ಬುಧವಾರ, ಜೂನ್ 23, 2021
29 °C

ನದಿ ತಿರುವು: ಪರಮಶಿವಯ್ಯ ವರದಿ ತಿರಸ್ಕರಿಸಲು ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ನದಿ ತಿರುವ ಯೋಜನೆ ಸಂಬಂಧ ಸಿದ್ಧವಾಗಿರುವ ಪರಮಶಿವಯ್ಯ ವರದಿ ತಿರಸ್ಕಾರ, ಬಯಲು ಸೀಮೆ ಪ್ರದೇಶಕ್ಕೆ ನೀರು ಪೂರೈಕೆ ಹಾಗೂ ಆ ಪ್ರದೇಶಗಳ ಅಂತರ್ಜಲ ಮಟ್ಟ ಸುಧಾರಣೆಗೆ ಒತ್ತು ನೀಡಲು ಸರ್ಕಾರಕ್ಕೆ ಆಗ್ರಹ.ಶನಿವಾರ ಇಲ್ಲಿ ನಡೆದ ಎತ್ತಿನಹಳ್ಳ ಹಾಗೂ ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸುತ್ತಿರುವ ಮಲೆನಾಡು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಯೋಜನೆ ಪರವಾಗಿರುವ ಬಯಲುಸೀಮೆಯ ಹೋರಾಟಗಾರ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯವಿದು.ಪರಮಶಿವಯ್ಯ ವರದಿ ವೈಜ್ಞಾನಿಕವಾಗಿಲ್ಲ. ಅದರಲ್ಲಿ ಲೋಪಗಳಿವೆ ಎಂಬುದು ಎರಡೂ ಕಡೆಯವರಿಗೆ ಮನವರಿಕೆಯಾಗಿದ್ದರಿಂದ ವರದಿ ತಿರಸ್ಕಾರಕ್ಕೆ ಆಗ್ರಹಿಸಲಾಗಿದೆ.ಈ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ವಿಜ್ಞಾನಿಗಳು ಮತ್ತು ಪರಿಸರ ತಜ್ಞರ ಸಮಿತಿಯೊಂದನ್ನು ರಚಿಸಿ ನಿಷ್ಪಕ್ಷ ವರದಿ ಸಿದ್ಧಪಡಿಸಬೇಕು ಎಂಬ ಕುರಿತು ಒಮ್ಮತ ಮೂಡಿದೆ.ನೇತ್ರಾವತಿ ತಿರುವು ಯೋಜನೆ ಅಥವಾ ಎತ್ತಿನಹಳ್ಳ ಯೋಜನೆ ಕೈಗೆತ್ತಿಕೊಂಡರೂ, ಅದು ಜಾರಿಗೆ ಬರಲು ದಶಕಗಳಷ್ಟು ಕಾಲ ಬೇಕಾಗಬಹುದು. ಅಲ್ಲಿಯವರೆಗೆ ರಾಜ್ಯದ ಯಾವುದಾದರೂ ಯೋಜನೆಯಿಂದ ಬಯಲುಸೀಮೆ ಭಾಗದ ಜನರಿಗೆ ಕುಡಿಯುವ ನೀರು ಒದಗಿಸಬೇಕು ಎಂದು ಸಭೆ ಆಗ್ರಹಿಸಿದೆ.ಅಲ್ಲದೇ, ಬಯಲುಸೀಮೆಗಳಲ್ಲಿ ಅಂತರ್ಜಲ ಹೆಚ್ಚಿಸಲು ವಿಶೇಷ ಯೋಜನೆ ಜಾರಿಮಾಡಬೇಕೆಂಬ ನಿರ್ಣಯ ಕೈಗೊಳ್ಳಲಾಗಿದ್ದು, ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.`ಬಯಲುಸೀಮೆಯ ಐದು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸಲು ದಕ್ಷಿಣಕನ್ನಡ ಜಿಲ್ಲೆಯ ಜನರಾಗಲಿ, ಮಲೆನಾಡಿನ ಜನರಾಗಲಿ ವಿರೋಧ ವ್ಯಕ್ತಪಡಿಸುತ್ತಿಲ್ಲ. ಪರಮಶಿವಯ್ಯ ವರದಿ ಅವೈಜ್ಞಾನಿಕವಾಗಿದೆ.

 

ಇದನ್ನು ಜಾರಿಮಾಡಿದರೆ ಹತ್ತುಸಾವಿರ ಹೆಕ್ಟೇರ್ ಅರಣ್ಯ ನಾಶವಾಗುತ್ತದೆ. ಅತಿ ಅಪರೂಪದ ಜೀವ ವೈವಿಧ್ಯ ಹೊಂದಿರುವ ಪಶ್ಚಿಮ ಘಟ್ಟದ ಮೇಲೆ ಇದರಿಂದ ದೊಡ್ಡ ರೀತಿಯ ಪರಿಣಾಮ ಉಂಟಾಗುತ್ತಿದೆ. ಹೇಮಾವತಿ ಜಲಾಶಯದಿಂದಲೇ ಈ ಭಾಗದ ಜನರು ಕಾಡಾನೆಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದೆ ಇನ್ನೂ ಹಲವು ಸಮಸ್ಯೆಗಳಾಗಬಹುದು ಎಂಬ ಆತಂಕ ಮಲೆನಾಡಿನ ಜನರಿಂದ ಕೇಳಿಬಂದಿತು.ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಿದ್ದ ಸುಂದರರಾವ್ ಹಾಗೂ ಇತರರು ನೇತ್ರಾವತಿ ನದಿಯ ನೀರನ್ನು ಬೇರೆ ಜಿಲ್ಲೆಗಳಿಗೆ ಹರಿಸಿದರೆ ಮೀನುಗಾರಿಕೆ ಉದ್ದಿಮೆ ನಾಶವಾಗುತ್ತದೆ. ಜತೆಗೆ ಪರಿಸರದ ಹಿನ್ನೆಲೆಯಲ್ಲಿ ಇನ್ನೂ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.ಬಯಲುಸೀಮೆಯ ಕಡೆಯಿಂದ ಬಂದಿದ್ದ ಹೋರಾಟಗಾರರು, ಪರಮಶಿವಯ್ಯ ವರದಿಯನ್ನೇ ಆಧಾರವಾಗಿಟ್ಟು, `ಈ ಭಾಗದಲ್ಲಿ ಜೋರಾಗಿ ಮಳೆ ಬೀಳುತ್ತಿದ್ದಾಗ ನಮ್ಮ ಜಿಲ್ಲೆಗಳ ಕೆರೆ ತುಂಬಿಸಿ ಎಂಬುದಷ್ಟೇ ನಮ್ಮ ಬೇಡಿಕೆ. ಇದೇ ಯೋಜನೆ ಬೇಕೆಂದಿಲ್ಲ. ನೀರಿಲ್ಲದೇ ನಾವು ಅನುಭವಿಸುತ್ತಿರುವ ಕಷ್ಟಗಳನ್ನು ಈ ಭಾಗದ ಜನರೂ ಅರ್ಥ ಮಾಡಿಕೊಂಡು ನೀರು ಕೊಡುವ ಉದಾರತೆ ತೋರಬೇಕು~ ಎಂದು ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.