ಶನಿವಾರ, ಜನವರಿ 18, 2020
19 °C
ಮೊಟುಕಾದ ಬರ ಪರಿಸ್ಥಿತಿ ಅಧ್ಯಯನ ಪ್ರವಾಸ: ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆಗೆ ಆದ್ಯತೆ

ನಮಗೆ ಊಟ ಬೇಡ, ನೀರು ಕೊಡಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮಗೆ ಊಟ ಬೇಡ, ನೀರು ಕೊಡಿ...

ಕೋಲಾರ: ನಮಗೆ ಊಟ ಬೇಡ, ಮೊದಲು ನೀರು ಕೊಡಿ...ಬಂಗಾರಪೇಟೆ ತಾಲ್ಲೂಕಿನ ಹುನಕುಂದ ಗ್ರಾಮ ಪಂಚಾಯತಿಗೆ ಸೇರಿದ ಬಡಮಾಕನಹಳ್ಳಿಯಲ್ಲಿ ಸೋಮವಾರ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಂಜುಳಾ ಸೇರಿದಂತೆ ಹಲವು ಮಹಿಳೆಯರು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳ ಮುಂದೆ ಈ ಮಾತುಗಳನ್ನು ಪದೇಪದೇ ಹೇಳಿದರು.ವಿದ್ಯುತ್ ಸಮರ್ಪಕವಾಗಿಲ್ಲ. ಕೊಳವೆಬಾವಿಗಳಲ್ಲಿ ನೀರು ಕಡಿಮೆ­ಯಾಗಿದೆ. ಹಗಲು ರಾತ್ರಿ ನೀರಿಗಾಗಿ ಕಾಯುತ್ತಿದ್ದೇವೆ. ಕೆಲವೇ ಬಿಂದಿಗೆಗಳಷ್ಟು ನೀರು ಮಾತ್ರ ಸಿಕ್ಕುತ್ತಿದೆ. ದಯಮಾಡಿ ನಮಗೆ ನೀರು ಕೊಡಿ ಎಂದು ಈ ಮಹಿಳೆಯರು ಮನವಿ ಮಾಡಿದರು.ಬರಪರಿಸ್ಥಿತಿ ಅಧ್ಯಯನ ತಂಡದಲ್ಲಿದ್ದ ಕೇಂದ್ರ ಕೃಷಿ ನಿರ್ದೇಶನಾ­ಲಯದ ನಿರ್ದೇಶಕ ಜಿ.ಕೆ.ಚೌಧರಿ ಮತ್ತು ಆಯುಕ್ತ ಜಂಟಿ ಕಾರ್ಯದರ್ಶಿ ಆರ್.ಬಿ.­ಸಿಂಹಾ ಅವರ ತಂಡ ಭೇಟಿ ನೀಡಿದ ಬಂಗಾರಪೇಟೆ ಮತ್ತು ಮುಳ­ಬಾಗಲು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇದೇ ಸನ್ನಿವೇಶ ನಿರ್ಮಾಣಗೊಂಡಿತ್ತು. ಬಹಳ ಕಡೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತಿದ್ದುದನ್ನು ಅಧಿಕಾರಿಗಳು ವೀಕ್ಷಿಸಿದರು. ಗ್ರಾಮಸ್ಥರಿಂದ ಮಾಹಿತಿ ಪಡೆದರು. ಬೆಳೆಗಳ ಕಟಾವು ಮುಗಿದಿರುವುದರಿಂದ ಬೆಳೆ ನಷ್ಟದ ಕುರಿತು ರೈತರಿಂದ ಮಾಹಿತಿ ಪಡೆಯುವ ಕಡೆಗೆ ಅಧಿಕಾರಿ­ಗಳು ಆಸಕ್ತಿ ತೋರಲಿಲ್ಲ. ಹೀಗಾಗಿ ಶ್ರೀನಿವಾಸಪುರ ಭೇಟಿಯನ್ನು ರದ್ದುಗೊಳಿಸಿ, ಮುಳಬಾಗಲಿನಿಂದ ನೇರವಾಗಿ ಚಿಕ್ಕಬಳ್ಳಾಪುರಕ್ಕೆ ತೆರಳಿದರು.ಬೆಳಿಗ್ಗೆ 9.45ರ ವೇಳೆಗೆ ನಗರಕ್ಕೆ ಬಂದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಿ.ಕೆ.ರವಿ ಜಿಲ್ಲೆ ಕುಡಿಯುವ ನೀರು, ಕೃಷಿ, ತೋಟಗಾರಿಕೆ ಮತ್ತು ಪಶುಪಾಲನೆ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ತೊಂದರೆಗಳ ಕುರಿತು ಪವರ್ ಪಾಯಿಂಟ್ ಮೂಲಕ ವಿವರಣೆಯನ್ನು ನೀಡಿದರು.ಗಂಗಮ್ಮನ ಪಾಳ್ಯ:  ಬಂಗಾರಪೇಟೆ ತಾಲ್ಲೂಕಿನ ಗಂಗಮ್ಮನ ಪಾಳ್ಯಕ್ಕೆ ಭೇಟಿ ನೀಡಿದ ತಂಡವು ಅಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ­ಯನ್ನು ವೀಕ್ಷಿಸಿತು. ಸ್ಥಳಕ್ಕೆ ಬಂದ ಶಾಸಕ ಎಸ್.ಎನ್.ನಾರಾ­ಯಣಸ್ವಾಮಿ, ಬತ್ತುತ್ತಿರುವ ಅಂತರ್ಜಲ ಮತ್ತು ಮಳೆ ಕೊರತೆ ಪರಿಣಾಮವಾಗಿ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಮಿತಿಮೀರಿದೆ. ರಾಷ್ಟ್ರೀಯ ಪ್ರಾಯೋಗಿಕ ಕುಡಿಯುವ ನೀರು ಭದ್ರತಾ ಯೋಜನೆ ಅಡಿ ಜಿಲ್ಲೆಯ ಮುಳಬಾಗಲು ತಾಲ್ಲೂಕನ್ನು ಆಯ್ಕೆ ಮಾಡಿರುವ ರೀತಿಯಲ್ಲೇ ಬಂಗಾರಪೇಟೆ ತಾಲ್ಲೂಕಿಗೂ ವಿಶೇಷ ಯೋಜನೆ ಅವಕಾಶ ನೀಡಬೇಕು ಎಂದು ಕೋರಿದರು.ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಕಳೆದ ವರ್ಷ ರಾಜ್ಯ ಸರ್ಕಾರಕ್ಕೆ ಕೇಂದ್ರವು ₨ 600 ಕೋಟಿ ಬಿಡುಗಡೆ ಮಾಡಲಾಗಿದೆ. ಅದನ್ನು ಅಗತ್ಯವಿರುವ ಜಿಲ್ಲೆಗಳಿಗೆ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯೇ ಹೊರತು ನಮ್ಮದಲ್ಲ ಎಂದು ನುಡಿದರು.ನಂತರ ಬಡಮಾಕನಹಳ್ಳಿಯಲ್ಲಿ ಕಿರುನೀರು ಸರಬರಾಜು ಘಟ­ಕದ ಮುಂದೆ ಕೊಡಗಳೊಡನೆ ನಿಂತಿದ್ದ ಮಹಿಳೆಯರಿಂದ ಅವರು ಮಾಹಿತಿ ಪಡೆದರು.

ಕೆರೆ ವೀಕ್ಷಣೆ:  ಬೇತಮಂಗಲ ಮುಳಬಾಗಲು ರಸ್ತೆಯಲ್ಲಿ­ರುವ ಟಿ.ಗೊಲ್ಲಹಳ್ಳಿ ಕೆರೆ ಒಣಗಿರುವುದನ್ನು ಅಧಿಕಾರಿಗಳು ವೀಕ್ಷಿಸಿದರು.ಈ ಸಂದರ್ಭದಲ್ಲಿ ವಿವರಣೆ ನೀಡಿದ ಜಿಲ್ಲಾಧಿಕಾರಿ ಡಿ.ಕೆ.ರವಿ, ಜಿಲ್ಲೆಯಲ್ಲಿ ಸರಾಸರಿ ಮಳೆ ಪ್ರಮಾಣದಲ್ಲಿ ಏರುಪೇರಾಗಿಲ್ಲ. ಆದರೆ ಮಳೆ ಎಲ್ಲಿ ಬೇಕೋ ಅಲ್ಲಿ ಬೀಳಲಿಲ್ಲ. ಹೋಬಳಿವಾರು ಮಳೆ ಅಂಕಿ ಅಂಶದ ಪ್ರಕಾರ ಮಳೆಯಾಗಿದೆ. ಆದರೆ ಮಳೆ ಹಂಚಿಕೆ ಸಮರ್ಪಕವಾಗಿಲ್ಲ. ಹೀಗಾಗಿ ಜಿಲ್ಲೆಯ ಕಷ್ಟ ಪರಿಸ್ಥಿತಿಯನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಸಹಾಯಕತೆಯನ್ನು ವ್ಯಕ್ತಪಡಿಸಿದರು.ನಂತರ ನತ್ತ ಗ್ರಾಮದಲ್ಲಿ ಟ್ಯಾಂಕರ್ ನೀರು ಪೂರೈಕೆಯನ್ನು ವೀಕ್ಷಿಸಿದ ತಂಡವು ಸ್ಥಳೀಯರಿಂದ ಮಾಹಿತಿ ಪಡೆದರು. ಅಲ್ಲಿ ಮಾತನಾಡಿದ ಓರ್ವ ಮಹಿಳೆ, ಒಂದು ವರ್ಷದಿಂದ ನಮಗೆ ಟ್ಯಾಂಕರ್ ನೀರು ಪೂರೈಕೆಯಾಗುತ್ತಿದೆ. ಟ್ಯಾಂಕರ್ ನೀರು ಬರದೇ ಹೋದರೆ ನಮ್ಮ ಜೀವನ ಎಲ್ಲಿದೆಯೋ ಅಲ್ಲೇ ನಿಂತು ಬಿಡುತ್ತದೆ ಎಂದು ವಿವರಿಸಿದರು.ಮುಳಬಾಗಲು: ತಾಲ್ಲೂಕಿನ ಊರುಕುಂಟೆ ಮಿಟ್ಟೂರು ಕೆರೆ ಅಂಗಳದಲ್ಲಿ ಕೊರೆದಿರುವ ನೀರು ಸರಬರಾಜು ಕೊಳವೆ ಬಾವಿ ಘಟಕ ಹಾಗೂ ಅಂತರ್ಜಲ ಇಂಗು ಗುಂಡಿಯನ್ನು ತಂಡವು  ಪರಿ­ಶೀಲನೆ ಮಾಡಿತು. ಅಲ್ಲಿಂದ ಬಲ್ಲ ಗ್ರಾಮಕ್ಕೆ ತೆರಳಿ ಟ್ಯಾಂಕರ್ ನೀರು ಪೂರೈಕೆಯನ್ನು ಪರಿಶೀಲಿಸಿತು. ಮುಳಬಾಗಲಿನ ಪ್ರವಾಸಿ ಮಂದಿರದಲ್ಲಿ ಊಟ ಮಾಡಿ, ಪ್ರವಾಸವನ್ನು ಮೊಟಕುಗೊಳಿಸಿ ಚಿಕ್ಕಬಳ್ಳಾಪುರಕ್ಕೆ ಅಧಿಕಾರಿಗಳು ತೆರಳಿದರು.ಉಪವಿಭಾಗಾಧಿಕಾರಿ ಸಿ.ಎನ್.ಮಂಜುನಾಥ್, ಜಿಲ್ಲಾ ಪಂಚಾ­ಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.­ಝುಲ್ಫಿ­ಕರ್ ಉಲ್ಲಾ, ಜಿಲ್ಲಾ ಪಂಚಾಯತಿ ಕಾರ್ಯಪಾಲಕ ಎಂಜಿನಿಯರ್ ದೇವರಾಜ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಿ.ಚಿಕ್ಕಣ್ಣ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಆರ್.­ಚಂದ್ರಶೇಖರ್, ಬಂಗಾರಪೇಟೆ ತಹಶೀಲ್ದಾರ್ ಉಷಾ, ಮುಳ­ಬಾಗಲು ತಹ­ಶೀಲ್ದಾರ್ ರಾಮಮೂರ್ತಿ ಉಪಸ್ಥಿತರಿದ್ದರು.₨ 318 ಕೋಟಿಗೆ ಬೇಡಿಕೆ

ಬರ ಅಧ್ಯಯನ ತಂಡಕ್ಕೆ ಜಿಲ್ಲೆಯ ಪರಿಸ್ಥಿತಿಯನ್ನು ವಿವರಿಸಿದ ಜಿಲ್ಲಾಧಿಕಾರಿ ಡಿ.ಕೆ.ರವಿ, ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ, ಜಾನುವಾರು ರಕ್ಷಣೆ ಹಾಗೂ ಬೆಳೆ ನಷ್ಟ ಪರಿಹಾರಕ್ಕೆಂದು ₨318.86 ಕೋಟಿ ಬೇಕಾಗಿದೆ ಎಂದು ಮನವಿ ಸಲ್ಲಿಸಿದರು. ಕುಡಿಯುವ ನೀರಿಗೆ ₨59.64 ಕೋಟಿ, ಬೆಳೆನಷ್ಟ ಪರಿಹಾರಕ್ಕಾಗಿ ₨257 ಕೋಟಿ ಬೇಕಾಗಿದೆ ಎಂದು ಹೇಳಿದರು.ಬರಗಾಲ: ನಷ್ಟದ ಪ್ರಮಾಣ (ಕೋಟಿಗಳಲ್ಲಿ)

ಕೃಷಿ                           93.48

ತೋಟಗಾರಿಕೆ            146.50

ಮೀನುಗಾರಿಕೆ               17.73

ಒಟ್ಟು                        257.72ಕುಡಿಯುವ ನೀರಿಗೆ ಬೇಕಾದ ಅನುದಾನ (ಕೋಟಿ)

ಗ್ರಾಮೀಣ ಪ್ರದೇಶಕ್ಕೆ     38.14

ನಗರ ಪ್ರದೇಶಕ್ಕೆ          21.49

ಜಾನುವಾರು ರಕ್ಷಣೆಗೆ      1.50

ಪ್ರತಿಕ್ರಿಯಿಸಿ (+)