ಮಂಗಳವಾರ, ಮೇ 11, 2021
19 °C

ನಗರದಲ್ಲಿ ರಕ್ತ ವಿಂಗಡಣಾ ಘಟಕ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ರಕ್ತ ಉತ್ಪಾದಿಸುವ ಪದಾರ್ಥವಲ್ಲ, ಅದನ್ನು ಒಬ್ಬ ವ್ಯಕ್ತಿಯ ದೇಹದಿಂದ ಪಡೆದು ಇನ್ನೊಬ್ಬ ವ್ಯಕ್ತಿಗೆ ಕೊಡಲಾಗುತ್ತದೆ, ರಕ್ತ ಅತ್ಯಮೂಲ್ಯವಾದ ಜೀವದ್ರವ್ಯವಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಶಾಸಕ ವೀರಣ್ಣ ಚರಂತಿಮಠ ಹೇಳಿದರು.ನಗರದ ಹಾನಗಲ್ ಶ್ರಿ ಕುಮಾರೇಶ್ವರ ಆಸ್ಪತ್ರೆಯ ರಕ್ತನಿಧಿ ಭಂಡಾರದಲ್ಲಿ ನೂತನವಾಗಿ ಅಳವಡಿಸಲಾದ ರಕ್ತ ವಿಂಗಡಣಾ ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.  ರೂ. 30 ಲಕ್ಷ ವೆಚ್ಚದಲ್ಲಿ  `ರಕ್ತ ವಿಂಗಡಣಾ ಘಟಕ~ವನ್ನು ಸ್ಥಾಪಿಸಲಾಗಿದ್ದು, ಉತ್ತರ ಕರ್ನಾಟಕದಲ್ಲಿ ಸ್ಥಾಪನೆಯಾದ ಮೂರನೇ ಘಟಕವಾಗಿದೆ ಎಂದರು.ದಾನಿಗಳಿಂದ ಸಂಗ್ರಹಿಸಿದ ರಕ್ತದಲ್ಲಿನ ಕೆಂಪುರಕ್ತ ಕಣ, ಬಿಳಿ ರಕ್ತ ಕಣ ಮತ್ತು ಪ್ಲಾಸ್ಮಾ ಮತ್ತು ಪ್ಲೆಟ್‌ಲೆಟ್‌ಗಳನ್ನು  `ರಕ್ತ ವಿಂಗಡಣಾ ಘಟಕ~ದಲ್ಲಿ ಬೇರ್ಪಡಿಸಿ ಯಾವ ವ್ಯಕ್ತಿಗೆ ರಕ್ತದ ಯಾವ ಭಾಗದ ಅವಶ್ಯಕತೆ ಇದೆ ಎಂದರಿತು ರಕ್ತ ಕೊಡಲಾಗುತ್ತದೆ, ಇದರಿಂದ ರಕ್ತ ಅನವಶ್ಯಕವಾಗಿ ಹಾಳಾಗುವುದನ್ನು ತಪ್ಪಿಸಬಹುದು ಎಂದು ಹೇಳಿದರು.ಈ ಮೊದಲು ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ಯಾವುದೇ ರೀತಿಯ ವಿಂಗಡಣೆ ಮಾಡದೇ ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ಕೊಡಲಾಗುತ್ತಿತ್ತು, ಆದರೆ ಈಗ  `ರಕ್ತ ವಿಂಗಡಣಾ ಘಟಕ~ದಿಂದ ರಕ್ತವನ್ನು ಮೂರು ಭಾಗವಾಗಿ ವಿಂಗಡಿಸಿ ಅವಶ್ಯವಿರುವ ಮೂರು ವ್ಯಕ್ತಿಗಳಿಗೆ ಕೊಟ್ಟು ಜೀವ ಉಳಿಸಬಹುದಾಗಿದೆ ಎಂದರು.ಸಿಕ್ಸ್‌ಟೀನ್ ಸ್ಲೈಸ್ ಸಿಟಿ ಸ್ಕ್ಯಾನ್: ಆಸ್ಪತ್ರೆಯಲ್ಲಿ ರೂ. 2 ಕೋಟಿ ವೆಚ್ಚದಲ್ಲಿ ಸಿಕ್ಸ್‌ಟೀನ್ ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರವನ್ನು ಖರೀದಿಸಲಾಗಿದ್ದು, ಈ ಯಂತ್ರದ ಸಹಾಯದಿಂದ ಏಕಕಾಲಕ್ಕೆ ರೋಗಿಯ ದೇಹದ 16 ಎಕ್ಸ್‌ರೇ ತೆಗೆಯಬಹುದು, ಇದರಿಂದ ರೋಗಿಗೆ ಬಹುಬೇಗ ಚಿಕಿತ್ಸೆ ಕೊಡಬಹುದು ಎಂದರು.ಡಿಸಿಟಲ್ ಸಬ್‌ಸ್ಯ್ಟ್ರಾಕ್ಸನ್ ಎಂಜಿಯೋಗ್ರಫಿ: ರೋಗಿಗಳ ಹಿತದೃಷ್ಟಿಯಿಂದ ಎಚ್‌ಎಸ್‌ಕೆ ಆಸ್ಪತ್ರೆಯಲ್ಲಿ ರೂ. 20 ಲಕ್ಷ ವೆಚ್ಚದಲ್ಲಿ  `ಡಿಜಿಟಲ್ ಸಬ್‌ಸ್ಯ್ಟ್ರಾಕ್ಸನ್ ಎಂಜಿಯೋಗ್ರಫಿ~ ಯಂತ್ರವನ್ನು ಖರೀದಿಸಲಾಗಿದೆ ಎಂದ ಅವರು ಈ ಯಂತ್ರದ ಮೂಲಕ ರಕ್ತದ ಮೂಲಕ ರಕ್ತನಾಳಗಳಲ್ಲಿನ ಅತಿ ಸೂಕ್ಷ್ಮ ತೊಂದರೆಗಳನ್ನು ಸುಲಭವಾಗಿ ಗುರುತಿಸಿ ಚಿಕಿತ್ಸೆ ನೀಡುವುದರಿಂದ ಜೀವಹಾನಿಯಾಗುವುದನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.ರೂ. 25 ಲಕ್ಷ ವೆಚ್ಚದಲ್ಲಿ `4ಡಿ ಅಲ್ಟ್ರಾಸೌಂಡ್~ ಯಂತ್ರ ಖರೀದಿಸಲಾಗಿದ್ದು, ಈ ಯಂತ್ರದಿಂದ ಗರ್ಭದಲ್ಲಿರುವ ಮಗುವಿನ ಸೂಕ್ಷ್ಮಾತಿಸೂಕ್ಷ್ಮ  ದೈಹಿಕ ತೊಂದರೆಗಳನ್ನು ಪತ್ತೆಹಚ್ಚಬಹುದು.  ಗರ್ಭದಲ್ಲಿರುವಾಗಲೇ ಸೂಕ್ತ ಚಿಕಿತ್ಸೆ ನೀಡಿ ಮಗುವಿನ ದೈಹಿಕ ನ್ಯೂನತೆ ಸರಿಪಡಿಸಬಹುದು ಎಂದು ಹೇಳಿದರು.ವೈದ್ಯಕೀಯ ಸೀಟು ಹೆಚ್ಚಳ:

9ನೇ ವರ್ಷಕ್ಕೆ ಕಾಲಿಡುತ್ತಿರುವ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ 100ರಿಂದ 150 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಐಎಂಸಿ ಅನುಮತಿ ಸಿಕ್ಕಿದೆ ಎಂದರು.ಮುಂದಿನ ವರ್ಷದಲ್ಲಿ 150ರಿಂದ 250 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಮತ್ತು  ಸ್ನಾತಕೋತ್ತರ ವೈದ್ಯಕೀಯ ಪದವಿ ಸೀಟು ಹೆಚ್ಚಳ ಮಾಡಲು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಕೋರಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ, ಪ್ರಾಚಾರ್ಯ ಡಾ. ಅಶೋಕ ಮಲ್ಲಾಪುರ, ಮಹಾವಿದ್ಯಾಲಯದ ಡೀನ್ ಟಿ.ಎಂ.ಚಂದ್ರಶೇಖರ್, ಡಾ. ಸಿ.ಎಸ್. ಪಾಟೀಲ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು, ವೈದ್ಯರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.