ಸೋಮವಾರ, ಮೇ 23, 2022
26 °C

ನಗರಸಭೆ ಸದಸ್ಯರಿಂದ ಸುಳ್ಳು ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ನಗರಸಭೆಯ ಎಲ್ಲ ಅಭಿವೃದ್ಧಿ ಕಾಮಗಾರಿಗಳು ನಿಯಮಾನುಸಾರ ನಡೆಯುತ್ತಿವೆ. ನಗರದ ಸ್ವಚ್ಛತೆಗೂ ವಿಶೇಷವಾಗಿ ಗಮನ ಹರಿಸಲಾಗುತ್ತಿದೆ. ಆದರೆ ಅಭಿವೃದ್ಧಿಯನ್ನು ಸಹಿಸದ ಕೆಲವು ಸದಸ್ಯರು ನಗರಸಭೆ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ~ ಎಂದು ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್ ತಿಳಿಸಿದರು.ಬುಧವಾರ ನಗರಸಭೆ ಸದಸ್ಯ ಯಶವಂತ್ ಹಾಗೂ ಇತರ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಕೆಲವು ಆರೋಪಗಳಿಗೆ ಶಂಕರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಉತ್ತರ ನೀಡಿದರು.`ನಗರದಲ್ಲಿ ಸರಿಯಾಗಿ ಸ್ವಚ್ಛತೆ ಆಗುತ್ತಿಲ್ಲ ಎಂದು ಸದಸ್ಯರು ಆರೋಪಿಸಿದ್ದಾರೆ. ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ಕೆಲವು ಭಾಗಗಳಲ್ಲಿ ಸ್ವಲ್ಪ ಕೊರತೆ ಆಗಿದ್ದು ನಿಜ. ಈಗ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಿದ್ದೇವೆ. ನಾನೇ ಸ್ವತಃ ಮುಂಜಾನೆ ವಾರ್ಡ್‌ಗಳಿಗೆ ಹೋಗಿ ಪರಿಶೀಲನೆ ಮಾಡುತ್ತಿದ್ದೇನೆ. ಡೆಂಗೆ ಭೀತಿ ಕಾಣಿಸಿಕೊಂಡ ಬಳಿಕ ಕೊಳಚೆ ಪ್ರದೇಶಗಳಲ್ಲಿ  `ಮಾಸ್ ವರ್ಕ್~ ಮೂಲಕ ಸಂಪೂರ್ಣ ಸ್ವಚ್ಛತೆ ಮಾಡಲಾಗಿದೆ.ಕಡಿಮೆ ಆಳುಗಳನ್ನು ಕಳುಹಿಸಿದ್ದು, ಸರಿಯಾಗಿ ಶುಚಿತ್ವ ಮಾಡದಿರುವ ವಿಚಾರಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ವಾರ್ಡ್‌ಗಳಿಗೆ ಹೋಗಿ ನೋಡುವ ಬದಲು ಕೆಲವು ಸದಸ್ಯರು ಮಾಧ್ಯಮಗಳ ಮುಂದೆ ಆರೋಪ ಮಾಡುತ್ತಿರುವುದು ಬೇಸ ರದ ವಿಚಾರ ಎಂದರು.`ನಗರದಲ್ಲಿ ಎಲ್ಲ ಅಭಿವೃದ್ಧಿ ಕಾಮಗಾರಿಗಳೂ ಸರಿಯಾಗಿ ನಡೆಯುತ್ತಿವೆ. ಈ ವರೆಗೆ ಆರು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ವಿಳಂಬವಾಗಿರುವುದನ್ನು ಬಿಟ್ಟರೆ ಉಳಿದೆಲ್ಲವೂ ಸರಿಯಾಗಿ ನಡೆದಿವೆ. ಅನೇಕ ಕಡೆ ಕಾಮಗಾರಿಗಳೂ ಆರಂಭವಾಗಿವೆ. ಸದಸ್ಯರ ಅನುಮತಿ ಪಡೆಯದೆಯೇ ಕಾಮಗಾರಿ ಮಾಡಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ. ಹಾಗೇನಾದರೂ ಮಾಡಿದ್ದರೆ ಈ ಸದಸ್ಯರೇ ಸಾಮಾನ್ಯ ಸಭೆ ನಡೆಸಲೂ ಬಿಡುತ್ತಿರಲಿಲ್ಲ.ನಾನು ಜೆಡಿಎಸ್ ಸದಸ್ಯರ ಕ್ಷೇತ್ರಗಳಿಗಿಂತ ಹೆಚ್ಚಿನ ಒತ್ತು ಇತರ ಪಕ್ಷಗಳ ಸದಸ್ಯರಿಗೆ ಕೊಟ್ಟಿದ್ದೇನೆ ಎಂದರು.

ನಿರ್ಮಲನಗರ ಯೋಜನೆಯ ಹಣ ವ್ಯರ್ಥವಾಗಿಲ್ಲ. ನಗರದ ಮೂರು ಕಡೆ ಕಸ ನಿರ್ವಹಣಾ ಘಟಕ ಆರಂಭಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ 40 ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಶೀಘ್ರದಲ್ಲೇ ಆ ಕೆಲಸವೂ ಆರಂಭವಾಗಲಿದೆ. ಹಾಸನದ ಮಹಾರಾಜ ಪಾರ್ಕ್ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿಯ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಅಲ್ಲೂ ಶೀಘ್ರ ಕಾಮಗಾರಿ ಆರಂಭವಾಗಲಿದೆ. ಶೇ 27 ಹಣದಲ್ಲಿ ಅನೇಕ ಬಡವರಿಗೆ ಅನುಕೂಲಗಳನ್ನು ಕಲ್ಪಿಸಲಾಗಿದೆ. ಈ ಬಗ್ಗೆ ಎಲ್ಲ ದಾಖಲೆಗಳೂ ನಗರಸಭೆಯಲ್ಲಿವೆ. ಆದರೆ ಸದಸ್ಯರು ಅದನ್ನು ಗಮನಿಸುವುದನ್ನು ಬಿಟ್ಟು ಸುಮ್ಮನೆ ಆರೋಪ ಮಾಡುತ್ತಿದ್ದಾರೆ~ ಎಂದರು.ಹೊಸಲೈನ್ ರಸ್ತೆ ದುರಸ್ತಿ ಕಾರ್ಯ ವರ್ಷವಾದರೂ ಪೂರ್ಣಗೊಳ್ಳದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, `ಗುತ್ತಿಗೆದಾರರಿಗೆ ಈಗಾಗಲೇ ಹಲವು ಬಾರಿ ನೋಟಿಸ್ ನೀಡಿದ್ದೇವೆ. ಶೀಘ್ರದಲ್ಲೇ ಕಾಮಗಾರಿ ಮುಗಿಸದಿದ್ದರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.ಅತಿಕ್ರಮಣ ತೆರವು

ಹುಣಸಿನ ಕೆರೆ ಬಡಾವಣೆಯಲ್ಲಿ ನಗರಸಭೆಯ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವೊಂದನ್ನು ಗುರುವಾರ ತೆರವು ಮಾಡಲಾಗಿದೆ. ಇಂಥ ಎಲ್ಲ ಕಟ್ಟಡಗಳನ್ನೂ ತೆರವು ಮಾಡಲಾಗುವುದು. ಈಗಾಗಲೇ ನಗರದಲ್ಲಿ ಇಂಥ ಆರು ಕಟ್ಟಡಗಳನ್ನು ಗುರುತಿಸಲಾಗಿದೆ. ಇನ್ನೂ ಹಲವು ಕಟ್ಟಡಗಳಿದ್ದು, ಅವುಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆನಂದ್, ಸದಸ್ಯರಾದ ಅನ್ನಪೂರ್ಣಮ್ಮ, ಸಯ್ಯದ್ ಅಕ್ಬರ್, ಅನಿಲ್ ಕುಮಾರ್ ಹಾಗೂ ವಿಜಯಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.