ಶುಕ್ರವಾರ, ಮಾರ್ಚ್ 5, 2021
29 °C
ಅಭಿಜಾತ ರಂಗ ಕಲಾವಿದೆ ಲಲಿತಮ್ಮ ಇನ್ನು ನೆನಪು ಮಾತ್ರ

ನನಸಾಗದ ಉಮಾಕ್ಕ ನೋಡುವಾಸೆ

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ನನಸಾಗದ ಉಮಾಕ್ಕ ನೋಡುವಾಸೆ

ಗದಗ: ‘ಹಿರಿಯ ಜೀವ ಇಲ್ಲಿವರೆಗೂ ಬದುಕಿರುವುದು ಸಾಕು. ಸಾಯುವ ಮುನ್ನ ಒಮ್ಮೆ ಉಮಾಕ್ಕ (ಸಚಿವೆ ಉಮಾಶ್ರೀ) ನೋಡುವ ಆಸೆ..’

–ಐದು ತಿಂಗಳ ಹಿಂದೆ ಬೆನ್ನು ಮೂಳೆ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ರಂಗಭೂಮಿ ಕಲಾವಿದೆ ಮುಮ್ತಾಜ್‌ ಬೇಗಂ ಶೇಖ್‌ (ಲಲಿತಮ್ಮ) ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಬನಶಂಕರಿ ಭೇಟಿ ಮಾಡಿದಾಗ, ಮನದಾಳದ ಆಸೆ ತೋಡಿಕೊಂಡು ಕಣ್ಣೀರಿಟ್ಟಿದ್ದು ಹೀಗೆ.18ನೇ ವಯಸ್ಸಿನಲ್ಲಿಯೇ ವೃತ್ತಿ ರಂಗಭೂಮಿಯತ್ತ ಆಕರ್ಷಿತರಾಗಿ, ಮುಖಕ್ಕೆ ಬಣ್ಣ ಹಚ್ಚಿ ನಟನೆಗೆ ಇಳಿದ ಲಲಿತಮ್ಮ ಎಂಬ ಅಭಿಜಾತ ಕಲಾವಿದೆ, ಐದು ದಶಕ ಕಾಲ ವಿವಿಧ ಪಾತ್ರಗಳಿಂದ ರಂಜಿಸಿ, ರಂಗಪ್ರೇಮಿಗಳ ಪ್ರಶಂಸೆಗೆ ಭಾಜನರಾಗಿದ್ದರು.   ಉಮಾಶ್ರೀ ಜತೆ ಹಲವು ನಾಟಕಗಳಲ್ಲಿ ಅಭಿನಯಿಸಿ ಜನಮನ್ನಣೆ ಗಳಿಸಿದ್ದರು. ಕಷ್ಟದಲ್ಲಿದ್ದಾಗ ಉಮಾಶ್ರೀ ತಮ್ಮ ಮನೆಗೆ ಕರೆದೊಯ್ದು ಮಗಳಂತೆ ಸಾಕಿದ್ದರು. ಮೊಮ್ಮಕ್ಕಳನ್ನು ನೋಡುವ ಸಲುವಾಗಿ ಅವರ ಮನೆಯಿಂದ ಊರಿಗೆ ವಾಪಸ್‌ ಬಂದವರು ಮರಳಿ ಉಮಾಶ್ರೀ ಬಳಿ ಹೋಗಲಿಲ್ಲ. ಅಲ್ಲಿಂದ ಇವರಿಬ್ಬರ ಭೇಟಿ ಆಗಲೇ ಇಲ್ಲ. ‘ನಾನು ತಪ್ಪು ಮಾಡಿದ್ದೀನಿ ಅಂಥ ಕೋಪ ಮಾಡಿಕೊಂಡು ಉಮಾಕ್ಕ ನೋಡಲು ಬರುತ್ತಿಲ್ಲ. ಸಾಯೋ ಮುನ್ನ ಅವರನ್ನು ನೋಡುವ ಆಸೆಯಾಗಿದೆ. ಹೇಗಾದರೂ ಭೇಟಿ ಮಾಡಿಸಿ’ ಎಂದು ಅಧಿಕಾರಿ ಎದುರು ಮೊರೆಯಿಟ್ಟಿದ್ದರು. ಆದರೆ ಅವರ ಕೂಗು ಉಮಾಶ್ರೀಗೆ ಕೇಳುವ ಮುನ್ನವೇ ಕಾಲನ ಕರೆಗೆ ಓಗೊಡಬೇಕಾಯಿತು.2015ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಾಗ, ಅನಾರೋಗ್ಯದ ಕಾರಣ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೂ ಹೋಗಿರಲಿಲ್ಲ. ಉಮಾಶ್ರೀ ಅನುಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ ಅವರು ರೋಣ ಪಟ್ಟಣದ ಆಸ್ಪತ್ರೆಯಲ್ಲಿಯೇ ಲಲಿತಮ್ಮರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು.ನಡೆದು ಬಂದ ಹಾದಿ...

ಗದಗ ಪಟ್ಟಣದ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ ಲಲಿತಮ್ಮ ಅವರ ಮೂಲ ಹೆಸರು ಮುಮ್ತಾಜ್‌ ಬೇಗಂ ಶೇಖ್‌. ಇವರ ದೊಡ್ಡಮನಿಗೆ ಮಕ್ಕಳಿಲ್ಲದ ಕಾರಣ ಲಲಿತಮ್ಮರನ್ನು ದತ್ತು ತೆಗೆದುಕೊಂಡು ಪುಣೆಗೆ ಕರೆದೊಯ್ದು ಸಾಕಿದರು. ಅಲ್ಲಿಯೇ ನಾಟಕದ ಗೀಳು ಹಚ್ಚಿಕೊಂಡ ಲಲಿತಮ್ಮ, 18ನೇ ವಯಸ್ಸಿನಲ್ಲಿಯೇ ಗದಗಿಗೆ ಬಂದು ಹಿರಿಯ ರಂಗಭೂಮಿ ಕಲಾವಿದೆ ಪ್ಲೊರಿನಾ ಬಾಯಿ ಜತೆ ಒಡನಾಟ ಬೆಳೆಸಿಕೊಂಡರು.ಕೊಟ್ಟೂರೇಶ್ವರ ನಾಟ್ಯ ಸಂಘದಲ್ಲಿ ಅಭಿನಯಿಸುವ ಮೂಲಕ ರಂಗಭೂಮಿ ಪ್ರವೇಶ ಮಾಡಿದರು. ಕಿತ್ತೂರ ಚನ್ನಮ್ಮ ನಾಟಕದಲ್ಲಿ ಪಾರ್ವತಿ ಬಾಯಿ, ಸಿಂಧೂರ ಲಕ್ಷ್ಮಣ ನಾಟಕದಲ್ಲಿ ನಟ ಸುಧೀರ, ಗಂಡನ ಆಜ್ಞೆ ನಾಟಕದಲ್ಲಿ ಖಳನಾಯಕ ವಜ್ರಮುನಿ ಜತೆ ಕಥಾನಾಯಕಿಯಾಗಿ ಹಾಗೂ ಉಮಾಶ್ರೀ ಜತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರ ಅವರನ್ನು ಎಲ್ಲರೂ ಲಲಿತಮ್ಮ ಎಂದು ಕರೆಯಲು ಆರಂಭಿಸಿದರು.ಮಲ್ಲಿಕಾರ್ಜುನ ನಾಟ್ಯ ಸಂಘ, ಗುಡಗೇರಿ ಸಂಗಮೇಶ್ವರ ನಾಟ್ಯ ಸಂಘಗಳಲ್ಲಿ ಕಲಾವಿದೆಯಾಗಿ ಸೇವೆ ಸಲ್ಲಿಸಿದ್ದಾರೆ. ಹೇಮರೆಡ್ಡಿ ಮಲ್ಲಮ್ಮ, ಬಂಜೆ ತೊಟ್ಟಿಲು, ಬಸ್‌ ಕಂಡಕ್ಟರ್‌, ಮುದುಕನ ಮದುವೆ, ರತ್ನ ಮಾಂಗಲ್ಯ, ರಕ್ತರಾತ್ರಿ, ಹಳದಿ ಸೇರಿ ಸೇರಿದಂತೆ 300ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದರು. ಪತಿ ಅಬ್ದುಲ್‌ ಖಾದರಸಾಬ್‌ ನಿಧನರಾಗಿ ಹಲವು ವರ್ಷಗಳಾಗಿವೆ. ಇಬ್ಬರು ಗಂಡು ಮಕ್ಕಳು. ಒಬ್ಬ ಮಗ ಎರಡು ಕಾಲ ಕಳೆದುಕೊಂಡು ಅಂಗವಿಕಲನಾಗಿದ್ದಾರೆ, ಮತ್ತೊಬ್ಬ ಮಗ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ನಾಟಕದಲ್ಲಿ ಅವಕಾಶ ಕಡಿಮೆಯಾದಂತೆ ರೋಣ ಪಟ್ಟಣದ ಶಿವಪೇಟೆಯಲ್ಲಿ ಸಣ್ಣ ಮನೆಯೊಂದರಲ್ಲಿ ಅಂಗವಿಕಲ ಮಗನೊಂದಿಗೆ ನೆಲೆಸಿ, ಸರ್ಕಾರ ನೀಡುವ ₹ 100 ಮಾಸಾಶನದಲ್ಲಿಯೇ  ಜೀವನ ನಡೆಸುತ್ತಿದ್ದರು.    ‘ಹಿರಿಯ ರಂಗಕಲಾವಿದರ ಜತೆ ಹಲವು ನಾಟಕಗಳಲ್ಲಿ ನಟಿಸಿ ಹೆಸರು ಮಾಡಿದ್ದರು. ರಾಜ್ಯೋತ್ಸವ ಪ್ರಶಸ್ತಿಯನ್ನು ಆಸ್ಪತ್ರೆಯಲ್ಲಿಯೇ ಪ್ರದಾನ ಮಾಡಲಾಯಿತು. ಆಗ ತಾವು ನಟಿಸಿದ ಕಲಾವಿದರು ಹಾಗೂ ಪಾತ್ರಗಳನ್ನು ನೆನಪಿಸಿಕೊಂಡಿದ್ದರು. ಅವರ ಅಗಲಿಕೆ ರಂಗಭೂಮಿಗೆ ತುಂಬಲಾರದ ನಷ್ಟ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಬನಶಂಕರಿ ಕಂಬನಿ ಮಿಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.