ಶನಿವಾರ, ಮಾರ್ಚ್ 6, 2021
18 °C

ನಂದಿ ಸಂತೆ ನಿಷೇಧವಿದ್ದರೂ ರಾಸು ಕರೆತಂದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂದಿ ಸಂತೆ ನಿಷೇಧವಿದ್ದರೂ ರಾಸು ಕರೆತಂದರು

ಚಿಕ್ಕಬಳ್ಳಾಪುರ: ನಂದಿ ಜಾತ್ರೆಯಲ್ಲಿ ಈ ಬಾರಿ ದನಗಳ ಜಾತ್ರೆ ನಡೆಸುವಂತಿಲ್ಲ ಎಂದು ಜಿಲ್ಲಾಡಳಿತ ಕಟ್ಟಪ್ಪಣೆ ಮಾಡಿ­ದ್ದರೂ ಬುಧವಾರ ರೈತರು ರಾಸು­ಗಳೊಂದಿಗೆ ಬಂದು ಠಿಕಾಣಿ ಹೂಡಿ­ದ್ದರು. ಅವರ ಮನವೊಲಿಸಿ ಅಲ್ಲಿಂದ ಕಳು­ಹಿಸುವಷ್ಟರಲ್ಲಿ ಅಧಿಕಾರಿಗಳು ಹೈರಾಣಾದರು.ತಾಲ್ಲೂಕಿನ ನಂದಿ ಗ್ರಾಮದ ಭೋಗ­ನಂದೀಶ್ವರಸ್ವಾಮಿ ದೇಗುಲದಲ್ಲಿ ಶುಕ್ರ­ವಾರ ಜಾತ್ರಾ ಮಹೋತ್ಸವ ಆಯೋ­ಜಿಸಲಾಗಿದೆ. ಇಲ್ಲಿ ನಡೆಯುವ ದನಗಳ ಜಾತ್ರೆಗೆ ಪ್ರಾಮುಖ್ಯವಿದೆ. ಜಿಲ್ಲೆ, ತಾಲ್ಲೂಕು, ರಾಜ್ಯದ ವಿವಿಧ ಭಾಗ­ದಿಂದ ಅಷ್ಟೇ ಅಲ್ಲ, ನೆರೆ ರಾಜ್ಯ­ಗಳಿಂದಲೂ ರಾಸುಗಳ ವ್ಯಾಪಾರಕ್ಕಾಗಿ ಇಲ್ಲಿಗೆ ಬರುತ್ತಾರೆ.ಆದರೆ, ಈ ವರ್ಷ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ತಾರಕಕ್ಕೇರಿ, ಈಗಿನ್ನೂ ಹತೋಟಿಗೆ ಬರುತ್ತಿದೆ. ಆದ್ದ­ರಿಂದ ದನಗಳ ಜಾತ್ರೆಯನ್ನು ಕಡ್ಡಾಯ­ವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಪ್ರಕಟಣೆಯನ್ನೂ ನೀಡಲಾಗಿತ್ತು.ಆದರೆ, ಬುಧವಾರ ಬೆಳಿಗ್ಗೆ ವಿವಿ­ಧೆಡೆಗಳಿಂದ ನಂದಿ ಹೋಬಳಿ ಕುಪ್ಪಳ್ಳಿಗೆ ರಾಸುಗಳನ್ನು ಕರೆತರಲಾಗಿತ್ತು. ಈ ಬಾರಿ ಇಂಥ ಕಾರಣಕ್ಕೆ ಜಾತ್ರೆ ನಿಷೇಧಿ­ಸಿದ್ದೇವೆ ಎಂದು ಅವರ ಮನವೊಲಿಸಿ ಹಿಂತಿರುಗುವಂತೆ ಮಾಡಲು ಅಧಿ­ಕಾರಿಗಳು ಹರಸಾಹಸ ಪಟ್ಟರು.ಪಶು ಇಲಾಖೆ ಅಧಿಕಾರಿ ಮಾತಿಗೂ ಜನ ಕದ­ಲಲಿಲ್ಲ. ಸ್ಥಳಕ್ಕೆ ಹೋದ ಪೊಲೀಸ­ರೊಂದಿಗೂ ವಾಗ್ವಾದಕ್ಕೆ ಇಳಿದರು. ‘ದೂರದ ಊರುಗಳಿಂದ ಇದನ್ನೇ ನಂಬಿ ಬಂದಿದ್ದೇವೆ. ಇದರಿಂದ ಯಾರಿಗೇನು ಹಾನಿ’ ಎಂದು ವಾದಿಸಿದರು.ಆಗ ತಹಶೀಲ್ದಾರ್‌ ನಟೇಶ್‌, ರೈತ ಮುಖಂಡರಾದ ಯಲುವಳ್ಳಿ ಸೊಣ್ಣೇ­ಗೌಡ, ಚನ್ನಬೈರೇಗೌಡ, ನಂದಿಬಾಬು, ಬೀಡಗಾನಹಳ್ಳಿ ಮನೋಹರ್‌, ಮುನೇ­ಗೌಡ, ಆನಂದ್‌ ಒಟ್ಟಾಗಿ ರೈತರ ಮನ­ವೊಲಿಸಿದರು. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ರಾಸುಗಳನ್ನು ಇಲ್ಲಿ ತಂದಿದ್ದೀರಿ. ಗಾಳಿ ಮೂಲಕ ಹರಡುವ ವೈರಸ್‌ ಅಕಸ್ಮಾತ್‌ ತಗುಲಿದರೂ ನಿಮಗೆ ಪರಿಹಾರವೂ ಸಿಗದ ರೀತಿಯಲ್ಲಿ ನಷ್ಟ ಅನುಭವಿಸುವಿರಿ. ಯಾವ ಹಸು­ವಿಗೆ ರೋಗ ಬಂದಿದೆಯೋ ತಿಳಿ­ಯುವು­ದಿಲ್ಲ. ಆದರೆ ಒಂದರಿಂದ ಹಲವು ರಾಸು ಸಾವನ್ನಪ್ಪುತ್ತವೆ ಎಂದು ತಿಳಿ­ಹೇಳಿದರು.ಪಶುವೈದ್ಯರೊಂದಿಗೆ ಮಾತನಾಡಿ, ಉಚಿತವಾಗಿ ನೀಡುವ ಲಸಿಕೆ ಬಗ್ಗೆ ವಿವರಿಸಿ, ರಾಸುಗಳಿಗೆ ಲಸಿಕೆ ಹಾಕಿಸಿ ವಾಪಸ್‌ ಕಳುಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.