ಬುಧವಾರ, ಜನವರಿ 22, 2020
28 °C
ಸಮೃದ್ಧ ಗಿಡಗಳಲ್ಲಿ ಕಾಯಿಗಳೇ ಮಾಯ!

ನಂಬಿದ ರೈತನಿಗೆ ಕೈಕೊಟ್ಟ ಬಿ.ಟಿ. ತಳಿ ಹತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ತಾಲ್ಲೂಕಿನ ಕೆ.ಹೊಸೂರು ಗ್ರಾಮದ ರೈತ ಶೇಖರಪ್ಪ ತೆಮ್ಮಿನಾಳ ಬಿ.ಟಿ ತಳಿ ಹತ್ತಿ ಬೆಳೆದು ಸಾಕಷ್ಟು ಹಾನಿಗೆ ಒಳಗಾಗಿದ್ದಾರೆ.ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ 8 ಎಕರೆಯಲ್ಲಿ ಈ ಹತ್ತಿ ನಾಟಿ ಮಾಡಿದ್ದು 6 ತಿಂಗಳು ಕಳೆದರೂ ಹತ್ತಿ ಗಿಡಗಳು ಕಾಯಿಕಟ್ಟಿಲ್ಲ. ಬಿತ್ತನೆ ಬೀಜ, ಗೊಬ್ಬರ ಇತರೆ ಎಲ್ಲ ಸೇರಿದರೆ ಖರ್ಚು ₨ 1 ಲಕ್ಷ ದಾಟುತ್ತದೆ. ಅಕ್ಕಪಕ್ಕದಲ್ಲಿ ಇತರೆ ತಳಿ ಹತ್ತಿ ಬೆಳೆದಿರುವ ರೈತರು ಪ್ರಾರಂಭದಲ್ಲೆೇ ಎಕರೆಗೆ ಕನಿಷ್ಠ 3–4 ಕ್ವಿಂಟಲ್‌ ಹತ್ತಿ ಬಿಡಿಸಿದ್ದಾರೆ. ಆದರೆ ಶೇಖರಪ್ಪ ಅವರ ಹೊಲದಲ್ಲಿ ಮಾತ್ರ ಒಂದು ಕೇಜಿಯಷ್ಟಾದರೂ ಹತ್ತಿ ಸಿಕ್ಕಿಲ್ಲ.ಮುದೇನೂರಿನ ವ್ಯಾಪಾರಿ ಬಳಿ ಮಹಿಕೋ ಕಂಪೆನಿಯ ಎಂಆರ್‌ಸಿ–735 ಬೋಲಗಾರ್ಡ್‌ ಬಿತ್ತನೆ ಬೀಜವನ್ನು ಖರೀದಿಸಿದ್ದಾರೆ. ಕಂಪೆನಿ ತಜ್ಞರು, ಕೃಷಿ ಇಲಾಖೆ ವಿಜ್ಞಾನಿಗಳ ಮಾರ್ಗದರ್ಶನದಲ್ಲಿಯೇ ಗೊಬ್ಬರ, ಔಷಧ, ಕ್ರಿಮಿನಾಶಕ ನಿರ್ವಹಣೆ ಮಾಡಿದ್ದಾರೆ.‘ಅಧಿಕ ಲಾಭಾ ಆಕೈತೆಂತ ಆಸೆ ಮಾಡೀದ್ವಿ ಆದ್ರ ಬೆಳಿ ನೋಡಿ ಹೊಟ್ಟಿ ತುಂಬಿಕೊಳ್ಳಬೇಕ್ರಿ, ₨1 ಬರಲಿಲ್ಲ, ಬಿಳಿ ಜ್ವಾಳಾ ಬಿತ್ತಿದ್ರ ನೂರು ಚೀಲ ಆಕಿದ್ವು, ಹ್ವಾದವರ್ಷ ಬರಗಾಲಂದ್ರೂ 80 ಕ್ವಿಂಟಲ್‌ ಜ್ವಾಳ ಬೆಳದಿದ್ವಿ. ಹತ್ತಿಗೆ ಮಾಡಿದ ಸಾಲದ ಬಡ್ಡೀನೂ ಮೈಮ್ಯಾಲೆ ಬರತೈತ್ರಿ’ ಎಂದೆ ರೈತ ಕಳಕಪ್ಪ ತೆಮ್ಮಿನಾಳ, ಸಂಗಪ್ಪ ತೆಮ್ಮಿನಾಳ ನೋವು ತೋಡಿಕೊಂಡರು.‘ರೈತರು ತಡವಾಗಿ ಹೇಳಿದ್ದಾರೆ. ಆದರೂ ಅವರ ದೂರನ್ನು ನೋಂದಣಿ ಮಾಡಿಕೊಂಡು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಜ್ಞರನ್ನು ಪರಿಶೀಲನೆಗೆ ಕಳುಹಿಸುತ್ತೇವೆ’ ಎಂದು ಬಳ್ಳಾರಿ ವಲಯದ ಮಹಿಕೊ ಕಂಪೆನಿಯ ಅಧಿಕಾರಿ ದಿವಾಕರ ಹೇಳುತ್ತಾರೆ.‘ಅಧಿಕೃತ ಮಾಹಿತಿ ನೀಡಿದರೆ ವಿಜ್ಞಾನಿಗಳು ಮತ್ತು ಸಂಬಂಧಿಸಿದ ಕಂಪೆನಿಯ ತಜ್ಞರನ್ನು ಹೊಲಕ್ಕೆ ಕಳುಹಿಸಿ ಮಾಹಿತಿ ತರಿಸಿಕೊಳ್ಳುತ್ತೇವೆ’ ಎಂದು ಕೊಪ್ಪಳ ಕೃಷಿ ಇಲಾಖೆ ಜಂಟಿ ನಿರ್ದೇಶಕ ಪದ್ಮನಯನ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)