ಶನಿವಾರ, ಮಾರ್ಚ್ 6, 2021
18 °C
ಬಿಜೆಪಿ ಪ್ರಮಾದಗಳಿಗೆ ಜನ ಒಳ್ಳೆಯ ಡೋಸ್‌ ನೀಡಿದ್ದಾರೆ

ನನಗೆ ವೈರಿಗಳೇ ಇಲ್ಲ: ಡಿವಿಎಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನಗೆ ವೈರಿಗಳೇ ಇಲ್ಲ: ಡಿವಿಎಸ್‌

ಬೆಂಗಳೂರು: ‘ನಮ್ಮ ಕಚ್ಚಾಟದ ಪ್ರಮಾದ­­ಗಳಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ಒಳ್ಳೆಯ ಡೋಸ್‌ ನೀಡಿದ್ದಾರೆ. ಅದರ ಪರಿ­ಣಾಮ ನಮ್ಮ ಮೇಲಾಗಿದ್ದು, ಮತ್ತೆ ತಪ್ಪು ಮಾಡುವುದಿಲ್ಲ.‘ನನಗೆ ಯಾರೂ ವೈರಿಗಳಿಲ್ಲ. ವೈರಿ­ಗಳನ್ನು ಸೃಷ್ಟಿಸಿಕೊಳ್ಳುವಂತಹ ವ್ಯಕ್ತಿತ್ವ ನನ್ನದಲ್ಲ. ಹೀಗಾಗಿ ನನ್ನ ಬಗಲಲ್ಲಿ ಯಾವ ದುಶ್ಮನ್‌ಗಳೂ ಇಲ್ಲ. ನನ್ನ ಕ್ಷೇತ್ರ­ದಲ್ಲಿ ಆರ್‌.ಅಶೋಕ ಅವರ ನೇತೃತ್ವ­ದಲ್ಲೇ ಪ್ರಚಾರ ಕಾರ್ಯ ನಡೆಯುತ್ತಿದೆ’ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡ ಅವರ ಸ್ಪಷ್ಟ ಅಭಿ­ಪ್ರಾಯ ಇದು. ಪ್ರೆಸ್‌ ಕ್ಲಬ್‌ ಮತ್ತು ವರದಿ­­ಗಾರರ ಕೂಟ ಜತೆಯಾಗಿ ಶುಕ್ರವಾರ ಏರ್ಪ­ಡಿಸಿದ್ದ ಪತ್ರಿಕಾ ಸಂವಾದ­­ದಲ್ಲಿ ಪಾಲ್ಗೊಂಡು ಅವರು ಮಾತ­ನಾಡಿದರು. ಸಂವಾದದ ಪ್ರಶ್ನೋತ್ತರ ರೂಪ ಇಲ್ಲಿದೆ:*ನೀವು ಕ್ಷೇತ್ರಕ್ಕೆ ಹೊರಗಿನವರು ಎನ್ನುವ ಅಭಿಪ್ರಾಯ ಇದೆಯಲ್ಲ?

ಸುಳ್ಯ ನನ್ನೂರು. ಪುತ್ತೂರಿನಲ್ಲಿ ವಿಧಾನಸಭಾ ಚುನಾವಣೆಗೆ ನಿಂತಾ­ಗಲೂ ಇಂತಹ ಅಭಿಪ್ರಾಯ ಬಂದಿತ್ತು. ಮಂಗ­ಳೂ­ರು,­ಉಡುಪಿ–ಚಿಕ್ಕ­ಮಗಳೂ­ರಿ­ನಿಂದ ಲೋಕಸಭೆಗೆ ಸ್ಪರ್ಧಿಸಿ­ದಾ­ಗಲೂ ಈ ವಾದ ಕೇಳಿ­ಬಂದಿತ್ತು. ನಾನು ಮುಖ್ಯ­ಮಂತ್ರಿ­ಯಾಗಿ ಕೆಲಸ ಮಾಡಿದ ವ್ಯಕ್ತಿ. ಇಡೀ ರಾಜ್ಯಕ್ಕೆ ಸೇರಿದ ರಾಜಕಾರಣಿ. 5–6 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾರ್ಯ­ಕರ್ತರು ಒತ್ತಾಯಿಸಿದ್ದರು. ಕೊನೆಗೆ ಪಕ್ಷ ಬೆಂಗಳೂರು ಉತ್ತರ ಕ್ಷೇತ್ರ ತೋರಿಸಿತು. ಕ್ಷೇತ್ರದ ಎಲ್ಲ ಜನರಿಗೆ ನಾನು ಚಿರಪರಿ­ಚಿತನಿದ್ದು, ಯಾರಿಗೂ ಹೊರಗಿನ ವ್ಯಕ್ತಿ ಎನಿಸಿಲ್ಲ.*ಬಿಜೆಪಿಯಲ್ಲಿ ವ್ಯಕ್ತಿ ಪೂಜೆ ನಡೆಯುತ್ತಿದೆಯಲ್ಲ?

ಕಳೆದ ಹತ್ತು ವರ್ಷಗಳಿಂದ ದೇಶಕ್ಕೆ ಒಂದು ನಾಯಕತ್ವ ಎನ್ನು­ವುದೇ ಇಲ್ಲ. ಆ ಶೂನ್ಯವನ್ನು ತುಂಬುವಂತಹ ಸಮರ್ಥ ನಾಯಕತ್ವ ನಮ್ಮಲ್ಲಿದೆ ಎಂಬುದನ್ನು ಬಿಂಬಿಸಲು ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ­ದ್ದೇವೆ. ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಕೈಗೊಂಡ ನಿರ್ಧಾರ ಇದಾಗಿದೆ. ನಮ್ಮಲ್ಲಿ ವ್ಯಕ್ತಿ ಪೂಜೆ ಎನ್ನು­ವುದಿಲ್ಲ. ಸಾಮೂಹಿಕ ಮತ್ತು ಸಹ­ಮತದ ತೀರ್ಮಾನ­ಗಳನ್ನೇ ಪಕ್ಷ ಕೈಗೊಳ್ಳುತ್ತದೆ.*ಜಸ್ವಂತ್‌ ಸಿಂಗ್‌ ಅವರನ್ನು ಮೂಲೆಗುಂಪು ಮಾಡಿದ್ದೇಕೆ?

ಇಲ್ಲ. ಜಸ್ವಂತ್‌ ಸಿಂಗ್‌ ಅವರನ್ನು ಮೂಲೆಗುಂಪು ಮಾಡಿಲ್ಲ. ಬಾರ್ಮೇರ್‌ ಕ್ಷೇತ್ರದಿಂದ ಅವರು ಗೆಲ್ಲುವುದು ಕಷ್ಟ ಎನ್ನುವುದು ಪಕ್ಷದ ಅಭಿಪ್ರಾಯ­ವಾಗಿತ್ತು. ಹೀಗಾಗಿ ಬೇರೆ ಕ್ಷೇತ್ರಗಳ ಕಡೆಗೆ ಗಮನಹರಿಸಲು ಸೂಚಿಸ­ಲಾ­ಗಿ­ದೆಯೇ ವಿನಾ ಸ್ಪರ್ಧಿಸದಂತೆ ನಿರ್ಬಂಧಿ­ಸಿಲ್ಲ. ಅವರು ಹಿರಿಯ ನಾಯಕರು. ಪಕ್ಷದ ಅಭಿಪ್ರಾಯವನ್ನು ಗೌರವಿಸಬೇಕು.ನಿಜಕ್ಕೂ ನಾಯಕರನ್ನು ಮೂಲೆಗುಂಪು ಮಾಡಿದ್ದು ಕಾಂಗ್ರೆಸ್‌ ಪಕ್ಷ. ಎಸ್‌.ಎಂ.ಕೃಷ್ಣ ಅವರನ್ನು ಇದ್ದಕ್ಕಿದ್ದಂತೆ ಅಧಿಕಾರದಿಂದ ಕೆಳಗೆ ಇಳಿಸ­ಲಾ­ಯಿತು. ಅವರನ್ನು ಇನ್ನೂ ಮುಖ್ಯ­ವಾಹಿನಿಗೆ ಕರೆತಂದಿಲ್ಲ. ಸಿ.ಕೆ. ಜಾಫರ್‌ ಷರೀಫ್‌ ಅವರಿಗೂ ಟಿಕೆಟ್‌ ನಿರಾಕರಿಸ­ಲಾಯಿತು. ಆದರೆ, ಈ ಬಗೆಗೆ ಯಾರೂ ಕೇಳುವುದಿಲ್ಲ.*ವಿಧಾನಸಭೆ ಚುನಾವಣೆಯಲ್ಲಿ ಸೋಲಿಗೆ ಏನು ಕಾರಣ? ಈಗ ಗೆಲುವು ಹೇಗೆ ಸಾಧ್ಯ?

ಪಕ್ಷ ಮೂರು ಭಾಗವಾಗಿ ಮತ ವಿಭಜನೆ ಆಗಿದ್ದರಿಂದ ನಾವು ಸೋಲು ಕಾಣಬೇಕಾಯಿತು. ನಮ್ಮ ಕಚ್ಚಾಟಗಳಿಗೆ ಜನ ಒಳ್ಳೆಯ ಡೋಸ್‌ ನೀಡಿದ್ದಾರೆ. ಅದರ ಗಾಢ ಪರಿಣಾಮ ನಮ್ಮ ಮೇಲಾಗಿದ್ದು, ಇನ್ನುಮುಂದೆ ತಪ್ಪು ಮಾಡುವುದಿಲ್ಲ. ಒಂದುವೇಳೆ ಪ್ರಮಾದ ಮರುಕಳಿಸಿದರೆ ರಾಜಕಾರಣದಲ್ಲಿ ಉಳಿಯಲು ಸಾಧ್ಯವಿಲ್ಲ. ಒಂದೆಡೆ ನಾವುಗಳೆಲ್ಲ ಒಂದಾದರೆ, ಇನ್ನೊಂದೆಡೆ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ನಡುವೆ ಕಬಡ್ಡಿ ಆಟ ಶುರುವಾಗಿದೆ. ನಮ್ಮ ಒಗ್ಗಟ್ಟು, ಕಾಂಗ್ರೆಸ್‌ನ ಒಡಕು ಚುನಾವಣಾ ಫಲಿ­ತಾಂಶವನ್ನು ನಿರ್ಧರಿಸಲಿದೆ.*ಜನ ನಿಮ್ಮ ತಪ್ಪನ್ನು ಕ್ಷಮಿಸಿ­ದ್ದಾರೆಯೇ?

ಸಾರ್ವಜನಿಕರ ಸ್ಮರಣೆ ತುಂಬಾ ಕಡಿಮೆ ಕಾಲದ್ದು. ಈಗ ಕಾಂಗ್ರೆಸ್‌ನ ಪ್ರಮಾದಗಳನ್ನು ಅವರು ನೆನಪಿಟ್ಟಿದ್ದಾರೆ.*ನಿಮ್ಮನ್ನು ಮುಖ್ಯಮಂತ್ರಿ ಮಾಡಿದವರೇ ರಾಜೀನಾಮೆ ನೀಡಲು ಕಾರಣವಾದರೇ?

ನಾನು ಮುಖ್ಯಮಂತ್ರಿಯಾಗಲು ನಿಸ್ಸಂಶ­ಯವಾಗಿ ಬಿ.ಎಸ್‌. ಯಡಿ­ಯೂರಪ್ಪ­­ನವರು ಕಾರಣ. ಗೊಂದಲ­ಗಳು ಹೆಚ್ಚಿದಾಗ ಅದು ಆಡಳಿತದ ಮೇಲೆ ಪರಿಣಾಮ ಬೀರಬಾರದು ಎನ್ನುವ ದೃಷ್ಟಿಯಿಂದ ಪಕ್ಷದ ನಾಯಕರ ಅಭಿ­ಪ್ರಾಯ ಪಡೆದು ನಾನೇ ರಾಜೀನಾಮೆ ನೀಡಿದೆ.*ಎನ್‌ಡಿಎ ಸರ್ಕಾರ ಬಂದರೆ ನಿಮಗೆ ಮಂತ್ರಿ ಪದವಿ ಸಿಗುತ್ತದೆಯೇ?

ಮುಖ್ಯಮಂತ್ರಿ ಪದವಿ ನನಗೆ ಬಯಸದೆ ಬಂದ ಭಾಗ್ಯ. ಪಕ್ಷ ನನಗೆ ಎಲ್ಲ ಸ್ಥಾನಮಾನ ನೀಡಿದೆ. ಅಧಿಕಾರದ ಹಪಾಹಪಿ ಇಲ್ಲ. ಜವಾಬ್ದಾರಿ ಕೊಟ್ಟರೆ ನಿಭಾಯಿಸಲು ಸಿದ್ಧ.*ಸದಾ ನಗ್ತಾ ಇರ್ತೀರಿ... ರೇಸ್‌ನಲ್ಲಿ ಮಾತ್ರ ಹಿಂದೆ ಬಿದ್ದಿದ್ದೀರಂತೆ?

ನಗು ಸಂತೃಪ್ತಿ ಸಂಕೇತ. ನಾನು ರಾಜೀನಾಮೆ ನೀಡಿದಾಗಲೂ ನಗು­ತ್ತಲೇ ಇದ್ದೆ. ನನ್ನ ಟ್ರ್ಯಾಕ್‌ನಲ್ಲಿ ನಾನು ಚೆನ್ನಾಗಿ ಓಡುತ್ತಿದ್ದು ರೇಸ್‌ನಲ್ಲಿ ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ.*ಬೆಂಗಳೂರು ಉತ್ತರ ಕ್ಷೇತ್ರಕ್ಕೆ ನಿಮ್ಮ ಆದ್ಯತೆಗಳೇನು?

ಅಭಿವೃದ್ಧಿ ಕೆಲಸಗಳನ್ನು ರಾಜ್ಯ ಸರ್ಕಾರವೇ ಮಾಡಬೇಕು. ದೊಡ್ಡ ಯೋಜನೆಗಳಿಗೆ ಬೇಕಾದ ಅನು­ದಾನವನ್ನು ಕೇಂದ್ರದಿಂದ ತರುತ್ತೇನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.