಗಳಿಗೆ, ಕಲಾಸಕ್ತರಿಗೆ ಶಿಕ್ಷಣ ನೀಡಲು ಪರಿಷತ್ತಿನ ವತಿಯಿಂದ ಸ್ಥಾಪನೆಯಾಗಲಿರುವ ಅಂತರರಾಷ್ಟ್ರೀಯ ಕಲಾ ಗ್ಯಾಲರಿಯು ಉತ್ತಮ ಕಾರ್ಯವಾಗಿದೆ. ಪರಿಷತ್ತಿನ ಏಳಿಗೆಗೆ ಅಗತ್ಯವಿರುವ ಸಹಕಾರವನ್ನು ನೀಡಲಾಗುವುದು ಅವರು ಭರವಸೆ ನೀಡಿದರು.ರಾಜ್ಯಸಭಾ ಸದಸ್ಯ ಎಸ್.ಎಂ.ಕೃಷ್ಣ ಮಾತನಾಡಿ, `ನಂಜುಂಡರಾವ್ ಅವರೊಂದಿಗೆ ನನಗೆ ಸುಮಾರು ಐದು ದಶಕಗಳಿಗೂ ಹೆಚ್ಚಿನ ಒಡನಾಟವಿತ್ತು. ತಮ್ಮ ಕುಟುಂಬಕ್ಕೂ ಹೆಚ್ಚಿನ ಪ್ರಾಶಸ್ತ್ಯ ನೀಡದೆ ಪರಿಷತ್ತಿನ ಸರ್ವತೋಮುಖ ಅಭಿವೃದ್ಧಿಗೆ ಅವರು ದುಡಿದಿದ್ದಾರೆ' ಎಂದು ಶ್ಲಾಘಿಸಿದರು.`ದೇವರಾಜ್ ಅರಸು ಸಚಿವ ಸಂಪುಟದಲ್ಲಿ ನಾನು ಕೈಗಾರಿಕಾ ಸಚಿವನಾಗಿದ್ದ ಸಂದರ್ಭದಲ್ಲಿ ಈಗ ಪರಿಷತ್ತು ಇರುವ ಜಾಗವನ್ನು ಸರ್ಕಾರಿ ಅಧಿಕಾರಿಗಳ ವಾಹನ ಚಾಲಕರಿಗೆ ಸಮುಚ್ಚಯ ನಿರ್ಮಾಣ ಮಾಡಲು ನೀಡುವ ಪ್ರಸ್ತಾವನೆ ಕ್ಯಾಬಿನೆಟ್‌ನಲ್ಲಿ ಮಂಡನೆಯಾಗುವುದರಲ್ಲಿತ್ತು. ಆಗ ನನ್ನ ಬಳಿ ಬಂದ ನಂಜುಂಡರಾವ್ ಆ ಜಾಗ ಕೈತಪ್ಪಿದರೆ ಹೇಗೆ ಪರಿಷತ್ತಿನ ಏಳಿಗೆಗೆ ಮಾರಕವಾಗಲಿದೆ ಎಂಬುದನ್ನು ವಿವರಿಸಿದರು. ನಂತರ ಇದನ್ನು ಅರಸು ಅವರ ಗಮನಕ್ಕೆ ತರಲಾಯಿತು. ಲೋಕೋಪಯೋಗಿ ಸಚಿವರಾಗಿದ್ದ ರಂಗನಾಥ್ ಅವರ ಸಹಕಾರದಿಂದ ಆ ಜಾಗವನ್ನು ಪರಿಷತ್ತಿಗೆ ನೀಡಲಾಯಿತು. ಇದು ನಂಜುಂಡರಾವ್ ಅವರು ಪರಿಷತ್ತಿನ ಬಗೆಗೆ ಹೊಂದಿದ್ದ ಕಾಳಜಿಗೆ ಸಾಕ್ಷಿ' ಎಂದು ವಿವರಿಸಿದರು.ಕಲಾವಿದರಿಗೆ ಪಾಠ: ಕೃತಿಯ ಪ್ರಧಾನ ಸಂಪಾದಕಿ ನಾಗಲಕ್ಷ್ಮಿ ಮಾತನಾಡಿ, `ಕಲೆ, ಪರಿಷತ್ತಿನ ಏಳಿಗೆಗೆ ಅವರಿಗಿದ್ದ ಬದ್ಧತೆ ಇಂದಿನ ಯುವ ಕಲಾವಿದರಿಗೆ ಪಾಠವಿದ್ದಂತೆ. ಅವರ ಶಿಷ್ಯರು, ಬಂಧುಗಳು, ಒಡನಾಡಿಗಳು, ಸಹೋದ್ಯೋಗಿಗಳು ಸೇರಿದಂತೆ ಸುಮಾರು 60ಕ್ಕೂ ಅಧಿಕ ಮಂದಿಯನ್ನು ಸಂದರ್ಶಿಸಿ ಕೃತಿಯನ್ನು ಸಂಪಾದಿಸಲಾಗಿದೆ' ಎಂದು ಹೇಳಿದರು.ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಎಂ.ಎಸ್. ಲಕ್ಷ್ಮೀಶ, ಕಾರ್ಯದರ್ಶಿ ಎಸ್.ಎನ್.ರವಿಶಂಕರ್, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ಡಿ.ಕೆ.ಚೌಟ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.