ಶುಕ್ರವಾರ, ಮೇ 14, 2021
32 °C
ವೃಷಭಾವತಿ ನದಿ ಹರಿಯುವ ಹಳ್ಳಿಗಳಿಗೆ ಜಿಲ್ಲಾಧಿಕಾರಿ ಭೇಟಿ

ನದಿ ನೀರಿನಿಂದ ಹಾನಿ: ವರದಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಬೆಂಗಳೂರಿನ ಪೀಣ್ಯ, ರಾಜಾಜಿನಗರ ಮತ್ತಿತರ ಕೈಗಾರಿಕಾ ಪ್ರದೇಶಗಳಿಂದ ಹಾಗೂ ಬೆಂಗಳೂರು ನಗರದ ಕಲುಷಿತ ನೀರಿನಿಂದ ಕಲ್ಮಶಗೊಂಡು ಬಿಡದಿಯ ಬೈರಮಂಗಲ ಸುತ್ತ ಹರಿಯುವ ವೃಷಭಾವತಿ ನದಿ ನೀರಿನ ದುಷ್ಪರಿಣಾಮಗಳು ಮತ್ತು ಪರಿಹಾರ ಮಾರ್ಗಗಳ ಕುರಿತು ಸಮೀಕ್ಷೆ ಕೈಗೊಳ್ಳಬೇಕು. ಅದರ ಸಮಗ್ರ ವರದಿಯನ್ನು ತಿಂಗಳೊಳಗೆ ಸಲ್ಲಿಸುವಂತೆ ಮೈಸೂರಿನ `ಜಲವಾಹಿನಿ' ನಿರ್ವಹಣಾ ಸೇವಾ ಸಂಸ್ಥೆಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ತಿಳಿಸಿದರು.ಜಿಲ್ಲೆಯ ವಿವಿಧ ಅಧಿಕಾರಿಗಳೊಂದಿಗೆ ಬಿಡದಿ ವ್ಯಾಪ್ತಿಯ ಬೈರಮಂಗಲ, ಶಾನಮಂಗಲ, ಶೇಷಗಿರಿಹಳ್ಳಿ ಸೇರಿದಂತೆ ವೃಷಭಾವತಿ ನದಿ ಹರಿಯುವ ಸುತ್ತಮುತ್ತಲಿನ ಹಳ್ಳಿಗಳಿಗೆ ಶುಕ್ರವಾರ ಖುದ್ದು ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು ಗ್ರಾಮಗಳಲ್ಲಿ ಈ ಕಲುಷಿತ ನೀರಿನಿಂದ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಪರಿಶೀಲನೆ ನಡೆಸಿದರು.ನದಿ ನೀರಿನಿಂದ ಈ ಭಾಗದ ಜನ, ಜಾನುವಾರು, ಮರ, ಗಿಡ ಮತ್ತಿತರ ಬೆಳೆಗಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಹೋರಾಟಗಾರರು, ಪರಿಸರವಾದಿಗಳ ಮನವಿ ಹಾಗೂ ಲೋಕಾ ಆದಾಲತ್‌ನ ನಿರ್ದೇಶನದಂತೆ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಅವರು ಸುದ್ದಿಗಾರರಿಗೆ ಹೇಳಿದರು.ಈ ನದಿಯ ನೀರನ್ನು ಕೃಷಿ ಮತ್ತು ತೋಟಗಾರಿಕೆ, ಜಾನುವಾರು ಮೇವು ಮುಂತಾದ ಬೆಳೆಗಳಿಗೆ ಉಪಯೋಗಿಸಲಾಗುತ್ತಿದೆ. ನದಿ ನೀರಿನಲ್ಲಿ ವಿಷಯುಕ್ತ ಆಮ್ಲ ಹಾಗೂ ರಾಸಾಯನಿಕ ಲವಣಾಂಶಗಳಿಂದ ಬೈರಮಂಗಲ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು ಹಾಗೂ ಇದಕ್ಕೆ ವೈಜ್ಞಾನಿಕವಾಗಿ ಪರಿಹಾರ ಮಾರ್ಗಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದರು.ಮೈಸೂರಿನ ಜಲವಾಹಿನಿ ಸಂಸ್ಥೆಯವರು ಮೈಸೂರಿನ ಕೊಳಚೆ ನೀರನ್ನು ನಾಲ್ಕು ವರ್ಷಗಳಿಂದ ಶುದ್ಧೀಕರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದರಿಂದ ಕೊಳಚೆ ನೀರು ಶುದ್ಧಿಗೊಂಡು ತಿಳಿಯಾಗಿರುವ ಬಗ್ಗೆ ವರದಿ ಇರುವ ಹಿನ್ನೆಲೆಯಲ್ಲಿ ಸದರಿ ಸಂಸ್ಥೆಯವರಿಂದಲೇ ಸೇವೆಯನ್ನು ಪಡೆದು ವೃಷಭಾವತಿ ನದಿ ನೀರನ್ನು ಶುದ್ಧೀಕರಿಸುವ ಬಗ್ಗೆ ಚಿಂತಿಸಿರುವುದಾಗಿ ಅವರು ವಿವರಿಸಿದರು.ಸಂಸ್ಥೆಯವರಿಗೆ ತಿಂಗಳ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿ ಆದೇಶಿಸಲಾಗುವುದು. ಆ ವರದಿಯಲ್ಲಿ ಬೆಳೆಗಳ ಮೇಲೆ ನೀರಿನ ಪರಿಣಾಮ, ಮಣ್ಣಿನ ಫಲವತ್ತತೆ, ಜಾನುವಾರಿನ ಹಾಲು ಹಾಗೂ ಮಾಂಸದ ಮೇಲೆ ಮತ್ತು ಜನರ ಆರೋಗ್ಯದ ಮೇಲೂ ಬೀರುತ್ತಿರುವ ಪರಿಣಾಮದ ಕುರಿತು ಮಾಹಿತಿ ನೀಡುವಂತೆ ತಿಳಿಸಿರುವುದಾಗಿ ಅವರು ಹೇಳಿದರು.ಶುದ್ಧೀಕರಿಸಲು ಚಿಂತನೆ: ಹರಿಯುವ ನೀರನ್ನು ಶುದ್ಧಿಕರಿಸಲು ಸಾಧ್ಯವಿಲ್ಲವಾದ್ದರಿಂದ ಬೈರಮಂಗಲ ಕೆರೆಗೆ ನದಿ ನೀರು ಸೇರುವ ಸ್ಥಳವಾದ ಶಾನಮಂಗಲದ ಬಳಿ ನೀರನ್ನು ತಾತ್ಕಾಲಿಕವಾಗಿ ತಡೆಹಿಡಿದು (ಬಂಡ್ ನಿರ್ಮಿಸಿ) ಶುದ್ಧೀಕರಿಸಲಾಗುವುದು. ಶುದ್ಧೀಕರಣಕ್ಕೆ ಸುಮಾರು 48 ರಿಂದ 72 ಗಂಟೆಗಳ ಅವಶ್ಯಕತೆಯಿದ್ದು ಶುದ್ಧೀಕರಣಗೊಂಡು ತಿಳಿಯಾದ ನೀರನ್ನು ಬೆಳೆಗಳಿಗೆ ಉಪಯೋಗಿಸುವ ಬಗ್ಗೆ ಯೋಚಿಸಿರುವುದಾಗಿ ತಿಳಿಸಿದರು.ಅನಧಿಕೃತ ಕಾರ್ಖಾನೆಗಳನ್ನು ತೆರವಿಗೆ ಸೂಚನೆ : ಸರ್ಕಾರದ ಅನುಮತಿ ಇಲ್ಲದೆ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬಣ್ಣದ ಕಾರ್ಖಾನೆಗಳು ಮತ್ತಿತರ ಕಾರ್ಖಾನೆಗಳು ನದಿಗೆ ವಿಷಕಾರಿ ನೀರನ್ನು ಬಿಡುತ್ತಿರುವ ಬಗ್ಗೆ ಗ್ರಾಮದ ಜನರು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗೆ ದೂರು ನೀಡಿದರು. ಇದಕ್ಕೆ ಪ್ರತಿಕ್ರಿಸಿದ ಡಿ.ಸಿ ಅವರು ಅನಧಿಕೃತ ಕಾರ್ಖಾನೆಗಳನ್ನು ತೆರವುಗೊಳಿಸುವಂತೆ ಉಪವಿಭಾಗಾಧಿಕಾರಿ ಡಾ. ರಾಜೇಂದ್ರಪ್ರಸಾದ್ ಅವರಿಗೆ ಸೂಚಿಸಿದರು.ಇದಲ್ಲದೆ ಸಂಬಂಧಿಸಿದ ಪ್ರತಿಯೊಂದು ಇಲಾಖೆಗಳು ಬೆಳೆಗಳ ಕುರಿತು ಕೃಷಿ ಹಾಗೂ ತೋಟಗಾರಿಕೆ ಜಾನುವಾರು ಕುರಿತು ಪಶುಸಂಗೋಪನೆ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತು ಆರೋಗ್ಯ ಇಲಾಖೆ, ಕಾರ್ಖಾನೆಗಳಿಂದ ನದಿಗೆ ಸೇರುತ್ತಿರುವ ಕಲ್ಮಶಗಳ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೈಗಾರಿಕೆ ಇಲಾಖೆ ಹೀಗೆ ಸಂಬಂಧಪಟ್ಟ ಪ್ರತಿಯೊಂದು ಇಲಾಖೆಯು ಪ್ರತ್ಯೇಕ ವರದಿಗಳನ್ನು ವಾರದೊಳಗೆ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.ಈ ಎಲ್ಲಾ ವರದಿಗಳನ್ನು ಸೇರಿಸಿ ಸಮಗ್ರ ಯೋಜನಾ ವರದಿಯನ್ನು ತಯಾರಿಸಲಾಗುವುದು. ಜನರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತವು ಬದ್ಧವಾಗಿದೆ. ಜನರ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳು ಹಾಗೂ ಅದರ ಚಿಕಿತ್ಸೆಗಾಗಿ ಬೈರಮಂಗಲದಲ್ಲಿ ಆರೋಗ್ಯ ಶಿಬಿರವನ್ನು ಏರ್ಪಡಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಗ್ರಾಮದ ಜನರ ಮನವಿ: ಸೊಳ್ಳೆ ನಿಯಂತ್ರಿಸುವಂತೆ ಹಾಗೂ ಮುಚ್ಚಿ ಹೋಗಿರುವ ಕಬ್ಬು ಕಾರ್ಖಾನೆಯಿಂದ ಕಬ್ಬು ಬೆಳೆಗಾರರಿಗೆ ಬಾಕಿ ಇರುವ ಹಣವನ್ನು ಕೊಡಿಸುವಂತೆ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್, ಬೈರಮಂಗಲ ಗ್ರಾಮ ಪಂಚಾಯಿತಿ ಸದಸ್ಯ ರವೀಶ್, ತಿಮ್ಮೇಗೌಡನದೊಡ್ಡಿ ಕಿರಣ್‌ಬಾಬು, ಬಸವರಾಜು, ನಾಗರಾಜು ಮತ್ತಿತರ ಗ್ರಾಮಸ್ಥರು ಮನವಿ ಮಾಡಿದಾಗ ಕಬ್ಬು ಮಾರಿದ ಹಣ ಬಾಕಿ ಇರುವ ಬಗ್ಗೆ ಬೆಳೆಗಾರರ ಪಟ್ಟಿಯನ್ನು ಒದಗಿಸಿದ್ದಲ್ಲಿ ಹಣ ಕೊಡಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ಕೆರೆಯ ನೀರು ಶುದ್ಧೀಕರಣಗೊಂಡಲ್ಲಿ ಸೊಳ್ಳೆಗಳು ನಿಯಂತ್ರಣವಾಗಲಿದೆ ಎಂದರು.ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮುಖಂಡ ಎ. ಮಂಜುನಾಥ್ ಮಾತನಾಡಿ, ಕೆರಯ ನೀರಿನ ಶುದ್ಧೀಕರಣಕ್ಕೆ ತ್ವರಿತವಾಗಿ ಶುದ್ಧಿಕರಣ ಘಟಕವನ್ನು ಸ್ಥಾಪಿಸಿ ಎಂದು ಆಗ್ರಹಿಸಿದರು. ಅಲ್ಲದೆ ಈ ಭಾಗದ ವಿಷಕಾರಿ ನೀರಿನಿಂದಾಗಿರುವ ದುಷ್ಪರಿಣಾಮ ಮತ್ತು ಪರಿಹಾರದ ಕುರಿತು ಸಮಗ್ರವಾಗಿ ಚರ್ಚಿಸಿ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.ಮೈಸೂರಿನಲ್ಲಿ ಹೇಗಿದೆ: ಈ ಸಂದರ್ಭದಲ್ಲಿ ಯೋಜನೆ ಬಗ್ಗೆ ಮಾತನಾಡಿದ ಮೈಸೂರಿನ ಜಲವಾಹಿನಿ ಸಂಸ್ಥೆಯ ತಾಂತ್ರಿಕ ವ್ಯವಸ್ಥಾಪಕ ಉಮಾ ಶಂಕರ್ ತಮ್ಮ ಸಂಸ್ಥೆ ನಾಲ್ಕು ವರ್ಷಗಳಿಂದ ಮೈಸೂರಿನ ಕಲ್ಮಶ ನೀರನ್ನು ಶುದ್ಧೀಕರಿಸುತ್ತಿದೆ. ಶುದ್ದೀಕರಿಸುವ ಮುನ್ನ ನೀರಿನಲ್ಲಿ 230 ಬಿಎಂಡಿ ಇದ್ದದ್ದು ಶುದ್ಧೀಕರಣದ ನಂತರ 10 ಬಿಎಂಡಿಗೆ ಇಳಿದಿದೆ. ಶುದ್ಧೀಕರಿಸಿದ ನೀರನ್ನು ಅರಣ್ಯ ಇಲಾಖೆ ಮೂಲಕ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದ ಹಸಿರೀಕರಣಕ್ಕೆ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಮೈಸೂರಿನಲ್ಲಿ ಪ್ರತಿ ದಿನ 67.5 ಎಂಎಲ್‌ಡಿ ನೀರನ್ನು ಶುದ್ಧಿಕರಿಸಲಾಗುತ್ತಿದೆ. ರಾಮನಗರ ಜಿಲ್ಲೆಯ ಜಿಲ್ಲಾಡಳಿತದ ಸೂಚನೆ ಮೇರೆಗೆ ಬೈರಮಂಗಲದ ಕೆರೆಯ ನೀರನ್ನು ಶುದ್ಧಿಕರಿಸಿ ನೀರನ್ನು ಪುನರ್‌ಬಳಕೆ ಮಾಡುವ ಬಗ್ಗೆ ಸಮಗ್ರ ಯೋಜನಾ ವರದಿಯನ್ನು ತಿಂಗಳ ಒಳಗೆ ಸಲ್ಲಿಸುವುದಾಗಿ ಅವರು ತಿಳಿಸಿದರು. ಕೆರೆ ನೀರಿನಲ್ಲಿ ಕಾರ್ಖಾನೆಗಳ ವಿಷಯುಕ್ತ ವಸ್ತುಗಳು ಅದರಲ್ಲೂ `ಅರೆಸನಿಕ್' ಅಂಶವು ಹೆಚ್ಚಾಗಿ ಇರುವುದನ್ನು ಕಾಣಬಹುದು ಎಂದು ಹೇಳಿದರು.ಬೈರಮಂಗಲ ಗ್ರಾಮದ ಹಿರಿಯ ಗ್ರಾಮಸ್ಥರಾದ ಸಿ. ಹೊನ್ನಪ್ಪ ಮಾತನಾಡಿ, ಬೈರಮಂಗಲ ಕೆರೆಯ ನಿರ್ಮಾಣವನ್ನು 1940ರಲ್ಲಿ ಪ್ರಾರಂಭಿಸಿ 1942ರಲ್ಲಿ ಪೂರ್ಣಗೊಳಿಸಿದೆ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಸೈನಿಕರು ಈ ನೀರನ್ನು ಕುಡಿಯುತ್ತಿದ್ದರು. ಅಲ್ಲದೆ ಸುಮಾರು 25 ವರ್ಷಗಳ ಹಿಂದಿನವರೆಗೂ ಕೆರೆ ನೀರನ್ನು ಕುಡಿಯಲು ಬಳಸಲಾಗುತ್ತಿತ್ತು. ವೃಷಭಾವತಿ ಕಲ್ಮಶದಿಂದ ಕೆರೆಯ ನೀರು ಕಲ್ಮಶಗೊಂಡಿತು ಎಂದು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಎಂ.ಎನ್. ರಾಜೇಂದ್ರ ಪ್ರಸಾದ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಬ್ಯಾಲಾ ನಾಯಕ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಣ್ಣಯ್ಯ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ. ಬಿ. ಕೃಷ್ಣ, ರೇಷ್ಮೆ ಇಲಾಖೆಯ ಉಪನಿರ್ದೇಶಕ ರೆಡ್ಡಿ,  ತಹಸೀಲ್ದಾರ್ ಹನುಮಂತರಾಯಪ್ಪ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾಧಿಕಾರಿ ನಾರಾಯಣಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಎಇಇ ರವಿಶಂಕರ್, ಜಲವಾಹಿನಿ ಸಂಸ್ಥೆಯ ವ್ಯವಸ್ಥಾಪಕಸುರೇಶ್ ಮುಂತಾದವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.