ಗುರುವಾರ , ಮೇ 13, 2021
17 °C

ನಕ್ಸಲರ ಬೇಡಿಕೆ ಈಡೇರಿಕೆಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ):  ಅಪಹೃತ ಇಟಲಿ ಪ್ರಜೆಯ ಬಿಡುಗಡೆಗೆ ಪ್ರತಿಯಾಗಿ ಜೈಲಿನಲ್ಲಿರುವ ಕೆಲವು ನಕ್ಸಲರನ್ನು ಬಿಡುಗಡೆ ಮಾಡಬೇಕು ಎಂಬ ಬೇಡಿಕೆಯ ಬಗ್ಗೆ ಗಂಭೀರವಾಗಿ ಪರಿಶೀಲಿಸಲಾಗುತ್ತದೆ ಎಂದು ಒಡಿಶಾ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಈ ಮಧ್ಯೆ ಅಪಹೃತ ಬಿಜೆಡಿ ಶಾಸಕ ಎಲ್ಲಿದ್ದಾರೆ ಎನ್ನುವ ವಿಚಾರ ಕಗ್ಗಂಟಾಗಿದೆ.

ಇಟಲಿ ಪ್ರಜೆಗಳ ಬಿಡುಗಡೆಗೆ ಬದಲಾಗಿ ಕೆಲವು ನಕ್ಸಲರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂಬ ಷರತ್ತು ವಿಧಿಸಿರುವ ಮಾವೊವಾದಿಗಳ ಪರ ಸಂಧಾನಕಾರರು, ತಮ್ಮ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಸಮಯಾವಕಾಶ ನೀಡಿ ತೆರಳಿದ್ದಾರೆ. ರಾಜ್ಯದ ಬೇರೆಬೇರೆ ಜೈಲುಗಳಲ್ಲಿ ಇರುವ ಸುಮಾರು 40 ಮಂದಿ ನಕ್ಸಲರನ್ನು ಬಿಡುಗಡೆ ಮಾಡಬೇಕು ಎಂಬುದು ಮಾವೊವಾದಿ ಉಗ್ರರ ಪ್ರಮುಖ ಬೇಡಿಕೆಯಾಗಿದ್ದು, ಇದರ ಸಾಧಕ ಬಾಧಕಗಳ ಬಗ್ಗೆ ಗಂಭೀರ ಪರಿಶೀಲನೆ ನಡೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪುರಿಯಲ್ಲಿ ಪ್ರವಾಸಿ ಗೈಡ್ ಆಗಿ ಕೆಲಸ ಮಾಡುತ್ತಿರುವ ಇಟಲಿ ಮೂಲದ ಪೌಲೊ ಬೊಸುಕೊ ಅವರನ್ನು ನಕ್ಸಲರು ಬಿಡುಗಡೆ ಮಾಡಬಹುದು ಎಂಬ ಆಶಾಭಾವನೆ ಇದ್ದು, ಶೀಘ್ರದಲ್ಲಿಯೇ ಸಕಾರಾತ್ಮಕ ಫಲಿತಾಂಶ ದೊರಕಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾವೊವಾದಿಗಳ ಪರ ಸಂಧಾನಕಾರರಾದ ಬಿ. ಡಿ. ಶರ್ಮಾ ಮತ್ತು ದಂಡಪಾಣಿ ಮೊಹಾಂತಿ ಅವರು 10 ದಿನಗಳ ಕಾಲ ಸರ್ಕಾರದ ಜತೆ ರಾಜೀ ಸಂಧಾನ ಮಾತುಕತೆ ನಡೆಸಿ ವಾಪಸಾಗಿದ್ದಾರೆ.

ಈ ಮಧ್ಯೆ ಮಾರ್ಚ್ 24ರಂದು ಕೋರಾಪುಟ್‌ನಿಂದ ಅಪಹರಣಗೊಂಡಿರುವ ಲಕ್ಷೀಪುರ ಶಾಸಕ ಝಿನಾ ಹಕ್ಕಾ ಅವರು ಎಲ್ಲಿದ್ದಾರೆ ಎಂಬುದು ಇದುವರೆಗೆ ಪತ್ತೆಯಾಗಿಲ್ಲ.

ಸಂಧಾನ ಮಾತುಕತೆಯಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಅವರು ಮಾವೊವಾದಿಗಳ ಬೆಂಬಲ ಹೊಂದಿರುವ ಚೆಸಿ ಮುಲಿಯಾ ಆದಿವಾಸಿ ಸಂಘದ ಮುಖಂಡರಿಗೆ ಆಹ್ವಾನ ನೀಡಿ ಎರಡು ದಿನಗಳಾದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.